ಕನ್ನಡಪ್ರಭ ವಾರ್ತೆ ಆನಂದಪುರ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಸೌಮ್ಯ ಕೊಲೆಯಾದ ಯುವತಿ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಆರೋಪಿ ಸೃಜನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿ ಶವ ಹೂತಿಟ್ಟ:ತೀರ್ಥಹಳ್ಳಿಯಲ್ಲಿ ಫೈನಾನ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೃಜನ್ ಹಾಗೂ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಸೌಮ್ಯಾಳ ಪರಿಚಯವಾಗಿದೆ. ಫೈನಾನ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರಿಂದ ಸೃಜನ್ ಆಗಾಗ ಕೊಪ್ಪಗೆ ಹಣ ವಸೂಲಿಗೆ ಹೋಗುತ್ತಿದ್ದ. ಈ ವೇಳೆ ಇಬ್ಬರಿಗೂ ಪರಿಚಯವಾಗಿ ಪ್ರೀತಿಗೆ ತಿರುಗಿದೆ. ಇಬ್ಬರದ್ದು ಬೇರೆ ಬೇರೆ ಸಮುದಾಯವಾಗಿದ್ದರಿಂದ ಸೃಜನ್ ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರು. ಇದೇ ವೇಳೆ ಯುವತಿ ಸೌಮ್ಯ ತೀರ್ಥಹಳ್ಳಿಗೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಜು.2ರಂದು ಕೊಪ್ಪದಿಂದ ತೀರ್ಥಹಳ್ಳಿಗೆ ಬಂದಿದ್ದಳು. ಬಳಿಕ ತನ್ನ ಪ್ರಿಯತಮನನ್ನು ಭೇಟಿ ಮಾಡಿ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಾಳೆ. ನಿಮ್ಮ ಮನೆಗೆ ವಾಪಸ್ ಹೋಗು ಎಂದು ಸೃಜನ್ ಮನವೊಲಿಸಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು, ಜಗಳ ವಿಕೋಪಕ್ಕೆ ಹೋಗಿದೆ. ಆಗ ಸೃಜನ್ ಸೌಮ್ಯ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಯುವತಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಬಳಿಕ ಶವವನ್ನು ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ಹೂತಿಟ್ಟಿದ್ದಾನೆ.
ಮಗಳು ಮನೆಗೆ ಬರದಿದ್ದಕ್ಕೆ ಗಾಬರಿಗೊಂಡ ಪೋಷಕರು ತಮ್ಮ ಮಗಳು ನಾಪತ್ತೆಯಾಗಿರುವ ಬಗ್ಗೆ ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಹುಡುಕಿಕೊಂಡು ಸಾಗರಕ್ಕೆ ಬಂದಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಯುವತಿಯನ್ನು ಕೊಲೆ ಮಾಡಿ ಹೂತಿಟ್ಟಿರುವ ಬಗ್ಗೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.