ಸಾಲಭಾದೆಯಿಂದ ರೈತ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಬಿ.ಟಿ.ಕೊಪ್ಪಲು ಗ್ರಾಮದಲ್ಲಿ ಭಾನುವಾರ ನಡೆದಿದೆ.
ಪಾಂಡವಪುರ : ಸಾಲಭಾದೆಯಿಂದ ರೈತ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಬಿ.ಟಿ.ಕೊಪ್ಪಲು ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ರೈತ ಕರಿಬೋರೇಗೌಡರ ಪುತ್ರ ಪುರುಷೋತ್ತಮ್ (50) ಆತ್ಮಹತ್ಯೆಗೆ ಶರಣಾಗಿರುವ ರೈತ.
ಮೃತ ರೈತ ಪುರುಷೋತ್ತಮ್ ಅವರಿಗೆ ಕ್ಯಾತನಹಳ್ಳಿ ಎಲ್ಲೆಯಲ್ಲಿ 20 ಗುಂಟೆ ಜಮೀನಿದ್ದು ಬೆಳೆ ಬೆಳೆಯಲು ತಾಲೂಕಿನ ಕ್ಯಾತನಹಳ್ಳಿ ಎಸ್‌ಬಿಐ ಬ್ಯಾಂಕ್‌ನಲ್ಲಿ 6 ಲಕ್ಷ ರು.ಸಾಲದ ಜತೆಗೆ ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸಾಲಭಾದೆ ತಾಳಲಾರದೆ ರೈತ ಪುರುಷೋತ್ತಮ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಕೋಮಲ ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ವಾರಸ್ಸುದಾರರಿಗೆ ಒಪ್ಪಿಸಿದ್ದಾರೆ. ಗ್ರಾಮದ ಸ್ವಜಮೀನಿನಲ್ಲಿ ಘಟನೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಮೀನಿನಲ್ಲಿ ಮೇಯುತ್ತಿದ್ದ ಮೇಕೆ ಹೊತ್ತೊಯ್ದ ಚಿರತೆ
ಮಂಡ್ಯ : ಜಮೀನಿನಲ್ಲಿ ಮೇಯುತ್ತಿದ್ದ ಮೇಕೆಯನ್ನು ಚಿರತೆ ಹೊತ್ತೊಯ್ದು ಕೊಂದು ಹಾಕಿರುವ ಘಟನೆ ತಾಲೂಕಿನ ಮಂಗಲ ಗ್ರಾಮದ ಹೊರವಲಯದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಗ್ರಾಮದ ಮೀನಾಕ್ಷಿ ಸಣ್ಣೇಗೌಡರಿಗೆ ಸೇರಿದ ಮೇಕೆಯನ್ನು ಚಿರತೆ ಬಲಿ ಪಡೆದಿದ್ದು, ಮೀನಾಕ್ಷಿ ಅವರು ಸೋಮವಾರ ಬೆಳಗ್ಗೆ ಲೋಕಸರ ರಸ್ತೆಯ ಭೂತಮ್ಮನಹಳ್ಳದ ಬಳಿಯ ಕಾಳೇಗೌಡರ ಜಮೀನಿನಲ್ಲಿ ತಮ್ಮ ಹಸು ಹಾಗೂ ಮೇಕೆಗಳನ್ನು ಮೇಯಲು ಬಿಟ್ಟಿದ್ದರು. ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಚಿರತೆ ದಾಳಿ ಮಾಡಿ ಮೇಕೆಯೊಂದನ್ನು ಕಚ್ಚಿಕೊಂಡು ಕಬ್ಬಿನ ಗದ್ದೆಯೊಳಗೆ ಮರೆಯಾಗಿದೆ.ಮೀನಾಕ್ಷಿ ಅವರು ಸಹಾಯಕ್ಕಾಗಿ ಕೂಗಿಕೊಂಡು ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದ್ದರು. ಆದರೆ, 80 ಎಕರೆ ಪ್ರದೇಶದಲ್ಲಿ ಕಬ್ಬಿನ ಗದ್ದೆಯೊಳಗೆ ಯಾವ ಪ್ರದೇಶದಲ್ಲಿ ಚಿರತೆ ಇದೆ ಎಂಬುದು ಯಾರಿಗೂ ತಿಳಿದಿಲ್ಲ. ಘಟನೆ ಸಂಬಂಧ ಗ್ರಾಮಸ್ಥರು ಗ್ರಾಮ ಲೆಕ್ಕಾಧಿಕಾರಿ, ಕಂದಾಯಾಧಿಕಾರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಜನರು ನಿತ್ಯ ಓಡಾಡುವ ಮಾರ್ಗದಲ್ಲಿ ಹಗಲಲ್ಲೆ ಚಿರತೆ ಕಾಣಿಸಿಕೊಂಡಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಚಿರತೆ ಸೆರೆ ಹಿಡಿದು ಜನರು ಆತಂಕ ನಿವಾರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.ವಿಷಯ ತಿಳಿದು ಸ್ಥಳ ಪರಿಶೀಲನೆ ನಡೆಸಲಾಗಿದೆ. ಅರಣ್ಯ ಇಲಾಖೆಯಿಂದ ಘಟನೆ ಸ್ಥಳದಲ್ಲಿ ಚಿರತೆ ಸೆರೆಗಾಗಿ ಬೋನು ಇಡಲಾಗುತ್ತದೆ. ಮೇಕೆ ಕಳೆಬರ ಸಿಕ್ಕ ಬಳಿಕ ಪಶು ವೈದ್ಯಾಧಿಕಾರಿಗಳಿಂದ ಶವಪರೀಕ್ಷೆ ನಡೆಸಿ ವರದಿ ತರಿಸಿಕೊಂಡು, ಇಲಾಖೆಯಿಂದ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಮಂಡ್ಯ ವಲಯ ಅರಣ್ಯಾಧಿಕಾರಿ ಎಂ.ಎಸ್ .ಚೈತ್ರ ತಿಳಿಸಿದ್ದಾರೆ.