ಮಂಡ್ಯ : ಸರಗಳ್ಳನೊಬ್ಬನನ್ನು ಬಂಧಿಸಿರುವ ಬೆಳ್ಳೂರು ಪೊಲೀಸ್ ಠಾಣೆ ಅಧಿಕಾರಿಗಳು ಆತನಿಂದ 7 ಲಕ್ಷ ರು. ಮೌಲ್ಯದ ಮೂರು ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ತುಮಕೂರು ಜಿಲ್ಲೆ ಶಿರಾ ತಾಲೂಕು ಭೂತೇಶ್ವರ ನಗರದ ತಿಪ್ಪೇಶ ಅಲಿಯಾಸ್ ಭರತ್ (೩೩) ಬಂಧಿತ ಆರೋಪಿ.
ಈತ ಗಾರೆ ಕೆಲಸ ಮತ್ತು ತಲೆಕೂದಲು ವ್ಯಾಪಾರ ಮಾಡಿಕೊಂಡಿದ್ದನು. ಕೃತ್ಯವೆಸಗಲು ಬಳಸುತ್ತಿದ್ದ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಗಮಂಗಲ ತಾಲೂಕು ವಡ್ಡರಹಳ್ಳಿ ಗ್ರಾಮದ ಚೈತ್ರಾ ಎಂಬುವರು ಆ.15ರಂದು ಬೆಳಗ್ಗೆ 10.30ರ ಸಮಯದಲ್ಲಿ ಡಿಯೋ ಹೋಂಡಾ ಬೈಕ್‌ನಲ್ಲಿ ಬೆಳ್ಳೂರು ಕ್ರಾಸ್ ಕಡೆಗೆ ಬರುತ್ತಿದ್ದಾಗ ಸಮೃದ್ಧಿ ಹೋಟೆಲ್ ಎದುರು ಹಿಂದಿನಿಂದ ಬಂದ ಬೈಕ್ ಸವಾರ ಚೈತ್ರಾರವರ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುವುದಾಗಿ ದೂರು ನೀಡಿದ್ದರು.
ಆರೋಪಿಯ ಪತ್ತೆಗೆ ಪೊಲೀಸರು ತಂಡ ರಚಿಸಿಕೊಂಡು ತನಿಖೆಗಿಳಿದಾಗ ತಿಪ್ಪೇಶ್ ಆರೋಪಿ ಎಂಬುದು ಕಂಡುಬಂದಿತು. ಈತ ಬೆಳ್ಳೂರು ಸೇರಿದಂತೆ ಹೊಸಕೋಟೆ ಪೊಲೀಸ್ ಠಾಣೆಯ ಎರಡು ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಬಂಧಿತನಿಂದ 69 ಗ್ರಾಂ ತೂಕದ ಮೂರು ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 7 ಲಕ್ಷ ರು.ಗಳಾಗಿದೆ.
ನಾಗಮಂಗಲ ಪಿಎಸ್‌ಐ ಕೆ.ಎಸ್.ನಿರಂಜನ್ ನೇತೃತ್ವದಲ್ಲಿ ಬೆಳ್ಳೂರು ಪಿಎಸ್‌ಐ ವೈ.ಎನ್.ರವಿಕುಮಾರ್, ಸಿಬ್ಬಂದಿ ಪ್ರಶಾಂತ್‌ಕುಮಾರ್, ಇಂದ್ರಕುಮಾರ್, ಮಧುಕುಮಾರ್, ರವಿಕಿರಣ್, ಲೋಕೇಶ್, ಶಂಕರ್‌ನಾಯ್ಕ್, ದಿನೇಶ, ಕಿರಣ್‌ಕುಮಾರ್, ಪ್ರಕಾಶ್, ಸಿದ್ದಪ್ಪ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.
ಮಹಿಳೆ ನಾಪತ್ತೆ
ಮಂಡ್ಯ: ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮ ನಿವಾಸಿ ಮಂಜುಳ (57) ಎಂಬುವವರು ಕಾಣೆಯಾಗಿದ್ದಾರೆ ಎಂದು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾಗಿರುವ ಮಹಿಳೆಯು 5 ಅಡಿ ಎತ್ತರ, ಕಪ್ಪು ಮೈ ಬಣ್ಣ, ಕಪ್ಪು, ಬಿಳಿ ಮಿಶ್ರಿತ ತಲೆಕೂದಲು ಹೊಂದಿದ್ದು, ಅವರ ಬಲ ಕೈಯಲ್ಲಿ ಶಿವಣ್ಣ ಎಂದು ಹಸಿರು ಹಚ್ಚೆ ಇರುತ್ತದೆ. ಮನೆಯಿಂದ ಹೋರಡುವಾಗ ತಿಳಿ ಗುಲಾಬಿ ಬಣ್ಣದ ಸೀರೆ ಧರಿಸಿರುತ್ತಾರೆ. ಕಾಣೆಯಾದ ಮಹಿಳೆಯ ಸುಳಿವು ಸಿಕ್ಕಲ್ಲಿ ದೂ.ಸಂ: 08236-255132/9480804874 /9480804858 /9480804800 ಅನ್ನು ಸಂಪರ್ಕಿಸಬಹುದು ಎಂದು ಪಾಂಡವಪುರ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.