;Resize=(412,232))
ಬೆಂಗಳೂರು : ಆಸ್ತಿ ವಿವಾದದಿಂದಾಗಿ ಮಲಗಿದ್ದ ಬಾಲಕನ ಮೇಲೆ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ ಆರೋಪದ ಮೇಲೆ ಬಾಲಕನ ಚಿಕ್ಕಪ್ಪನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೋಹನ್ ಬಂಧಿತ ಆರೋಪಿ. ಕೃಷ್ಣ (15) ಮೃತ ಬಾಲಕ. ಬಾಲಕನ ಸಂಬಂಧಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷ್ಣ ಅವರ ತಾಯಿ 14 ವರ್ಷಗಳ ಹಿಂದೆಯೇ ಮಕ್ಕಳು ಮತ್ತು ಗಂಡನನ್ನು ಬಿಟ್ಟು ಹೋಗಿದ್ದರು. ಅದೇ ಕೊರಗಿನಲ್ಲಿ ಕೃಷ್ಣ ಅವರ ತಂದೆ ಮುನಿರಾಜು ಮೃತಪಟ್ಟಿದ್ದರು. ಕೃಷ್ಣ ಮತ್ತು ಆತನ ಅಣ್ಣ ಯಶವಂತ ಇಬ್ಬರೂ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಯಶವಂತ ಕೂಲಿ ಕೆಲಸ ಮಾಡಿಕೊಂಡಿದ್ದ. ಕೃಷ್ಣ ಐವರ ಕಂಡಪುರದ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷ್ಣ ಅವರ ತಂದೆ ಮುನಿರಾಜುವಿಗೆ ದೇವನಹಳ್ಳಿ ಕುಂದಾಣ ಹತ್ತಿರ ಸುಮಾರು 1 ಎಕರೆ ಪಿತ್ರಾರ್ಜಿತ ಜಮೀನು ಇದೆ. ಕಳೆದ ವರ್ಷ ಆ ಜಮೀನನ್ನು ಆರೋಪಿ ಮೋಹನ್, ತನ್ನ ಅಕ್ಕ ಪುಪ್ಪ ಹಾಗೂ ಅಣ್ಣನ ಮಕ್ಕಳಾದ ಯಶವಂತ್ ಹಾಗೂ ಕೃಷ್ಣನಿಗೆ ಗೊತ್ತಾಗದ ಹಾಗೇ ಸಹಿಗಳನ್ನು ನಕಲು ಮಾಡಿ ಜಮೀನನ್ನು ಯಲಹಂಕ ಜಿ.ಕೆ.ಬಿಲ್ಡರ್ಸ್ರ್ಗೆ ಮಾರಾಟ ಮಾಡಿದ್ದ.
ಈ ಸಂಬಂಧ ಪುಪ್ಪ ಅವರು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ನಡುವೆ ನಕಲು ವಿಚಾರ ಬಿಲ್ಡರ್ಸ್ರಿಗೆ ಗೊತ್ತಾಗಿ ಪುಷ್ಪ ಹಾಗೂ ಮುನಿರಾಜು ಅವರ ಮಕ್ಕಳಾದ ಯಶವಂತ ಹಾಗೂ ಕೃಷ್ಣ ಅವರ ಅಕೌಂಟ್ಗೆ ಹಣ ಹಾಕಿದ್ದರು. ಇದರಿಂದ ಕೋಪಗೊಂಡ ಆರೋಪಿ ಮೋಹನ್ ಆಗಾಗ್ಗೆ ಬಂದು ಯಶವಂತ ಮತ್ತು ಕೃಷ್ಣನ ಮೇಲೆ ಗಲಾಟೆ ಮಾಡುತ್ತಿದ್ದ. ಆರೋಪಿ ಮೋಹನ್ ಸೋಮವಾರ ರಾತ್ರಿ 10ರ ಸುಮಾರಿಗೆ ಕೃಷ್ಣನ ಮನೆಗೆ ಬಂದು ಮಚ್ಚಿನಿಂದ ಆತನನ್ನು ಕೊಚ್ಚಿ ಕೊಲೆ ಮಾಡಿದ್ದ. ಕೃತ್ಯ ನಡೆದಾಗ ಕೃಷ್ಣನ ಅಣ್ಣ ಯಶವಂತ ಸಿನಿಮಾ ನೋಡಲು ಹೋಗಿದ್ದ ಎನ್ನಲಾಗಿದೆ.
ಠಾಣೆಗೆ ಹೋಗಿ ಶರಣಾದ ಆರೋಪಿ:
ಆರೋಪಿ ಮೋಹನ್ ಕೃತ್ಯ ಎಸಗಿದ ಬಳಿಕ ತಾನು ಕೃಷ್ಣ ಎಂಬಾತನನ್ನು ಕೊಲೆ ಮಾಡಿರುವುದಾಗಿ ಮಂಗಳವಾರ ಬೆಳಗ್ಗೆ ವಿಶ್ವನಾಥಪುರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ವಿಶ್ವನಾಥಪುರ ಪೊಲೀಸರು, ಕೂಡಲೇ ಸೋಲದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ದೌಡಾಯಿಸಿ ಕೃಷ್ಣನ ಮನೆಗೆ ಹೋಗಿ ನೋಡಿದ್ದಾಗ ಆತ ಮನೆಯ ರೂಮಿನಲ್ಲಿ ಬೋರಲಾಗಿ ಸತ್ತು ಬಿದಿದ್ದ, ಆತನ ತಲೆಯಿಂದ ರಕ್ತಸ್ರಾವವಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.