ಕನ್ನಡಪ್ರಭ ವಾರ್ತೆ ಬೆಂಗಳೂರು
ದ್ವಿಚಕ್ರ ವಾಹನಕ್ಕೆ ಸರಕು ಸಾಗಣೆ ವಾಹನ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಹಿಂಬದಿ ಸವಾರ ಮೃತಪಟ್ಟು, ಸವಾರ ಗಾಯಗೊಂಡಿರುವ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಚಾಮರಾಜಪೇಟೆ ನಿವಾಸಿ ಮಧು(22) ಮೃತ ಹಿಂಬದಿ ಸವಾರ. ಪ್ರಜ್ವಲ್ ಗಾಯಗೊಂಡಿರುವ ಸವಾರ. ಗುರುವಾರ ರಾತ್ರಿ 9.45ರ ಸುಮಾರಿಗೆ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಈ ಅಪಘಾತ ಸಂಭವಿಸಿದೆ.
ಮಧು ಮತ್ತು ಪ್ರಜ್ವಲ್ ಸ್ನೇಹಿತರು. ನಾಗರಬಾವಿಯಲ್ಲಿ ಸ್ನೇಹಿತರನ್ನು ಭೇಟಿಯಾಗಿ ದ್ವಿಚಕ್ರ ವಾಹನದಲ್ಲಿ ಚಾಮರಾಜಪೇಟೆ ಕಡೆಗೆ ವಾಪಾಸ್ ಆಗುತ್ತಿದ್ದರು. ಈ ವೇಳೆ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಬರುವಾಗ ಹಿಂದಿನಿಂದ ವೇಗವಾಗಿ ಬಂದು ಸರಕು ಸಾಗಣೆ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಈ ವೇಳೆ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸಹಿತ ಸವಾರರಿಬ್ಬರೂ ರಸ್ತೆಗೆ ಬಿದ್ದಿದ್ದಾರೆ.ಸೊಂಟದ ಮೇಲೆ ಉರುಳಿದ ಚಕ್ರ:
ಈ ವೇಳೆ ಸರಕು ಸಾಗಣೆ ವಾಹನದ ಹಿಂಬದಿ ಚಕ್ರ ಹಿಂಬದಿ ಸವಾರ ಮಧು ಸೊಂಟದ ಮೇಲೆ ಉರುಳಿದೆ. ಸವಾರ ಪ್ರಜ್ವಲ್ ಕೈಗೆ ಗಾಯವಾಗಿದೆ. ಬಳಿಕ ಸ್ಥಳೀಯರು ಗಾಯಾಳುಗಳಿಬ್ಬರನ್ನೂ ಸಮೀಪದ ಆಸ್ಪತ್ರೆಗೆ ಕದ್ದೊಯಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಧು ಚಿಕಿತ್ಸೆ ಫಲಿಸದೆ ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ಮೃತಪಟ್ಟಿದ್ದಾನೆ. ಗಾಯಾಳು ಸವಾರ ಪ್ರಜ್ವಲ್ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಸರಕು ಸಾಗಣೆ ವಾಹನದ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆ ಬಳಿಕ ವಾಹನ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳದ ಸುತ್ತಮುತ್ತಲ ಸಿಟಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ, ವಾಹನ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.