ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ತಮಗೆ ರಸ್ತೆಯಲ್ಲಿ ಚಮಕಾಯ್ಸಿದ್ದಕ್ಕೆ ವಿದೇಶಿ ವಿದ್ಯಾರ್ಥಿಗೆ ಬೆದರಿಸಿ ಬೈಕ್ ಹಾಗೂ ಹಣ ಸುಲಿಗೆ ಮಾಡಿ ಪರಾರಿಯಾಗಿದ್ದ ರೌಡಿ ಸೇರಿದಂತೆ ಮೂವರು ಕಿಡಿಗೇಡಿಗಳನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.ರಾಜೇಂದ್ರ ನಗರದ ವಿಕ್ರಂ ಅಲಿಯಾಸ್ ಪಡಿಯಪ್ಪ, ಅಜಿತ್ ಅಲಿಯಾಸ್ ಬೆಂಡು ಹಾಗೂ ಫಿಲಿಫ್ಸ್ ಜಾರ್ಜ್ ಬಂಧಿತರಾಗಿದ್ದು, ಆರೋಪಿಗಳಿಂದ ಎರಡು ಬೈಕ್‌ಗಳು, ನಾಲ್ಕು ಮೊಬೈಲ್ ಹಾಗೂ ಹಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ರಾಜೀವ್ ಗಾಂಧಿ ಸರ್ಕಲ್ ಬಳಿ ಸೂಡಾನ್ ದೇಶದ ಇಸ್ಮಾಯಿಲ್‌ಗೆ ಬೆದರಿಸಿ ರೌಡಿ ಪಡಿಯಪ್ಪ ತಂಡ ಈ ಕೃತ್ಯ ಎಸಗಿತ್ತು. ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಇನ್ಸ್‌ಪೆಕ್ಟರ್ ಬಾಲಕೃಷ್ಣ ನೇತೃತ್ವದ ತಂಡ ಬಂಧಿಸಿದೆ.
ಈ ಆರೋಪಿಗಳ ಪೈಕಿ ಪಡಿಯಪ್ಪ ಹಾಗೂ ಅಜಿತ್ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಅಶೋಕನಗರ ಠಾಣೆಯಲ್ಲಿ ಪಡಿಯಪ್ಪನ ವಿರುದ್ಧ ರೌಡಿಪಟ್ಟಿ ತೆರೆಯಲಾಗಿದೆ. ಈತನ ವಿರುದ್ಧ ಕೊಲೆ ಪ್ರಕರಣ ಇದ್ದರೆ, ಅಜಿತ್ ಮೇಲೆ ದರೋಡೆಗೆ ಸಿದ್ಧತೆ ಪ್ರಕರಣ ಇದೆ. ಮುಂಜಾನೆ ಹಾಗೂ ರಾತ್ರಿ ವೇಳೆ ಜನರಿಗೆ ಬೆದರಿಸಿ ಸುಲಿಗೆಗೆ ಈ ಗ್ಯಾಂಗ್ ಕುಖ್ಯಾತಿ ಪಡೆದಿದೆ.ಎಂ.ಎಸ್. ಪಾಳ್ಯದಲ್ಲಿ ನೆಲೆಸಿರುವ ಸೂಡಾನ್ ದೇಶದ ಇಸ್ಮಾಯಿಲ್, ನಗರದ ಖಾಸಗಿ ಕಾಲೇಜಿನ ಪದವಿ ಓದುತ್ತಿದ್ದ. ಆದರೆ ಅಂತಿಮ ವರ್ಷದಲ್ಲಿ ಒಂದು ವಿಷಯದಲ್ಲಿ ಆತ ಅನುತ್ತೀರ್ಣನಾಗಿದ್ದಾನೆ. ಅ.8 ರಂದು ರಾತ್ರಿ ಕೋರಮಂಗಲದಲ್ಲಿರುವ ತನ್ನ ಸ್ನೇಹಿತನನ್ನು ಭೇಟಿಯಾಗಿ ಆತ ಮನೆಗೆ ಮರಳುತ್ತಿದ್ದ. ಆಗ ಮಾರ್ಗ ಮಧ್ಯೆ ಎದುರಿಗೆ ಬೈಕ್‌ನಲ್ಲಿ ತ್ರಿಬಲ್ ರೈಡ್ ಬಂದ ರೌಡಿ ಪಡಿಯಪ್ಪ ತಂಡವನ್ನು ನೋಡಿ ಗಾಬರಿಯಿಂದ ಚಮಕಾಯಿಸಿದ್ದಾನೆ.
ಇದರಿಂದ ಕೆರಳಿದ ರೌಡಿ ಪಡಿಯಪ್ಪ, ತಮಗೆ ಚಮಕ್ ಕೊಟ್ಟ ವಿದೇಶಿ ವಿದ್ಯಾರ್ಥಿಗೆ ಬೈಕ್ ನಿಲ್ಲಿಸುವಂತೆ ಸೂಚಿಸಿದ್ದಾನೆ. ಆಗ ಭೀತಿಗೊಂಡ ವಿದ್ಯಾರ್ಥಿ ಕೂಡಲೇ ಅತಿವೇಗವಾಗಿ ಬೈಕ್ ಚಲಾಯಿಸಿದ್ದಾನೆ. ಆಗ ಆತನನ್ನು ಆರೋಪಿಗಳು ಬೆನ್ನತ್ತಿದ್ದಾರೆ. ತನ್ನ ಬೆನ್ನಟ್ಟಿ ಬಂದ ರೌಡಿ ಪಡೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ರಾಜೀವ್ ಗಾಂಧಿ ಸರ್ಕಲ್ ಬಳಿ ಬೈಕ್‌ನಿಂದ ನಿಯಂತ್ರಣ ತಪ್ಪಿ ವಿದ್ಯಾರ್ಥಿ ಕೆಳಗೆ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಹಿಡಿದು ಬೆದರಿಸಿದ ಆರೋಪಿಗಳು, ಆತನಿಂದ ಆನ್‌ಲೈನ್ ಮೂಲಕ 11 ಸಾವಿರ ರು. ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಆತನ ಬೈಕ್ ತೆಗೆದುಕೊಂಡು ಪರಾರಿಯಾಗಿದ್ದಾರೆ.ಈ ಬಗ್ಗೆ ಶೇಷಾದ್ರಿಪುರ ಠಾಣೆಗೆ ಸಂತ್ರಸ್ತ ವಿದ್ಯಾರ್ಥಿ ದೂರು ನೀಡಿದ್ದ. ಕೊನೆಗೆ ಬೈಕ್ ನೋಂದಣಿ ಸಂಖ್ಯೆ ಹಾಗೂ ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆ ವಿವರ ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.