ನಕಲಿ ಕಾಲ್ ಸೆಂಟರ್‌ ಸ್ಥಾಪಿಸಿ ಅಮೆರಿಕನ್ನರಿಗೆ ವಂಚಿಸಿದ ಇಬ್ಬರು 10 ದಿನ ಕಸ್ಟಡಿಗೆ

KannadaprabhaNewsNetwork |  
Published : May 24, 2026, 02:00 AM IST
ಪರಮೇಶ್ವರ್‌ | Kannada Prabha

ಸಾರಾಂಶ

ನಗರದಲ್ಲಿ ನಾಲ್ಕು ನಕಲಿ ಕಾಲ್‌ ಸೆಂಟರ್‌ ತೆರೆದು ಅಮೇರಿಕಾದ ಪ್ರಜೆಗಳನ್ನು ವಂಚಿಸುತ್ತಿದ್ದ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು 10 ದಿನಗಳ ಕಾಲ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ನಾಲ್ಕು ನಕಲಿ ಕಾಲ್‌ ಸೆಂಟರ್‌ ತೆರೆದು ಅಮೇರಿಕಾದ ಪ್ರಜೆಗಳನ್ನು ವಂಚಿಸುತ್ತಿದ್ದ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು 10 ದಿನಗಳ ಕಾಲ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಆರೋಪಿಗಳಾದ ದೆಹಲಿ ಮೂಲದ ಪ್ರಶಾಂತ್‌ ಮತ್ತು ಉತ್ತರ ಪ್ರದೇಶ ಮೂಲದ ಆಕಾಶ್‌ ಗುಪ್ತ ಎಂಬುವರನ್ನು ಸೈಬರ್‌ ಕಮಾಂಡ್ ಸೆಂಟರ್‌ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಶಾಂತ್‌ ಮತ್ತು ಆಕಾಶ್‌ ಗುಪ್ತ ಪದವೀಧರರಾಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ತಾಂತ್ರಿಕವಾಗಿ ಹೆಚ್ಚಿನ ಜ್ಞಾನ ಹೊಂದಿದ್ದಾರೆ. ಕೃತಕ ಬುದ್ಧಿಮತ್ತೆ (ಎಐ) ಬಂದ ನಂತರ ಕೆಲಸ ಕಳೆದುಕೊಂಡು ಅಡ್ಡ ದಾರಿ ಹಿಡಿದು ನಕಲಿ ಕಾಲ್‌ ಸೆಂಟರ್‌ ತೆರೆದು ವಂಚಿಸುತ್ತಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಕೋಟ್ಯಂತರ ರು. ವಂಚನೆ:

ತನಿಖೆ ವೇಳೆ ಕಳೆದ ಎರಡು ತಿಂಗಳಲ್ಲಿ ಸುಮಾರು 40 ಕೋಟಿಯಷ್ಟು ಹಣ ಅಮೇರಿಕಾದ ಪ್ರಜೆಗಳಿಗೆ ವಂಚನೆ ಮಾಡಿರುವುದು ಕಂಡು ಬಂದಿದೆ. ನಾಲ್ಕು ವರ್ಷಗಳಿಂದ ನಕಲಿ ಕಾಲ್‌ ಸೆಂಟರ್‌ ನಡೆಸುತ್ತಿದ್ದು ಕೋಟ್ಯಂತರ ರು. ವಂಚಿಸಿರುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರು ಬ್ಯಾಂಕ್‌ ಖಾತೆಗಳ ವಹಿವಾಟು ವಿವರ ಕಲೆ ಹಾಕುತ್ತಿದ್ದಾರೆ.

ಅಮೇರಿಕಾದವರೆಗೂ ಜಾಲ ವಿಸ್ತರಣೆ:

ಆರೋಪಿಗಳು ಅಮೇರಿಕಾದ ನಾಗರಿಕರಿಗೆ ಟ್ಯಾಕ್ಸ್ ಹಾಗೂ ಅಕೌಂಟ್ಸ್‌ನ ಸಲಹೆ ನೀಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದರು. ಅಮೇರಿಕಾ ತನಕ ತಮ್ಮ ನೆಟ್‌ವರ್ಕ್‌ ಜಾಲವನ್ನು ವಿಸ್ತರಿಸಿಕೊಂಡು ಅವರ ಮೂಲಕ ಕೆಲಸ ಮಾಡಿಸಿರುವುದು ಬೆಳಕಿಗೆ ಬಂದಿದೆ. ಅಮೇರಿಕಾ ಪ್ರಜೆಗಳಿಗೆ ವಂಚನೆ ಮಾಡಿ ಡಾಲರ್ಸ್‌ಗಳ ರೂಪದಲ್ಲಿ ಹಣ ಪಡೆಯುತ್ತಿದ್ದರು. ಆ ಹಣವನ್ನು ಅಮೇರಿಕಾದ ಬ್ಯಾಂಕ್ ಖಾತೆಗೆ ಪಡೆದುಕೊಳ್ಳುತ್ತಿದ್ದರು. ಬಳಿಕ ಆ ಹಣವನ್ನು ಭಾರತದ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡುತ್ತಿದ್ದರು. ಭಾರತದಲ್ಲಿರುವ ಬ್ಯಾಂಕ್ ಅಕೌಂಟ್‌ವೊಂದಕ್ಕೆ ಅಮೇರಿಕಾದಲ್ಲಿ ವಂಚನೆ ಆಗುತ್ತಿದ್ದ ಹಣ ಹರಿದು ಬರುತ್ತಿತ್ತು. ನಂತರ ಆ ಹಣವನ್ನು ಹಂತ ಹಂತವಾಗಿ ಪಡೆದು ಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಎಸ್‌ಟಿ ಮಾಡಿಸಿದ್ದ ಆರೋಪಿಗಳು:

ತನಿಖೆ ವೇಳೆ ಆರೋಪಿಗಳು ನಕಲಿ ಕಾಲ್ ಸೆಂಟರ್‌ಗೆ ಸರ್ಕಾರದಿಂದ ಜಿಎಸ್‌ಟಿ ಮಾಡಿಸಿರುವುದು ಪತ್ತೆಯಾಗಿದೆ. ನಕಲಿ ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ 100 ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿದೆ. ಅಮೇರಿಕಾದ ನಾಗರಿಕರಿಗೆ ಯಾವ ರೀತಿ ವಂಚನೆ ಮಾಡಬೇಕು. ಯಾವ ಪ್ರಶ್ನೆಗೆ ಏನು ಉತ್ತರ ಕೊಡಬೇಕು ಎಂಬುದನ್ನು ಸ್ಕ್ರಿಪ್ಟ್‌ ನೀಡಿ ತರಬೇತಿ ನೀಡಿರುವುದು ಹಾಗೂ ಸಿಬ್ಬಂದಿಗೆ ವಂಚನೆ ಮಾಡಲು ತಿಂಗಳಿಗೆ 30 ರಿಂದ 40 ಸಾವಿರದವರೆಗೂ ಸಂಬಳ ನೀಡಿರುವುದು ಬೆಳಕಿಗೆ ಬಂದಿದೆ. ವಂಚನೆ ಪ್ರಕರಣದ ಹಿಂದೆ ಇನ್ನು ಹಲವಾರು ಆರೋಪಿಗಳ ಕೈವಾಡವಿದೆ. ಹೀಗಾಗಿ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ಕೋರಮಂಗಲದ ಎರಡು ಕಡೆ, ಚೂಡಸಂದ್ರ, ಪರಪ್ಪನ ಅಗ್ರಹಾರದಲ್ಲಿರುವ ಒಟ್ಟು 4 ನಕಲಿ ಕಾಲ್‌ ಸೆಂಟರ್‌ ಮೇಲೆ ಗುರುವಾರ ದಾಳಿ ನಡೆಸಿದ್ದ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಅಮೇರಿಕಾದ ಪ್ರಸಿದ್ದ ಲೆಕ್ಕಪತ್ರ ಸಂಸ್ಥೆಯಾದ ಕ್ಲಿಕ್‌ ಬುಕ್ ಹೆಸರಿನಲ್ಲಿ ನಗರದಲ್ಲಿ ನಕಲಿ ಕಾಲ್‌ ಸೆಂಟರ್‌ ತೆರೆದು ವಂಚಿಸುತ್ತಿದ್ದರು. ಈ ಕಂಪನಿ ಅಮೇರಿಕಾದ ಆದಾಯ ತೆರಿಗೆ ಬಗ್ಗೆ ಆನ್‌ಲೈನ್‌ ಸರ್ವೀಸ್‌ ಕೊಡುವಂತಹ ಕಂಪನಿಯಾಗಿದೆ. ಇದರ ಹೆಸರಿನಲ್ಲಿ ನಕಲಿ ಕಾಲ್ ಸೆಂಟರ್‌ಗಳನ್ನು ತೆರೆದು ಹಲವು ಅಮೇರಿಕಾದ ನಾಗರಿಕರನ್ನು ವಂಚಿಸಿರುವುದು ಬೆಳಕಿಗೆ ಬಂದಿತ್ತು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ನಕಲಿ ಚಿನ್ನ ಅಡಮಾನವಿಟ್ಟು ರಾಷ್ಟ್ರೀಕೃತ ಬ್ಯಾಂಕ್‌ಗೆ ನಾಮ ಹಾಕಿದ ಖದೀಮರು
ಪೊಲೀಸ್‌ ಕಾನ್‌ಸ್ಟೇಬಲ್‌ ಪತ್ನಿ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ಆರೋಪ