ಬೆಂಗಳೂರು : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿಯ ಪತಿಯನ್ನು ಮಾತುಕತೆಗೆ ಕರೆದು ಹತ್ಯೆ ಮಾಡಿದ್ದ ವ್ಯಕ್ತಿ ಹಾಗೂ ಆತನ ಪ್ರೇಯಸಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಟನ್‌ಪೇಟೆ ಭಕ್ಷಿ ಗಾರ್ಡನ್ ನಿವಾಸಿ ದಾದಾಪೀರ್ ಅಲಿಯಾಸ್ ದದ್ದು (25) ಮತ್ತು ಕೊಲೆಯಾದ ಸಮೀರ್‌ನ ಪತ್ನಿ ಉಮ್ಮೇ ಸಲ್ಮಾ ಅಲಿಯಾಸ್ ನಾಜಿಯಾ (22) ಬಂಧಿತರು. ಆರೋಪಿಗಳು ಏ.6ರ ರಾತ್ರಿ ತುರಹಳ್ಳಿ ಫಾರಸ್ಟ್ ಬಳಿ ಪಾದರಾಯನಪುರ ನಿವಾಸಿ ಸಮೀರ್‌ನನ್ನು (26) ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದುವೆ ಬಳಿಕವೂ ಅಕ್ರಮ ಸಂಬಂಧ:
ಕೊಲೆಯಾದ ಸಮೀರ್ ಒಂದೂವರೆ ವರ್ಷದ ಹಿಂದೆ ನಾಜಿಯಾಳನ್ನು ಮದುವೆಯಾಗಿದ್ದ. ದಂಪತಿಗೆ ಒಂದು ಮಗುವಿದೆ. ಸಮೀರ್ ಕಲಾಸಿಪಾಳ್ಯ ಸಮೀಪದ ಬಸಪ್ಪ ಸರ್ಕಲ್‌ನ ಆಲ್ ಇಂಡಿಯಾ ಟೈಯರ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ನಾಜಿಯಾ ಮದುವೆಗೂ ಮುನ್ನ ಆರೋಪಿ ದಾದಾಪೀರ್ ಜತೆಗೆ ಎಂಗೇಜ್‌ಮೆಂಟ್ ಆಗಿತ್ತು. ಕಾರಣಾಂತರಗಳಿಂದ ಮದುವೆ ಮುರಿದು ಬಿದ್ದಿತ್ತು. ಬಳಿಕ ಸಮೀರ್, ನಾಜಿಯಾಳನ್ನು ಮದುವೆಯಾಗಿದ್ದ. ಮದುವೆ ಬಳಿಕವೂ ದಾದಾಪೀರ್ ಮತ್ತು ನಾಜಿಯಾ ನಡುವೆ ಅನೈತಿಕ ಸಂಬಂಧ ಮುಂದುವರೆದಿತ್ತು. ಈ ವಿಚಾರ ಸಮೀರ್ ಮತ್ತು ನಾಜಿಯಾ ಕುಟುಂಬಗಳಿಗೂ ಗೊತ್ತಿತ್ತು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆಗಳಾಗುತ್ತಿದ್ದವು. ದಾದಾಪಿರ್‌ನ ಸಹವಾಸ ಬಿಟ್ಟು ಬಿಡುವಂತೆ ಸಮೀರ್ ಪತ್ನಿಗೆ ಹಲವು ಬಾರಿ ಬುದ್ಧಿವಾದ ಹೇಳಿದ್ದ. ಆದರೂ ಆಕೆ ದಾದಾಪೀರ್ ಜತೆಗಿನ ಅಕ್ರಮ ಸಂಬಂಧ ಮುಂದುವರೆಸಿದ್ದಳು.
ಸ್ಕೆಚ್ ಹಾಕಿ ಕರೆಸಿಕೊಂಡು ಕೊಲೆ:ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಸಮೀರ್‌ನನ್ನು ಕೊಲೆ ಮಾಡಲು ದಾದಾಪೀರ್ ಮತ್ತು ನಾಜಿಯಾ ಸಂಚು ರೂಪಿಸಿದ್ದರು. ಅದರಂತೆ ಏ.6ರ ಸಂಜೆ ಈ ವಿಚಾರವನ್ನು ಚರ್ಚಿಸಿ ಬಗೆಹರಿಸಿಕೊಳ್ಳುವ ನೆಪದಲ್ಲಿ ಆರೋಪಿ ದಾದಾಪೀರ್, ಸಮೀರ್‌ನನ್ನು ಬನಶಂಕರಿ 6ನೇ ಹಂತದ ತುರಹಳ್ಳಿ ಫಾರೆಸ್ಟ್ ರಸ್ತೆಗೆ ಕರೆಸಿಕೊಂಡಿದ್ದ. ಬಳಿಕ ಮಾತುಕತೆ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಪೂರ್ವ ನಿರ್ಧರಿತ ಸಂಚಿನಂತೆ ದಾದಾಪೀರ್ ಕಬ್ಬಿಣದ ರಾಡ್‌ನಿಂದ ಸಮೀರ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ.
ಏ.7ರಂದು ಬೆಳಗ್ಗೆ ಸುಮಾರು 9.15ಕ್ಕೆ ಕೆಂಗೇರಿ ಠಾಣೆಯ ಎಎಸ್‌ಐ ಎಚ್.ಎಂ.ಕೃಷ್ಣಪ್ಪ ಅವರು ಹೊಯ್ಸಳ ಗಸ್ತು ಕರ್ತವ್ಯದಲ್ಲಿದ್ದರು. ಬನಶಂಕರಿ 6ನೇ ಹಂತದ ತುರಹಳ್ಳಿ ಫಾರೆಸ್ಟ್ ಪಕ್ಕದ ರಸ್ತೆಯಲ್ಲಿ ಹೋಗುವಾಗ ಅಪರಿಚಿತ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ಹತ್ತಿರ ತೆರಳಿ ಪರಿಶೀಲಿಸಿದಾಗ ಮೃತದೇಹದ ಮೇಲೆ ಮಾರಕಾಸ್ತ್ರಗಳಿಂದ ಹೊಡೆದಿರುವ ಗುರುತುಗಳು ಪತ್ತೆಯಾಗಿದ್ದವು. ಬಳಿಕ ಮೃತ ವ್ಯಕ್ತಿ ಸಮೀರ್ ಎಂಬುದು ಗೊತ್ತಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.