ಅಂಗಡಿ-ಪ್ರಾವಿಜನ್‌ ಸ್ಟೋರ್‌ಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಮೂವರ ಬಂಧನ: ₹3.30 ಲಕ್ಷ ವಿದೇಶಿ ಕರೆನ್ಸಿ ಜಪ್ತಿ

KannadaprabhaNewsNetwork |  
Published : Sep 24, 2024, 01:56 AM ISTUpdated : Sep 24, 2024, 06:11 AM IST
ಕಳ್ಳ | Kannada Prabha

ಸಾರಾಂಶ

ಬೆಂಗಳೂರು ಸೇರಿದಂತೆ ನೆರೆ ರಾಜ್ಯಗಳಲ್ಲಿ ರಾತ್ರಿ ವೇಳೆ ಅಂಗಡಿಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ₹3.30 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಗಳು ಹಾಗೂ ಎರಡು ಕಾರುಗಳನ್ನು ಜಪ್ತಿ ಮಾಡಿದ್ದಾರೆ.  

  ಬೆಂಗಳೂರು : ಬೆಂಗಳೂರು ಸೇರಿದಂತೆ ನೆರೆ ರಾಜ್ಯಗಳಲ್ಲಿ ರಾತ್ರಿ ವೇಳೆ ಅಂಗಡಿ-ಪ್ರಾವಿಜನ್‌ ಸ್ಟೋರ್‌ಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿ, ₹3.30 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಗಳು ಹಾಗೂ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಮೂಲದ ಅನಿಲ್‌ ಕುಮಾರ್‌, ಗಂಗಾಧರ್‌ ಹಾಗೂ ದರ್ಶನ್‌ ಬಂಧಿತರು. ಇತ್ತೀಚೆಗೆ ದುಷ್ಕರ್ಮಿಗಳು ರಾಜಾಜಿನಗರದ ಪ್ರಾವಿಷನ್‌ ಸ್ಟೋರ್‌ವೊಂದರ ರೋಲಿಂಗ್‌ ಶೆಟರ್‌ ಬೀಗ ಮುರಿದು ನಗದು, ವಿದೇಶಿ ಕರೆನ್ಸಿ ಸೇರಿದಂತೆ ಕೆಲ ವಸ್ತುಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಇಬ್ಬರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವನಹಳ್ಳಿ ಬಳಿ ಬಂಧನ:

ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ ಸಿಕ್ಕ ಸುಳಿವು ಹಾಗೂ ಭಾತ್ಮೀದಾರರು ನೀಡಿದ ಖಚಿತ ಮಾಹಿತಿ ಮೇರೆಗೆ ದೇವನಹಳ್ಳಿ ಸಮೀಪದ ಮೇಳಕೋಟೆಯಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳವು ಮಾಡಿದ್ದು ತಾವೇ ಎಂದು ತಪ್ಪೊಪ್ಪಿಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಗೌರಿ ಬಿದನೂರಿನ ತಾಗೇನಹಳ್ಳಿಯ ಇಟ್ಟಿಗೆ ಫ್ಯಾಕ್ಟರಿ ಬಳಿ ನಿಲ್ಲಿಸಿದ್ದ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಕಾರುಗಳ ಪರಿಶೀಲನೆ ವೇಳೆ ಪತ್ತೆಯಾದ ವಿದೇಶಿ ಕರೆನ್ಸಿಗಳನ್ನು ವಶಕ್ಕೆ ಪಡೆಯಲಾಗಿದೆ.

ಗೋವಾ, ಕಡಪದಲ್ಲಿ ಕರೆನ್ಸಿ ಎಕ್ಸ್‌ಚೇಂಜ್‌

ಆರೋಪಿಗಳು ಹಲವು ವರ್ಷಗಳಿಂದ ನಗರ ಹಾಗೂ ನೆರೆ ರಾಜ್ಯಗಳಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾರೆ. ಅಂಗಡಿಗಳು, ಪ್ರಾವಿಷನ್‌ ಸ್ಟೋರ್‌ಗಳ ಬೀಗ ಮುರಿದು ಕಳವು ಮಾಡುತ್ತಿದ್ದರು. ವಿದೇಶಿ ಕರೆನ್ಸಿಗಳನ್ನು ಗೋವಾ ಮತ್ತು ಕಡಪಕ್ಕೆ ತೆಗೆದುಕೊಂಡು ಹೋಗಿ ಬ್ರೋಕರ್‌ ಮೂಲಕ ಎಕ್ಸ್‌ಚೇಂಜ್‌ ಮಾಡುತ್ತಿದ್ದರು. ಈ ಹಿಂದೆ ಸಹ ಕೆಲ ಪ್ರಕರಣಗಳಲ್ಲಿ ಆರೋಪಿಗಳು ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದರು. ಜಾಮೀನು ಪಡೆದು ಹೊರಗೆ ಬಂದ ಬಳಿಕವೂ ತಮ್ಮ ಕಳವು ಚಾಳಿ ಮುಂದುವರೆಸಿದ್ದರು.

12 ಪ್ರಕರಣ ಪತ್ತೆ:

ಆರೋಪಿಗಳ ಬಂಧನದಿಂದ ಸುಬ್ರಹ್ಮಣ್ಯನಗರ, ಕೊಡಿಗೇಹಳ್ಳಿ, ಆರ್‌.ಆರ್‌.ನಗರ ತಲಾ ಒಂದು, ಆಂಧ್ರಪ್ರದೇಶದ ಕರ್ನೂಲ್‌ ಠಾಣೆಯಲ್ಲಿ ಮೂರು, ತೆಲಂಗಾಣದ ಮೊಯಿನಾಬಾದ್‌ ಠಾಣೆ ಒಂದು, ಶಾದಾಬಾದ್‌ ಠಾಣೆ ಮೂರು, ಶಾದ್‌ನಗರ ಠಾಣೆಯಲ್ಲಿ ದಾಖಲಾಗಿದ್ದ ಎರಡು ಸೇರಿದಂತೆ ಒಟ್ಟು 12 ಕನ್ನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ತಾಯಿಗೆ ಕ್ಷಮೆ ಕೋರಿ ಪತ್ರ ಬರೆದಿಟ್ಟು ನೇ*ಗೆ ಶರಣಾದ ಕನ್ನಡ ಗಾಯಕಿ ಸವಿತಾ ಮಗ
ಐಎಸ್‌ಡಿ ಕರೆಗಳ ಗೋಲ್‌ಮಾಲ್‌ : ಕೋಟ್ಯಂತರ ರು. ವಂಚಿಸಿದ್ದ ಇಬ್ಬರ ಬಂಧನ