ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆ - ಕೋಳಿ ಕತ್ತರಿಸುವ ಮಚ್ಚಿನಲ್ಲಿ ಪತ್ನಿ ಹತ್ಯೆ

KannadaprabhaNewsNetwork |  
Published : Oct 19, 2024, 01:31 AM ISTUpdated : Oct 19, 2024, 05:02 AM IST
ಕೊಲೆ | Kannada Prabha

ಸಾರಾಂಶ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತ್ನಿಯನ್ನು ಮಾಂಸ ಕತ್ತರಿಸುವ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.

 ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತ್ನಿಯನ್ನು ಮಾಂಸ ಕತ್ತರಿಸುವ ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದ ಕೋಳಿ ವ್ಯಾಪಾರಿಯೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಸಿಂಗೇನಹಳ್ಳಿ ನಿವಾಸಿ ಸುಧಾ (50) ಕೊಲೆಯಾದ ದುರ್ದೈವಿ. ಈ ಕೃತ್ಯ ನಡೆದ ಕೆಲವೇ ತಾಸುಗಳಲ್ಲಿ ಮೃತಳ ಪತಿ ಶ್ರೀನಿವಾಸ್‌ನನ್ನು (60) ಪೊಲೀಸರು ಸೆರೆ ಹಿಡಿದಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಮೇಲೆ ಬೆಳಗ್ಗೆ 11.30ರ ಸುಮಾರಿಗೆ ಮಚ್ಚಿನಿಂದ ಶ್ರೀನಿವಾಸ್ ಹಲ್ಲೆ ನಡೆಸಿದ್ದಾನೆ. ತಕ್ಷಣವೇ ಆಕೆಯನ್ನು ನೆರೆಹೊರೆಯವರು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸುಧಾ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

34 ವರ್ಷಗಳ ಹಿಂದೆ ಹೊಸಕೋಟೆ ತಾಲೂಕಿನ ಸುಧಾ ಹಾಗೂ ಕೋಳಿ ವ್ಯಾಪಾರಿ ಶ್ರೀನಿವಾಸ್ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹಲವು ವರ್ಷಗಳಿಂದ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಿತ್ತು. ಮನೆ ಸಮೀಪದ ಚಿಕನ್ ಅಂಗಡಿ ಇಟ್ಟುಕೊಂಡಿದ್ದ ಶ್ರೀನಿವಾಸ್‌, ವಿಪರೀತ ಮದ್ಯ ವ್ಯಸನಿಯಾಗಿದ್ದ. ಮನೆಗೆ ರಾತ್ರಿ ಕುಡಿದು ಬಂದು ಕ್ಷುಲ್ಲಕ ವಿಚಾರಗಳಿಗೆ ಪತ್ನಿ ಮೇಲೆ ಆತ ಗಲಾಟೆ ಮಾಡುತ್ತಿದ್ದ. ಈ ಹಿಂಸೆ ಸಹಿಸಲಾರದೆ ಮೂರು ವರ್ಷಗಳ ಹಿಂದೆ ಪತಿಯನ್ನು ತೊರೆದು ಹೊಸಕೋಟೆ ತಾಲೂಕಿನ ತವರು ಮನೆಗೆ ಸುಧಾ ತೆರಳಿದ್ದರು. ಆದರೆ ತಿಂಗಳ ಹಿಂದೆ ತಾಯಿ ಜತೆ ರಾಜಿ ಸಂಧಾನ ನಡೆಸಿ ಅವರ ಮಕ್ಕಳು ಮನೆಗೆ ಕರೆತಂದಿದ್ದರು. ಇನ್ಮುಂದೆ ಯಾವುದೇ ರೀತಿ ಜಗಳವಾಗದಂತೆ ನೋಡಿಕೊಳ್ಳುತ್ತೇವೆ ಎಂದು ತಾಯಿಗೆ ಸುಧಾ ಮಕ್ಕಳು ಭರವಸೆ ಕೊಟ್ಟಿದ್ದರು. ಅಲ್ಲದೆ ಕೆಲ ದಿನಗಳು ಪತ್ನಿ ಜತೆ ರಗಳೆ ಮಾಡದೆ ಶ್ರೀನಿವಾಸ್ ಸಹ ನಿಶ್ಯಬ್ಧವಾಗಿದ್ದ. ಆದರೆ ಎರಡು ದಿನಗಳಿಂದ ಮತ್ತೆ ಆತ ಹಳೇ ವರಸೆ ಶುರು ಮಾಡಿದ್ದ.

ಹೊಲದಲ್ಲಿದ್ದವಳಿಗೆ ಮಚ್ಚಿನೇಟು

ಅಂತೆಯೇ ಕೆಲಸದ ನಿಮಿತ್ತ ಬೆಳಗ್ಗೆ 10.30ರ ಸುಮಾರಿಗೆ ಅವರ ಪುತ್ರ ಮನೆಯಿಂದ ಹೊರ ಹೋಗಿದ್ದಾನೆ. ಆಗ ಮನೆ ಹಿಂಬದಿ ಹೊಲದಲ್ಲಿ ಸುಧಾ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಕ್ಷುಲ್ಲಕ ವಿಷಯಕ್ಕೆ ಜಗಳ ತೆಗೆದು ಪತ್ನಿಗೆ ಮಚ್ಚಿನಿಂದ ಮನಬಂದಂತೆ ಶ್ರೀನಿವಾಸ್ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಯಿಂದ ಕೈ ಬೆರಳು ತುಂಡಾಗಿವೆ. ಕತ್ತಿಗೆ ಪೆಟ್ಟಾಗಿ ಸುಧಾ ಕಿರುಚಿಕೊಂಡಿದ್ದಾರೆ. ಕೂಡಲೇ ಆಕೆಯ ರಕ್ಷಣೆಗೆ ಸ್ಥಳೀಯರು ಧಾವಿಸಿದ ತಕ್ಷಣವೇ ಶ್ರೀನಿವಾಸ್ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಸುಧಾ ಮೃತಪ್ಟಟಿದ್ದಾರೆ. ಈ ಘಟನೆ ಬಗ್ಗೆ ಮೃತಳ ಪುತ್ರ ನೀಡಿದ ದೂರಿನ ಮೇರೆಗೆ ಶ್ರೀನಿವಾಸ್‌ನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

PREV

Recommended Stories

ಮದ್ಯ ಅಮಲಲ್ಲಿ ಕೇವಲ 20 ರು. ವಿಚಾರವಾಗಿ ಸ್ನೇಹಿತನ ಕೊಂದಿದ್ದವನ ಬಂಧನ
ತಾಯಿಗೆ ಕ್ಷಮೆ ಕೋರಿ ಪತ್ರ ಬರೆದಿಟ್ಟು ನೇ*ಗೆ ಶರಣಾದ ಕನ್ನಡ ಗಾಯಕಿ ಸವಿತಾ ಮಗ