ಮೂವರು ಬೈಕ್‌ ಕಳ್ಳರು ಬಂಧನ : ₹35 ಲಕ್ಷದ 25 ವಾಹನ ಜಪ್ತಿ

KannadaprabhaNewsNetwork |  
Published : Apr 28, 2025, 01:35 AM ISTUpdated : Apr 28, 2025, 05:52 AM IST
Mahadevpura | Kannada Prabha

ಸಾರಾಂಶ

ನಗರದ ವಿವಿಧೆಡೆ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರು ಹಾಗೂ ಕದ್ದ ದ್ವಿಚಕ್ರ ವಾಹನ ಖರೀದಿಸುತ್ತಿದ್ದ ವ್ಯಕ್ತಿ ಸೇರಿ ಮೂವರು ಆರೋಪಿಗಳನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದು, ₹35 ಲಕ್ಷ ಮೌಲ್ಯದ 25 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

  ಬೆಂಗಳೂರು : ನಗರದ ವಿವಿಧೆಡೆ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರು ಹಾಗೂ ಕದ್ದ ದ್ವಿಚಕ್ರ ವಾಹನ ಖರೀದಿಸುತ್ತಿದ್ದ ವ್ಯಕ್ತಿ ಸೇರಿ ಮೂವರು ಆರೋಪಿಗಳನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದು, ₹35 ಲಕ್ಷ ಮೌಲ್ಯದ 25 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಪಾದರಾಯನಪುರದ ಮೊಹಮ್ಮದ್‌ ಜೈನ್‌ (24), ಗುಟ್ಟೆ ವೈಟ್‌ಫೀಲ್ಡ್‌ನ ವರುಣ್‌ ಕುಮಾರ್‌ (24) ಹಾಗೂ ಹಾವೇರಿ ಜಿಲ್ಲೆ ಕರ್ಜಗಿಯ ಮಂಜುನಾಥ(33) ಬಂಧಿತರು. ಇತ್ತೀಚೆಗೆ ಮಹದೇವಪುರ ಸಮೀಪದ ಉದಯನಗರ ನಿವಾಸಿಯೊಬ್ಬರು ರಾತ್ರಿ ಮನೆ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವಾಗಿದ್ದ ಸಂಬಂಧ ನೀಡಲಾದ ದೂರಿನ ಮೇರೆಗೆ ತನಿಖೆ ನಡೆಸಿದ್ದು, ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ವೈಟ್‌ಫೀಲ್ಡ್‌ ಸಮೀಪದ ಓ ಫಾರಂ ರಸ್ತೆಯಲ್ಲಿ ದ್ವಿಚಕ್ರ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.

ಕದ್ದ ಬೈಕ್‌ ಖರೀದಿದಾರನ ಬಂಧನ:

ಹೆಚ್ಚಿನ ವಿಚಾರಣೆ ವೇಳೆ ಆರೋಪಿಗಳು ನಗರದ ವಿವಿಧೆಡೆ ಕದ್ದ ದ್ವಿಚಕ್ರಗಳನ್ನು ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮದ ಮಂಜುನಾಥಗೆ ಮಾರಾಟ ಮಾಡುತ್ತಿದ್ದಾಗಿ ಹೇಳಿದ್ದಾರೆ. ಕಳವು ಮಾಡಲಾದ ವಾಹನ ಅಂತ ಗೊತ್ತಿದ್ದರೂ ಕಡಿಮೆ ಬೆಲೆಗೆ ಖರೀದಿಸುತ್ತಿದ್ದ ಮಂಜುನಾಥನ್‌ನನ್ನು ಬಂಧಿಸಿ, ಆತನಿಂದ 12 ದ್ವಿಚಕ್ರಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, ಆರೋಪಿಗಳು ಸಿಂಗಯ್ಯನಪಾಳ್ಯದ ರೈಲ್ವೆ ಸಮಾನಾಂತರ ರಸ್ತೆ ಪಕ್ಕದ ಖಾಲಿ ಜಾಗ ಹಾಗೂ ಡೀಸೆಲ್‌ ಶೆಡ್‌ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ 12 ದ್ವಿಚಕ್ರಗಳನ್ನು ಜಪ್ತಿ ಮಾಡಲಾಗಿದೆ.

22 ಬೈಕ್‌ ಕಳವು ಪ್ರಕರಣ ಪತ್ತೆ:

ಆರೋಪಿಗಳ ಬಂಧನದಿಂಧ ಮಹದೇವಪುರ ಠಾಣಾ ವ್ಯಪ್ತಿಯ ಆರು, ಎಚ್‌ಎಸ್‌ಆರ್‌ ಲೇಔಟ್‌ ಮೂರು, ವೈಟ್‌ಫೀಲ್ಡ್‌ ಎರಡು, ಎಚ್‌ಎಎಲ್‌, ಸುಬ್ರಮಣ್ಯನಗರ, ಆನೇಕಲ್‌, ವರ್ತೂರು, ಗೋವಿಂದಪುರ, ಕುಮಾರಸ್ವಾಮಿ ಲೇಔಟ್‌, ಆವಲಹಳ್ಳಿ, ಬಾಗಲೂರು, ಜೆ.ಪಿ.ನಗರ, ಆವಲಹಳ್ಳಿ, ಮಾರತಹಳ್ಳಿ ಹಾಗೂ ಮೈಸೂರು ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ತಲಾ ಒಂದು ಸೇರಿ ಒಟ್ಟು 22 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಉಳಿದ ಮೂರು ದ್ವಿಚಕ್ರ ವಾಹನಗಳ ವಾರಸುದಾರರ ಪತ್ತೆಗೆ ತನಿಖೆ ಮುಂದುವರೆದಿದೆ. ಸದ್ಯ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಕೇಕ್ ಕಾರ್ಖಾನೆಯಲ್ಲಿದ್ದ ಲಿಫ್ಟ್‌ಗೆ ಸಿಲುಕಿ ಬಿಹಾರದ ಕಾರ್ಮಿಕ ದುರ್ಮರಣ
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ವ್ಯಕ್ತಿ ಸಾವು