ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

KannadaprabhaNewsNetwork |  
Published : Mar 04, 2026, 04:15 AM IST
ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಸ್ತೆಯ ಫುಟ್‌ಪಾತ್‌ನಲ್ಲಿ ಒಣ ಎಲೆಗಳ ರಾಶಿ. | Kannada Prabha

ಸಾರಾಂಶ

ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ಕುಖ್ಯಾತ ಖದೀಮರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ಕುಖ್ಯಾತ ಖದೀಮರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಸಿದ್ದು ಅಲಿಯಾಸ್‌ ನಾಗರಾಜ್‌, ಜೆ.ಪಿ ನಗರದ ಮುನಿರಾಜು ಅಲಿಯಾಸ್‌ ಚಿನ್ನಪ್ಪ ಬಂಧಿತರಾಗಿದ್ದು, ಆರೋಪಿಗಳಿಂದ 711 ಗ್ರಾಂ ಚಿನ್ನಾಭರಣ ಹಾಗೂ 19.5 ಲಕ್ಷ ರು. ನಗದು ಸೇರಿದಂತೆ 1.40 ಕೋಟಿ ರು. ಮೌಲ್ಯದ ವಸ್ತುಗಳು ಜಪ್ತಿಯಾಗಿವೆ.

ಇತ್ತೀಚೆಗೆ ಪ್ರಕೃತಿ ಲೇಔಟ್‌ನಲ್ಲಿ ಮನೆಯೊಂದಕ್ಕೆ ಸಿದ್ದು ಗ್ಯಾಂಗ್ ಕನ್ನ ಹಾಕಿತ್ತು. ಈ ಕೃತ್ಯದ ತನಿಖೆಗಿಳಿದ ಪೊಲೀಸರು ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸಿದ್ದು ವಿರುದ್ಧ ಕಠಿಣ ಕ್ರಮ:

ಕಳೆದೊಂದು ದಶಕಗಳಿಂದ ಮಳವಳ್ಳಿಯ ಸಿದ್ದು ಅಕ್ರಮ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದು, ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನಕ್ಕೆ ಆತ ಕುಖ್ಯಾತಿ ಪಡೆದಿದ್ದಾನೆ. ಈತನ ವಿರುದ್ಧ ಬೆಂಗಳೂರು ಸೇರಿ ವಿವಿಧೆಡೆ 31 ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಜೈಲೂಟ ಸವಿದಿದ್ದಾನೆ. ಐದು ವರ್ಷಗಳ ಹಿಂದೆ ಜೈಲಿನಿಂದ ಹೊರ ಬಂದ ಬಳಿಕ ಆತ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಕೆಲ ತಿಂಗಳಿಂದ ತನ್ನ ಸಹಚರರ ಜತೆ ನಗರ ಹೊರವಲಯದಲ್ಲಿ ಮನೆ ಕಳ್ಳತನ ಕೃತ್ಯಗಳನ್ನು ಎಸಗುತ್ತಿದ್ದ. ಪದೇ ಪದೇ ಅಪರಾಧ ಕೃತ್ಯಗಳನ್ನು ಎಸಗುತ್ತಿರುವ ಆರೋಪಿ ಸಿದ್ದನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೂಚಿಸಿದ್ದಾರೆ.

ಮತ್ತೆ ಮೂವರ ಸೆರೆ

ಹೆಬ್ಬಗೋಡಿ ಠಾಣೆ ಪೊಲೀಸರ ಬೇರೊಂದು ಕಾರ್ಯಾಚರಣೆಯಲ್ಲಿ ಮೂವರು ಮನೆಗಳ್ಳರು ಸಿಕ್ಕಿಬಿದ್ದಿದ್ದಾರೆ.

ಆನೇಕಲ್‌ ತಾಲೂಕಿನ ಪಾಂಡಿರಾಜ್‌, ಆರ್‌.ಎಸ್‌ ಮಂಜುನಾಥ್‌, ವಿಲ್ಸನ್‌ ಗಾರ್ಡನ್‌ ಪೃಥ್ವಿ ಬಂಧಿತರಾಗಿದ್ದು, ಆರೋಪಿಗಳಿಂದ 220 ಗ್ರಾಂ ಚಿನ್ನಾಭರಣ ಹಾಗೂ 3.391 ಕೆಜಿ ಬೆಳ್ಳಿ ಸೇರಿದಂತೆ 44.08 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ತಮ್ಮ ಪರಿವಾರ ಸಮೇತ ಘಟ್ಟಹಳ್ಳಿಯ ನಿವಾಸಿಯೊಬ್ಬರು ಕಾಳಿ ಯಾತ್ರೆಗೆ ಹೋಗಿದ್ದರು. ಆಗ ಅವರ ಮನೆಯ ಬೀಗ ಮುರಿದು ದುಷ್ಕರ್ಮಿಗಳು ಚಿನ್ನಾಭರಣ ದೋಚಿದ್ದರು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಬೆರಳಚ್ಚು ಸೇರಿದಂತೆ ತಾಂತ್ರಿಕ ಸುಳಿವು ಆಧರಿಸಿ ಆನೇಕಲ್ ಗ್ಯಾಂಗ್ ಅನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಬೆಂಗಳೂರಲ್ಲಿ ಮೊಬೈಲ್ ಕದಿಯಲು ದೆಹಲಿಯಿಂದ ವಿಮಾನದಲ್ಲಿ ಬರುತ್ತಿದ್ದ ಚಾಲಾಕಿಗಳ ಬಂಧನ
ಬೆಂಗಳೂರು ನಗರದಲ್ಲಿ ಎಲೆಗಳ ಕಸದ ರಾಶಿಗೆ ಬೆಂಕಿ: ಸುತ್ತಲಿನ ನಿವಾಸಿಗಳಿಗೆ ತಲೆನೋವು