ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿ ಬೆಂಕಿ ಹತ್ತಿಕೊಂಡು ಕಾರಿನಲ್ಲಿದ್ದ ಹುಣಸೂರು ತಾಲೀಕಿನ ಮೂಕನಹಳ್ಳಿ ಚಂದ್ರಶೇಖರ್ (30) ಸಜೀವ ದಹನವಾಗಿದ್ದಾರೆ. ಶ್ರೀರಂಗಪಟ್ಟಣ ಹಾಗೂ ಕೆಆರ್‌ಎಸ್ ಮಾರ್ಗವಾಗಿ ಹುಣಸೂರು ಕಡೆಗೆ ಹೋಗುತ್ತಿದ್ದ ಕಾರಿಗೆ, ಮೈದನಹಳ್ಳಿಯಿಂದ ಶ್ರೀರಂಗಪಟ್ಟಣಕ್ಕೆ ತೆರಳುತ್ತಿದ್ದ ಟಿಪ್ಪರ್ ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಕಾರಿನ ಮುಂದಿನ ಭಾಗ ಜಜ್ಜಿ ಬೆಂಕಿ ಕಾಣಿಸಿಕೊಂಡಿದೆ. ಜೊತೆಗೆ ಗುದ್ದಿದ ಲಾರಿ ಸಹ ಕಾರಿಗೆ ಅಂಟಿಕೊಂಡಿದೆ.
ಕಾರಿನಿಂದ ಪೆಟ್ರೋಲ್ ಹಾಗೂ ಆಯಿಲ್ ಸೋರಿಕೆಯಿಂದ ಹೆಚ್ಚಿನ ಬೆಂಕಿ ಆವರಿಸಿಕೊಂಡಿದೆ. ಸ್ಥಳೀಯರು ಆತನನ್ನು ಹೊರತರುವ ಪ್ರಯತ್ನ ಮಾಡಿದ್ದರೂ ಬೆಂಕಿ ಜ್ವಾಲೆ ಎತ್ತರಕ್ಕೆ ಏರಿದ್ದರಿಂದ ಕಾರಿನಲ್ಲಿದ್ದ ವ್ಯಕ್ತಿ ಹೊರ ಬರಲಾಗದೆ ಕಾರಿನಲ್ಲಿ ಸಜೀವವಾಗಿ ದಹನಗೊಂಡು ಮೃತಪಟ್ಟಿದ್ದಾರೆ.ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದು, ಸ್ಥಳೀಯರು ಅಗ್ನಿ ಶಾಮಕದಳ ಹಾಗೂ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಅಷ್ಟರಲ್ಲಿ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಅಗ್ನಿ ಶಾಮಕ ಸಿಬ್ಬಂದಿ ಉರಿಯುವ ಬೆಂಕಿ ಜ್ವಾಲೆಗೆ ನೀರು ಹಾಕಿ ನಂದಿಸಲು ಎಷ್ಟೇ ಪ್ರಯತ್ನಿಸಿದರೂ ನಿಲ್ಲದ ಬೆಂಕಿ ಜ್ವಾಲೆಯಿಂದ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಲಾರಿ ಮುಂದಿನ ಭಾಗವು ಸಹ ಸುಟ್ಟು ಕರಕಲಾಗಿದೆ. ಶ್ರೀರಂಗಪಟ್ಟಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳಿ ಪರಿಶೀಲಿಸಿ ಮೃತ ವ್ಯಕ್ತಿ ಶವವನ್ನು ಹೊರ ತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.