ಮುದ್ದೆ ಕೋಲಿಂದ ಹೊಡೆದು ಪತಿಯ ಕೊಲೆ

KannadaprabhaNewsNetwork |  
Published : Jul 05, 2025, 01:48 AM ISTUpdated : Jul 05, 2025, 09:40 AM IST
Crime news

ಸಾರಾಂಶ

ತಮ್ಮ ಮನೆ ಕೆಲಸದ ಮಹಿಳೆ ಜತೆ ಅಕ್ರಮ ಸಂಬಂಧ ಶಂಕೆ ಮೇರೆಗೆ ಪತಿಯನ್ನು ಕೊಂದು ಬಳಿಕ ಹೃದಯಾಘಾತದ ಸಾವು ಎಂದು ನಾಟಕವಾಡಿದ್ದ ಮೃತನ ಎರಡನೇ ಪತ್ನಿ ಕೊನೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಳೆ.

  ಬೆಂಗಳೂರು :  ತಮ್ಮ ಮನೆ ಕೆಲಸದ ಮಹಿಳೆ ಜತೆ ಅಕ್ರಮ ಸಂಬಂಧ ಶಂಕೆ ಮೇರೆಗೆ ಪತಿಯನ್ನು ಕೊಂದು ಬಳಿಕ ಹೃದಯಾಘಾತದ ಸಾವು ಎಂದು ನಾಟಕವಾಡಿದ್ದ ಮೃತನ ಎರಡನೇ ಪತ್ನಿ ಕೊನೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಳೆ.

ಭವಾನಿ ನಗರದ ನಿವಾಸಿ ಭಾಸ್ಕರ್ (42) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಪತ್ನಿ ಶೃತಿಯನ್ನು ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಸ್ನಾನದ ಮನೆಯಲ್ಲಿ ಕುಸಿದು ಬಿದ್ದು ಭಾಸ್ಕರ್ ಮೃತಪಟ್ಟಿದ್ದಾರೆ ಎಂದು ದೂರು ದಾಖಲಾಗಿತ್ತು. ಆದರೆ ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸತ್ಯ ಬಯಲಾಗಿದೆ. ಭಾಸ್ಕರ್ ಮೇಲೆ ಹಲ್ಲೆ ನಡೆದು ಆಂತರಿಕ ರಕ್ತಸ್ರಾವದಿಂದ ಭಾಸ್ಕರ್ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದರು. ಈ ಬೆನ್ನಲ್ಲೇ ಶಂಕೆ ಮೇರೆಗೆ ಶೃತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.

ಹನ್ನೆರಡು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಶೃತಿ ಜತೆ ಖಾಸಗಿ ಕಂಪನಿ ಉದ್ಯೋಗಿ ಭಾಸ್ಕರ್‌ ಎರಡನೇ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದಕ್ಕು ಮುನ್ನ ಮೊದಲ ಪತ್ನಿಗೆ ಆತ ವಿವಾಹ ವಿಚ್ಛೇದನ ನೀಡಿದ್ದ. ಸದ್ದುಗುಂಟೆಪಾಳ್ಯದ ಹತ್ತಿರದ ಭವಾನಿ ನಗರದಲ್ಲಿ ನೆಲೆಸಿದ್ದ ಭಾಸ್ಕರ್‌ ಕುಟುಂಬ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ತಿಂಗಳ ಸಂಬಳವಲ್ಲದೆ ಆತನಿಗೆ ವಾಣಿಜ್ಯ ಕಟ್ಟಡಗಳಿಂದ ಪ್ರತಿ ತಿಂಗಳು 1.5 ಲಕ್ಷ ದಷ್ಟು ಬಾಡಿಗೆ ಬರುತ್ತಿತ್ತು ಎಂದು ಮೂಲಗಳು ಹೇಳಿವೆ.

ಪರಸ್ತ್ರೀಯರ ಸಂಗ ತಂದ ಸಾವು

ಮೃತ ಭಾಸ್ಕರ್ ಸ್ತ್ರೀಲೋಲನಾಗಿದ್ದು, ಮಹಿಳೆಯರ ಜತೆ ಸ್ನೇಹ ಮಾಡಿ ಮೋಜು ಮಸ್ತಿ ಮಾಡುವುದು ಆತನ ಖಯಾಲಿ ಆಗಿತ್ತು. ಇತ್ತ ಮನೆ ಕಡೆ ಆತ ಲಕ್ಷ್ಯವಿರಲಿಲ್ಲ. ವಾರಕ್ಕೆರಡು ಮೂರು ದಿನಗಳು ಆತ ಮನೆ ಕಡೆ ಸುಳಿಯುತ್ತಿರಲಿಲ್ಲ. ತನ್ನ ಮಕ್ಕಳ ಬಗ್ಗೆ ಆತನಿಗೆ ಕಾಳಜಿ ಇರಲಿಲ್ಲ. ಹೀಗಾಗಿ ತನ್ನ ಪತಿಯ ಉಡಾಫೆ ವರ್ತನೆಗೆ ಶೃತಿ ಬೇಸರಗೊಂಡಿದ್ದಳು. ಇದೇ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು. ಇತ್ತೀಚೆಗೆ ಮನೆ ಕೆಲಸದ ಮಹಿಳೆ ಜತೆ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆಕೆಗೆ ಅನುಮಾನವಿತ್ತು. ಕೌಟುಂಬಿಕ ಕಲಹದ ಬೆಂಕಿಗೆ ಈ ಗುಮಾನಿ ಮತ್ತಷ್ಟು ತುಪ್ಪ ಸುರಿಯಿತು. ದಾಂಪತ್ಯ ಜಗಳವು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯ ಕಂಡಿದೆ.

ಜೂ.27 ರಂದು ರಾತ್ರಿ ಮದ್ಯ ಸೇವಿಸಿ ಭಾಸ್ಕರ್ ಮನೆಗೆ ಬಂದಿದ್ದಾನೆ. ಆ ವೇಳೆ ಶೃತಿ ಆಕ್ಷೇಪಿಸಿದ್ದಾಳೆ. ಈ ಹಂತದಲ್ಲಿ ಸತಿ-ಪತಿ ಮಧ್ಯೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಈ ಹಂತದಲ್ಲಿ ಕೆರಳಿದ ಶೃತಿ, ಪತಿ ಮುಖಕ್ಕೆ ಬಲವಾಗಿ ಗುದ್ದಿದ್ದಾಳೆ. ಈ ಪೆಟ್ಟಿಗೆ ಮದ್ಯದ ಅಮಲಿನಲ್ಲಿದ್ದ ಆತ ಕುಸಿದು ಬಿದ್ದಿದ್ದಾನೆ. ಬಳಿಕ ಅಡುಗೆ ಮನೆಯಿಂದ ಇಟ್ಟಿನ ಕೋಲು ತಂದು ಸರಿಯಾಗಿ ಗಂಡನಿಗೆ ಆಕೆ ಬಾರಿಸಿದ್ದಾಳೆ. ಈ ಹೊಡೆತದಿಂದ ಭಾಸ್ಕರ್‌ ಕೊನೆಯುಸಿರೆಳೆದಿದ್ದಾನೆ.

ಸೊಸೆ ಮೇಲೆ ಪೋಷಕರ ಶಂಕೆ

ಪತಿ ಸಾವಿನ್ನಪ್ಪಿದ್ದರಿಂದ ಆತಂಕಗೊಂಡ ಶೃತಿ, ಬಳಿಕ ಮೃತದೇಹವನ್ನು ಸ್ನಾನ ಕೋಣೆಗೆ ಎಳೆದೊಯ್ದು ತೊಳೆದಿದ್ದಾಳೆ. ಮರು ದಿನ ಬೆಳಗ್ಗೆ ತಮ್ಮ ಸಂಬಂಧಿಕರಿಗೆ ಪತಿ ಸ್ನಾನದ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಸುಳ್ಳಿನ ಕತೆ ಹೆಣೆದಿದ್ದಳು. ಆದರೆ ಸೊಸೆ ಮೇಲೆ ಭಾಸ್ಕರ್ ಪೋಷಕರು ಶಂಕೆ ವ್ಯಕ್ತಪಡಿಸಿದ್ದರು. ಅಂತೆಯೇ ಸದ್ದುಗುಂಟೆಪಾಳ್ಯ ಠಾಣೆಯಲ್ಲಿ ಮೃತನ ಪೋಷಕರು ನೀಡಿದ ದೂರಿನ ಮೇರೆಗೆ ಶಂಕಾಸ್ಪದ ಸಾವು ಪ್ರಕರಣ ದಾಖಲಾಯಿತು.

ಕೊನೆಗೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮೃತನ ಮೇಲೆ ಕೋಲಿನಿಂದ ನಡೆದ ಹಲ್ಲೆಯಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ಅಭಿಪ್ರಾಯ ತಿಳಿಸಿದ್ದರು. ಈ ವರದಿ ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Read more Articles on

Recommended Stories

ಕೇಕ್ ಕಾರ್ಖಾನೆಯಲ್ಲಿದ್ದ ಲಿಫ್ಟ್‌ಗೆ ಸಿಲುಕಿ ಬಿಹಾರದ ಕಾರ್ಮಿಕ ದುರ್ಮರಣ
ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ವ್ಯಕ್ತಿ ಸಾವು