ಪೀಣ್ಯ ದಾಸರಹಳ್ಳಿ : ಭೀಮನ ಅಮಾವಾಸ್ಯೆಯ ದಿನ ಗಂಡನ ಪಾದ ಪೂಜೆ ಮಾಡಿದ ಬಳಿಕ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯ ಗ್ರಾಮದಲ್ಲಿ ನಡೆದಿದೆ.
ಸ್ಪಂದನಾ ಮೃತಪಟ್ಟ ದುರ್ದೈವಿ ಮಹಿಳೆ. ಘಟನೆ ಸಂಬಂಧ ಪತಿ ಅಭಿಷೇಕ್ನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಒಂದೂವರೆ ವರ್ಷದ ಹಿಂದೆ ಕನಕಪುರದ ನಿವಾಸಿಯಾದ ಸ್ಪಂದನ ಹಾಗೂ ಕರಿಕಲ್ಲ ದೊಡ್ಡಿ ನಿವಾಸಿಯಾದ ಅಭಿಷೇಕ್ ಜೊತೆ ಮದುವೆಯಾಗಿತ್ತು. ಬೃಂದಾವನ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಸ್ಪಂದನಾಳಿಗೆ ಇನ್ಸ್ಟಾಗ್ರಾಮ್ನಲ್ಲಿ ಅಭಿಷೇಕ್ ಪರಿಚಯ ಆಗಿತ್ತು. ಪೋಷಕರ ವಿರೋಧದ ನಡುವೆಯೂ ಕನಕಪುರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಆಗಿದ್ದರು. ಪತಿ ಅಭಿಷೇಕ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸ್ಪಂದನಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.
ಮನೆಯಲ್ಲಿ ಭೀಮನ ಅಮಾವಾಸ್ಯೆಯ ದಿನ ಗಂಡನ ಪಾದ ಪೂಜೆ ಮಾಡಿದ ಬಳಿಕ ಈ ಘಟನೆ ನಡೆದಿದೆ. ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಸ್ಪಂದನಾ ಶವ ಪತ್ತೆಯಾಗಿದ್ದು ಮೈಮೇಲೆ ಗಾಯದ ಗುರುತುಗಳಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಪಂದನಾ ಕೊನೆಯದಾಗಿ ತನ್ನ ತಂಗಿಗೆ ವಾಟ್ಸಾಪ್ನಲ್ಲಿ ಮೆಸೇಜ್ ಮಾಡಿದ್ದು ನನ್ನ ಸಾವಿಗೆ ಅಭಿ ಹಾಗೂ ಅವರ ಇಡೀ ಕುಟುಂಬ. ಜೊತೆಗೆ ಕಂಪನಿಯ ಉದ್ಯೋಗಿಗಳು ಕಾರಣ ಎಂದು ಕಳುಹಿಸಿದ್ದಾಳೆ.
ಮದುವೆಯಾದ ಬಳಿಕ ಸ್ಪಂದನಾಳಿಗೆ ಅಭಿಷೇಕ್ ಕುಟುಂಬದವರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ಪೋಷಕರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪತಿಯ ಜತೆ ಜಗಳ ನಡೆದು ಆಕೆ ನೇಣು ಹಾಕಿಕೊಂಡಿರಬೇಕು ಎಂದು ಶಂಕಿಸಲಾಗಿದೆ.