ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆಲ ದಿನಗಳಿಂದ ಹೆಬ್ಬಗೋಡಿಯ ಭವಾನಿ ರಸ್ತೆಯಲ್ಲಿ ಸೈಬರ್ ಕೆಫೆ ತೆರೆದು ನಕಲಿ ಸರ್ಕಾರಿ ದಾಖಲೆ ದಂಧೆ ನಡೆಸುತ್ತಿರುವ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ. ಯಶವಂತ್ ಪಿಯುಸಿ ಹಾಗೂ ರಘುವೀರ್ 10ನೇ ತರಗತಿ ಓದಿದ್ದು, ಹಣದಾಸೆಗೆ ನಕಲಿ ದಾಖಲೆ ಸೃಷ್ಟಿಸುವ ಕೃತ್ಯಕ್ಕಿಳಿದು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವಂತಾಗಿದೆ.
ಕಳೆದ ಆರು ತಿಂಗಳಿಂದ ಭವಾನಿ ರಸ್ತೆಯಲ್ಲಿ ರಾಘವೇಂದ್ರ ಸೈಬರ್ ಕೆಫೆ ಹೆಸರಿನಲ್ಲಿ ಆರೋಪಿಗಳು ಅಂಗಡಿ ತೆರೆದಿದ್ದರು. ಖಾಸಗಿ ಕಂಪನಿಗಳಿಗೆ ಸೇರಲು ಕೆಲವರಿಗೆ ಜನ್ಮ ದಿನಾಂಕ ತಿದ್ದುಪಡಿ ಹಾಗೂ ಕೆಲವರಿಗೆ ಓಯೋ ಲಾಡ್ಜ್‌ಗಳಲ್ಲಿ ಓಯೋ ರೂಮ್ ತೆರೆಯಲು ನಕಲಿ ಆಧಾರ್ ಕಾರ್ಡ್ ವಿತರಿಸುತ್ತಿದ್ದರು. ಪ್ರತಿ ನಕಲಿ ಆಧಾರ್ ಕಾರ್ಡ್ ಹಾಗೂ ಅಂಕಪಟ್ಟಿಗೆ 2 ರಿಂದ 10 ಸಾವಿರ ರು. ವರೆಗೆ ಆರೋಪಿಗಳು ವಸೂಲಿ ಮಾಡಿದ್ದರು. ಈ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.