ರೌಡಿ ಬಿಕ್ಲು ಶಿವ ಕೊಲೆ ಪ್ರಕರಣ ಕುರಿತು ಸಿಐಡಿ ತನಿಖೆ ಶುರು

KannadaprabhaNewsNetwork |  
Published : Jul 26, 2025, 01:30 AM ISTUpdated : Jul 26, 2025, 05:22 AM IST
Biklu SHiva Murder_Bengaluru

ಸಾರಾಂಶ

ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಅಧಿಕಾರಿಗಳು ಆರಂಭಿಸಿದ್ದಾರೆ.

 ಬೆಂಗಳೂರು :  ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಅಧಿಕಾರಿಗಳು ಆರಂಭಿಸಿದ್ದಾರೆ.

ಈ ಪ್ರಕರಣದ ತನಿಖೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಬಿ.ಕೆ.ಸಿಂಗ್ ಅವರ ಉಸ್ತುವಾರಿಯಲ್ಲಿ ನರಹತ್ಯೆ ವಿಭಾಗದ ಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ತಂಡವನ್ನು ಡಿಜಿಪಿ ಡಾ.ಎಂ.ಎ.ಸಲೀಂ ರಚಿಸಿದ್ದಾರೆ. ಈ ಪ್ರಕರಣದ ತನಿಖಾಧಿಕಾರಿಯಾಗಿ ಡಿವೈಎಸ್ಪಿ ಎಂ.ಎಚ್‌.ಉಮೇಶ್‌ ನೇಮಕಗೊಂಡಿದ್ದಾರೆ.

ಜಮೀನು ವಿವಾದದ ಹಿನ್ನಲೆಯಲ್ಲಿ ಜು.15 ರಂದು ಹಲಸೂರು ಕೆರೆ ಸಮೀಪದ ತನ್ನ ಮನೆ ಮುಂದೆ ನಿಂತಿದ್ದ ರೌಡಿ ಬಿಕ್ಲು ಶಿವನನ್ನು ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರ ಆಪ್ತ ಎನ್ನಲಾದ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನ ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಈ ಹತ್ಯೆ ಪ್ರಕರಣ ಸಂಬಂಧ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಬೈರತಿ ಬಸವರಾಜು ಅವರ ಹೆಸರನ್ನು 5ನೇ ಆರೋಪಿ ಎಂದು ಉ್ಲಲೇಖಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ಗುರುವಾರ ಸಿಐಡಿ ತನಿಖೆಗೆ ಆದೇಶಿಸಿತ್ತು.

ಇದರ ಬೆನ್ನಲ್ಲೇ ಎಸ್ಪಿ ವೆಂಕಟೇಶ್ ನೇತೃತ್ವದ ತಂಡವು ತನಿಖೆ ಶುರು ಮಾಡಿದೆ. ಭಾರತಿ ನಗರ ಠಾಣೆಗೆ ತೆರಳಿ ಡಿವೈಎಸ್ಪಿ ಉಮೇಶ್ ಅ‍ವರು, ಇದುವರೆಗೆ ಪ್ರಕರಣದ ಬಗ್ಗೆ ನಡೆದಿರುವ ತನಿಖೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಪೂರ್ವ ವಿಭಾಗದ ಪೊಲೀಸರು ಸಂಗ್ರಹಿಸಿರುವ ಸಾಕ್ಷ್ಯಗಳು, ದಾಖಲೆಗಳು ಹಾಗೂ ಶಾಸಕ ಬೈರತಿ ಬಸವರಾಜು ಸೇರಿದಂತೆ ಕೆಲವರ ವಿಚಾರಣೆ ಬಗ್ಗೆ ಸಿಐಡಿ ಅಧಿಕಾರಿಗಳು ವಿವರ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಬೈರತಿಗೆ ಈಗ ಸಿಐಡಿ ತನಿಖೆ ಬಿಸಿ:

ಈ ಕೊಲೆ ಪ್ರಕರಣದಲ್ಲಿ ಕೆ.ಆರ್‌. ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅ‍ವರಿಗೆ ಸಿಐಡಿ ತನಿಖೆ ಸಂಕಷ್ಟ ಎದುರಾಗಿದೆ.

ಈಗಾಗಲೇ ಇದೇ ಪ್ರಕರಣ ಸಂಬಂಧ ಎರಡು ಬಾರಿ ಅವರನ್ನು ತನಿಖಾಧಿಕಾರಿಯಾಗಿದ್ದ ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿ ಪ್ರಕಾಶ್ ರಾಥೋಡ್‌ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು. ಈಗ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿದೆ. ಹೀಗಾಗಿ ಮತ್ತೆ ಸಿಐಡಿ ಮುಂದೆ ಸಹ ಅವರು ವಿಚಾರಣೆಗೆ ಹಾಜರಾಗಬೇಕಾಗುತ್ತದೆ. ಅಲ್ಲದೆ ಕೆಲವೇ ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಶಾಸಕರಿಗೆ ಸಿಐಡಿ ಸಹ ನೋಟಿಸ್ ನೀಡಲಿದೆ.

PREV
Read more Articles on

Recommended Stories

ಬಾಯ್‌ಫ್ರೆಂಡಿಂದ ₹2.5 ಕೋಟಿ ಸುಲಿಗೆ ಮಾಡಲು ಮಾಜಿ ಪ್ರಿಯತಮೆ ಯತ್ನ
ಅಣ್ಣನ ಮೇಲಿನ ದ್ವೇಷಕ್ಕೆ ಇಬ್ಬರು ಮಕ್ಕಳನ್ನು ಭೀಕರವಾಗಿ ಕೊಂದ ಚಿಕ್ಕಪ್ಪ