ಬೆಂಗಳೂರು : ತಮ್ಮ ನೆರೆಮನೆಯ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಮಕ್ಕಳಿಲ್ಲದ ಬಂಧುವಿಗೆ ನೀಡಲು ಯತ್ನಿಸಿದ್ದ ಆರೋಪದ ಮೇರೆಗೆ ಇಬ್ಬರು ಮಹಿಳೆಯರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ವಿಶ್ವೇಶ್ವರಯ್ಯ ಲೇಔಟ್‌ನ ನಿವಾಸಿಗಳಾದ ಸುಲೋಚನ ಹಾಗೂ ಬಸವಮ್ಮ ಬಂಧಿತರಾಗಿದ್ದು, ಆರೋಪಿಗಳಿಂದ ಅಪಹೃತ ಬಾಲಕಿಯನ್ನು ಕೃತ್ಯ ನಡೆದ ಕೆಲವೇ ತಾಸುಗಳಲ್ಲಿ ಪೊಲೀಸರು ರಕ್ಷಿಸಿದ್ದಾರೆ. ಎರಡು ದಿನಗಳ ಹಿಂದೆ ಮನೆ ಮುಂದೆ ಆಟವಾಡುತ್ತಿದ್ದ ತಮ್ಮ ಪರಿಚಿತರ ಬಾಲಕಿಯನ್ನು ಅಪಹರಿಸಿ ಮಕ್ಕಳಿಲ್ಲದ ಸಂಬಂಧಿಕಳಿಗೆ ಕೊಡಲು ರಾಯಚೂರು ಜಿಲ್ಲೆಗೆ ಸುಲೋಚನ ತೆರಳಿದ್ದರು. ಇತ್ತ ಬಾಲಕಿ ನಾಪತ್ತೆ ಬಗ್ಗೆ ತನಿಖೆಗಿಳಿದ ಜ್ಞಾನಭಾರತಿ ಠಾಣೆ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೆರೆಹೊರೆಯಲ್ಲಿ ವಾಸ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿದ್ದಪ್ಪ ಮತ್ತು ವೀರಮ್ಮ ದಂಪತಿ ಅವರು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಸಿದ್ದಪ್ಪ ದಂಪತಿ ನೆರೆಹೊರೆಯಲ್ಲೇ ಬಸವಮ್ಮ ಹಾಗೂ ಸುಲೋಚನ ನೆಲೆಸಿದ್ದರು. ಒಂದೇ ಜಿಲ್ಲೆಯವರಾಗಿದ್ದರಿಂದ ಸಿದ್ದಪ್ಪ ಕುಟುಂಬ ಹಾಗೂ ಆರೋಪಿಗಳಿಗೆ ಆತ್ಮೀಯ ಒಡನಾಟವಿತ್ತು. ಇದೇ ಗೆಳೆತನದಲ್ಲೇ ಮನೆಗೆ ಬಂದು ಹೋಗುವುದು ಸಹ ಅವರು ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುಲೋಚನಾಳ ಸೋದರ ಸಂಬಂಧಿಗೆ ಮಕ್ಕಳಿರಲಿಲ್ಲ. ಹೀಗಾಗಿ ಮಗು ದತ್ತು ಪಡೆದು ಸಾಕಲು ಅವರು ಯೋಜಿಸಿದ್ದರು. ಈ ಬಗ್ಗೆ ತಮ್ಮ ಬಂಧು ಸುಲೋಚನಾ ಜತೆ ಅವರು ಹೇಳಿಕೊಂಡಿದ್ದರು. ಆಗ ತಮ್ಮ ಸಂಬಂಧಿ ನೋವಿಗೆ ಸ್ಪಂದಿಸಿದ ಸುಲೋಚನಾ, ಬಡವರ ಕುಟುಂಬದ ಮಕ್ಕಳನ್ನು ಅಪಹರಿಸಿ ಸಂಬಂಧಿಗೆ ಕೊಡಲು ನಿರ್ಧರಿಸಿದ್ದಳು. ಈ ಕೃತ್ಯಕ್ಕೆ ಬಸಮ್ಮ ಸಹ ಸಾಥ್ ಕೊಟ್ಟಿದ್ದಾರೆ. ಅಂತೆಯೇ ಮನೆ ಮುಂದೆ ಶನಿವಾರ ಆಟವಾಡುತ್ತಿದ್ದ ಸಿದ್ದಪ್ಪ ದಂಪತಿಯ ಮಗಳನ್ನು ಸುಲೋಚನಾ ಹಾಗೂ ಬಸವಮ್ಮ ಕರೆದೊಯ್ದಿದ್ದಾರೆ.
ಇತ್ತ ಮನೆ ಬಳಿ ಮಗಳು ಕಾಣದೆ ಹೋದಾಗ ಕಂಗಲಾದ ಆಕೆಯ ಪೋಷಕರು, ಸುತ್ತುಮುತ್ತ ಹುಡುಕಾಡಿ ಕೊನೆಗೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದರು. ಈ ಮಗು ನಾಪತ್ತೆ ಬಗ್ಗೆ ವಿಷಯ ತಿಳಿದ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಅವರು, ಕೂಡಲೇ ಮಗು ಪತ್ತೆಗೆ ವಿಶೇಷ ತಂಡ ರಚಿಸಿದರು. ಘಟನಾ ಸ್ಥಳದ ಸುತ್ತಮುತ್ತ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬಾಲಕಿ ಜತೆ ಮಹಿಳೆಯ ದೃಶ್ಯಾವಳಿ ಸಿಕ್ಕಿದೆ.
ಈ ಸುಳಿವು ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳ ಪೂರ್ವಾಪರ ಮಾಹಿತಿ ಸಿಕ್ಕಿದೆ. ಕೂಡಲೇ ರಾಯಚೂರು ಜಿಲ್ಲಾ ಎಸ್ಪಿ ಪುಟ್ಟಮಾದಯ್ಯ ಅವರನ್ನು ಸಂಪರ್ಕಿಸಿ ಆರೋಪಿಗಳ ಬಗ್ಗೆ ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ. ಕೊನೆಗೆ ರಾಯಚೂರು ಪೊಲೀಸರ ಸಹಕಾರದಲ್ಲಿ ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಹರಣಕ್ಕೊಳಗಾಗಿದ್ದ ಬಾಲಕಿ ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿದ್ದಾಳೆ.
ಬಾಲಕಿ ಓದಿಗೆ ಡಿಸಿಪಿ ನೆರವು:
ಅಪಹೃತ ಬಾಲಕಿ ಶಿಕ್ಷಣಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಆರ್ಥಿಕ ಸಮಸ್ಯೆ ಕಾರಣಕ್ಕೆ ಮಗಳನ್ನು ಸಿದ್ದಪ್ಪ ದಂಪತಿ ಶಾಲೆಗೆ ಸೇರಿಸಿರಲಿಲ್ಲ. ಈ ಸಂಗತಿ ತಿಳಿದು ಕೂಲಿ ಕಾರ್ಮಿಕರ ಮಗಳ ವಿದ್ಯಾಭ್ಯಾಸಕ್ಕೆ ಡಿಸಿಪಿ ನೆರವು ನೀಡಲು ಮುಂದಾಗಿದ್ದಾರೆ.
ತನ್ನ ತಂದೆ-ತಾಯಿ ಕೂಲಿ ಕೆಲಸಕ್ಕೆ ತೆರಳಿದರೆ ಮನೆಯಲ್ಲೇ ಬಾಲಕಿ ಇರುತ್ತಿದ್ದಳು. ಆಕೆಯನ್ನು ಶಾಲೆಗೆ ಪೋಷಕರು ದಾಖಲಾತಿ ಮಾಡಿಲ್ಲ. ಮಗು ಕೂಡ ತುಂಬಾ ಚೂಟಿ ಇದೆ. ಹೀಗಾಗಿ ನಾವೇ (ಪೊಲೀಸರು) ಒಳ್ಳೆಯ ಶಾಲೆಗೆ ಬಾಲಕಿಯನ್ನು ಸೇರಿಸಲು ನಿರ್ಧರಿಸಿದ್ದೇವೆ ಎಂದು ಡಿಸಿಪಿ ಗಿರೀಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು
.-ವಿಶ್ವೇಶ್ವರಯ್ಯ ಲೇಔಟ್ ನಿವಾಸಿಗಳಾದ ಸುಲೋಚನ, ಬಸವಮ್ಮ ಬಂಧಿತರು-ಸಿಂಧನೂರು ತಾ. ಸಿದ್ದಪ್ಪ, ವೀರಮ್ಮ ದಂಪತಿ ಈ ಲೇಔಟ್‌ಲ್ಲಿ ನೆಲೆಸಿದ್ದರು -ಈ ದಂಪತಿಗೆ ಸುಲೋಚನ, ಬಸವಮ್ಮ ನೆರೆಹೊರೆಯವರು ಅಲ್ಲದೆ ಒಂದೇ ಜಿಲ್ಲೆಯವರು-ಸಿದ್ದಪ್ಪ ಕುಟುಂಬ, ಆರೋಪಿಗಳಿಗೆ ಆತ್ಮೀಯ ಒಡನಾಟ, ಮನೆಗೆ ಬಂದು ಹೋಗುತ್ತಿದ್ದರು
-ಮಕ್ಕಳಿಲ್ಲದ ತನ್ನ ಸಂಬಂಧಿಕಳಿಗಾಗಿ ಬಾಲಕಿ ಅಪಹರಿಸಿ ನೀಡಲು ಸುಲೋಚನಾ ಯೋಜಿಸಿದ್ದಳು, ಇದಕ್ಕೆ ಬಸವಮ್ಮಸಾಥ್- 2 ದಿನಗಳ ಹಿಂದೆ ಮನೆ ಮುಂದೆ ಆಡುತ್ತಿದ್ದ ಬಾಲಕಿಯ ಅಪಹರಿಸಿದರು ಸಿಂಧನೂರಿಗೆ ಕೆರದೊಯ್ದಿದ್ದರು.-ಪೋಷಕರ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರಿಗೆ ಬಾಲಕಿ ಜತೆ ಮಹಿಳೆಯ ದೃಶ್ಯಾವಳಿ ಸಿಕ್ಕಿದೆ