ಬಾತ್‌ ರೂಮಲ್ಲಿ ಬೆಂಕಿ ಹಚ್ಚಿ ಮಹಿಳೆ ಆತ್ಮಹತ್ಯೆಗೆ ಶರಣು

KannadaprabhaNewsNetwork | Published : Sep 9, 2024 1:32 AM

ಸಾರಾಂಶ

ಪತಿಯ ಅನೈತಿಕ ಸಂಬಂಧದಿಂದ ನೊಂದ ಪತ್ನಿ ಬಾರ್‌ರೂಂನಲ್ಲಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗೃಹಿಣಿಯೊಬ್ಬರು ಮನೆಯ ಸ್ನಾನದ ಕೊಠಡಿಯಲ್ಲಿ ಮೈ ಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹುಳಿಮಾವು ಸಮೀಪದ ಅಕ್ಷಯ ನಗರದ ನಿವಾಸಿ ಅನುಷಾ(27) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸೆ.5ರಂದು ಮೈ ಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅನುಷಾ ಸೆ.6ರ ತಡರಾತ್ರಿ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಗಳ ಆತ್ಮಹತ್ಯೆಗೆ ಅಳಿಯ ಶ್ರೀಹರಿಯ ಅನೈತಿಕ ಸಂಬಂಧವೇ ಕಾರಣ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪೊಲೀಸರು ಶ್ರೀಹರಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಶಿರಸಿ ಮೂಲದ ಶ್ರೀಹರಿ ಮತ್ತು ಅನುಷಾ ಐದು ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಎರಡು ವರ್ಷದ ಮಗು ಇದೆ. ಹುಳಿಮಾವು ಸಮೀಪದ ಅಕ್ಷಯನಗರದ ಅಪಾರ್ಟ್‌ಮೆಂಟ್‌ನಲ್ಲಿ ದಂಪತಿ ನೆಲೆಸಿದ್ದರು. ಈ ಶ್ರೀಹರಿ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಮಾರತಹಳ್ಳಿಯ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅನುಷಾ ಮನೆಯಲ್ಲೇ ಇದ್ದರು. ಮೂರು ತಿಂಗಳ ಹಿಂದೆ ಸಹೋದ್ಯೋಗಿ ಜತೆ ಅನುಚಿತ ವರ್ತನೆ ತೋರಿದ ಆರೋಪದಡಿ ಕಂಪನಿಯು ಶ್ರೀಹರಿಯನ್ನು ಕೆಲಸದಿಂದ ತೆಗೆದು ಹಾಕಿತ್ತು. ಹೀಗಾಗಿ ಶ್ರೀಹರಿ ಮನೆಯಲ್ಲೇ ಇರುತ್ತಿದ್ದರು ಎಂದು ತಿಳಿದು ಬಂದಿದೆ.

ಬೇರೆ ಮಹಿಳೆ ಜತೆ ಅನೈತಿಕ ಸಂಬಂಧ?

ಇತ್ತೀಚೆಗೆ ಶ್ರೀಹರಿ ಬೇರೆ ಮಹಿಳೆ ಜತೆಗೆ ಅನೈತಿಕ ಸಂಬಂಧ ಹೊಂದಿದ್ದರು. ಆಗಾಗ ಆ ಮಹಿಳೆ ಜತೆಗೆ ಮೊಬೈಲ್‌ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದರು. ಮನೆಯಲ್ಲಿ ಪತ್ನಿ ಇದ್ದರೂ ಆ ಮಹಿಳೆಗೆ ಜತೆಗೆ ಅಸಭ್ಯ ಸಂಭಾಷಣೆ ಮಾಡುತ್ತಿದ್ದರು. ಈ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಇದನ್ನು ಪ್ರಶ್ನಿಸಿದಾಗ ಪತ್ನಿ ಅನುಷಾ ಮೇಲೆ ಹಲ್ಲೆ ಮಾಡುತ್ತಿದ್ದರು ಎನ್ನಲಾಗಿದೆ.ನಟ ದರ್ಶನ್‌ ಉದಾಹರಣೆ

ಸೆ.5ರಂದು ಈ ಅನೈತಿಕ ವಿಚಾರವಾಗಿ ದಂಪತಿ ನಡುವೆ ಜಗಳವಾಗಿದೆ. ಈ ವೇಳೆ ಶ್ರೀಹರಿ ನಟ ದರ್ಶನ್‌ ರೀತಿ ನಾನು ಬೇರೆ ಮಹಿಳೆ ಜತೆಗೆ ಸಂಬಂಧ ಇರಿಸಿಕೊಂಡರೆ ತಪ್ಪೇನು ಎಂದು ಪತ್ನಿಯನ್ನು ಪ್ರಶ್ನಿಸಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡ ಅನುಷಾ, ಬಾತ್‌ ರೂಮ್‌ಗೆ ತೆರಳಿ ಮೈ ಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನೆರೆಹೊರೆಯ ನಿವಾಸಿಗಳು ಚೀರಾಟದ ಶಬ್ಧ ಕೇಳಿ ನೆರವಿಗೆ ಧಾವಿಸಿ, ಗಾಯಾಳು ಅನುಷಾಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಅನುಷಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share this article