ಪ್ರೇಮ ವೈಫಲ್ಯದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಸಿಗದ ನ್ಯಾಯ: ತಾಯಿ ಆತ್ಮಹತ್ಯೆ..!

KannadaprabhaNewsNetwork | Updated : Mar 14 2025, 05:01 AM IST

ಸಾರಾಂಶ

ಪ್ರೇಮ ವೈಫಲ್ಯದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡು ಇಪ್ಪತ್ತು ದಿನಗಳಾದರೂ ಪೊಲೀಸರು ನ್ಯಾಯ ಕೊಡಿಸಲಿಲ್ಲವೆಂದು ಮನನೊಂದ ತಾಯಿ ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ನಡೆದಿದೆ.

 ಮಂಡ್ಯ: ಪ್ರೇಮ ವೈಫಲ್ಯದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡು ಇಪ್ಪತ್ತು ದಿನಗಳಾದರೂ ಪೊಲೀಸರು ನ್ಯಾಯ ಕೊಡಿಸಲಿಲ್ಲವೆಂದು ಮನನೊಂದ ತಾಯಿ ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ತಾಲೂಕಿನ ಹೆಬ್ಬಕವಾಡಿ ಗ್ರಾಮದ ಲಕ್ಷ್ಮೀ (37) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆಯ ಮಗಳು ವಿಜಯಲಕ್ಷ್ಮೀ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಆತ ಕೈಕೊಟ್ಟ ಕಾರಣದಿಂದ ಬೇಸರಗೊಂಡ ವಿಜಯಲಕ್ಷ್ಮೀ 2025 ಫೆಬ್ರವರಿ 21ರಂದು ಮಂಡ್ಯ ನಗರದಲ್ಲಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಈ ಪ್ರಕರಣಕ್ಕೆ ಸಂಬಂಧ ಪ್ರಿಯಕರ ಕೈ ಕೊಟ್ಟ ಕಾರಣದಿಂದಾಗಿಯೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಾಯಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಮಗಳಿಗೆ ಮೋಸ ಮಾಡಿದ ಪ್ರಿಯಕರನ ವಿರುದ್ಧ ದೂರು ನೀಡಿದ್ದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿ ಡೆತ್‌ನೋಟ್‌ನಲ್ಲಿ ಯುವಕರ ಕುಟುಂಬದವರು ಮತ್ತು ಗ್ರಾಮದ ಕೆಲವು ಮುಖಂಡರ ಹೆಸರುಗಳನ್ನು ಬರೆದು ತಾಯಿ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ?:

ನನ್ನ ಮಗಳು ಡೆತ್‌ ಆಗಿ 20 ದಿನ ಕಳೆದರೂ ಕಾನೂನು ಕ್ರಮ ತೆಗೆದುಕೊಳ್ಳದೆ ಇರುವುದರಿಂದ ಹಾಗೂ ಹರಿಕೃಷ್ಣ ಮನೆಯವರು ನಮ್ಮ ಮನೆಯವರ ಮೇಲೆ ದರ್ಪ, ದೌರ್ಜನ್ಯ ತೋರಿಸಿ ಹಣದ ಆಮಿಷಕ್ಕೆ ಕಾನೂನು ಜಾರಿಯಾಗಿದ್ದು ಇವರು ನನ್ನ ಸಾವಿಗೆ ಕಾರಣರಾಗಿದ್ದಾರೆ.

ಕೆಂಪೇಗೌಡ, ಸರೋಜಮ್ಮ, ನಾಗಣ್ಣ, ಚಿಕ್ಕತಿಮ್ಮೇಗೌಡ, ಪುಟ್ಟೇಗೌಡ, ಶಿವು, ಮಂಜು, ಪ್ರಕಾಶ ಇವರು ನಮ್ಮ ಊರಿನ ಜನಗಳು ನ್ಯಾಯ ಕೇಳುವುದಕ್ಕೆ ಹೋಗುವುದರಿಂದ ಆ ಜನರ ಮೇಲೆ ಕಂಪ್ಲೇಟ್ ಮಾಡಿ ಅವರದೇ ತಪ್ಪಿದ್ದರೂ ನಮ್ಮ ಊರಿನ ಜನರ ಮೇಲೆ ತಪ್ಪು ಹೊರಿಸಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಇವರೇ ಕಾರಣ ನನ್ನ ಮಗಳಿಗೆ ನ್ಯಾಯ ಕೊಡಿಸಿ ಎಂದು ಡೆತ್‌ನೋಟ್ ಬರೆದಿಡಲಾಗಿದೆ.

Share this article