ವಿಂಡ್ಸರ್‌ ಮ್ಯಾನರ್‌ ಮೇಲ್ಸೇತುವೆಯಲ್ಲಿ ರೈಲಿನಿಂದ ಆಯತಪ್ಪಿ ಬಿದ್ದು ಯುವಕ ಸಾವು

KannadaprabhaNewsNetwork | Updated : Mar 06 2024, 01:16 PM IST

ಸಾರಾಂಶ

ಅರಮನೆ ರಸ್ತೆಯ ವಿಂಡ್ಸರ್‌ ಮ್ಯಾನರ್‌ ಮೇಲ್ಸೇತುವೆಯಲ್ಲಿ ರೈಲಿನಿಂದ ಆಯತಪ್ಪಿ ರೈಲ್ವೆ ಹಳಿ ಮೇಲೆ ಬಿದ್ದು ಬಳಿಕ ಮೇಲ್ಸೇತುವೆ ಕೆಳ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದರ ಮೇಲೆ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅರಮನೆ ರಸ್ತೆಯ ವಿಂಡ್ಸರ್‌ ಮ್ಯಾನರ್‌ ಮೇಲ್ಸೇತುವೆಯಲ್ಲಿ ರೈಲಿನಿಂದ ಆಯತಪ್ಪಿ ರೈಲ್ವೆ ಹಳಿ ಮೇಲೆ ಬಿದ್ದು ಬಳಿಕ ಮೇಲ್ಸೇತುವೆ ಕೆಳ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದರ ಮೇಲೆ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ತಮಿಳುನಾಡು ಮೂಲದ ಗೌರಿಶಂಕರ್‌(22) ಮೃತ. ಮಂಗಳವಾರ ಮಧ್ಯಾಹ್ನ 3.20ರ ಸುಮಾರಿಗೆ ಈ ಘಟನೆ ನಡೆದಿದೆ. ಜೇಬಿನಲ್ಲಿ ಸಿಕ್ಕ ರೈಲ್ವೆ ಟಿಕೆಟ್‌, ಮೊಬೈಲ್‌ ಹಾಗೂ ಗುರುಚಿನ ಚೀಟಿ ಆಧಾರದ ಮೇಲೆ ಮೃತನ ಗುರುತು ಪತ್ತೆಯಾಗಿದೆ. ಘಟನೆ ಸಂಬಂಧ ಮೃತನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಅವರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನ ಆಂಬೂರು ಮೂಲದ ಗೌರಿಶಂಕರ್‌ ನಗರದ ಮಾಗಡಿ ರಸ್ತೆಯ ಕೆ.ಪಿ.ಅಗ್ರಹಾರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಅಗರಬತ್ತಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮನೆಯ ಕೆಲಸದ ನಿಮಿತ್ತ ಮಂಗಳವಾರ ಚೆನ್ನೈ ರೈಲಿನಲ್ಲಿ ಊರಿನತ್ತ ಪ್ರಯಾಣ ಬೆಳೆಸಿದ್ದ. ಆದರೆ, ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಟ ಕೇವಲ 10 ನಿಮಿಷಕ್ಕೆ ರೈಲಿನಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ.

ಬಾಗಿಲ ಬಳಿ ನಿಂತು ಪ್ರಯಾಣ: ಗೌರಿ ಶಂಕರ್‌ ಪ್ರಯಾಣದ ವೇಳೆ ಬೋಗಿಯ ಬಾಗಿಲು ಬಳಿ ನಿಂತಿದ್ದ. ರೈಲು ವಿಂಡ್ಸರ್‌ ಮ್ಯಾನರ್‌ ಮೇಲ್ಸೇತುವೆಯಲ್ಲಿ ತೆರಳುವಾಗ ಆಯ ತಪ್ಪಿ ಗೌರಿಶಂಕರ್‌ ಮೇಲ್ಸೇತುವೆಯ ರೈಲ್ವೆ ಹಳಿಗೆ ಬಿದ್ದಿದ್ದಾನೆ. 

ಬಳಿಕ ನಿಯಂತ್ರಣ ಸಿಗದೆ ಉರುಳಿ ಮೇಲ್ಸೇತುವೆ ಕೆಳ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದರ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈತ ಬಿದ್ದ ರಭಸಕ್ಕೆ ಕಾರಿನ ಗಾಜುಗಳು ಪುಡಿಯಾಗಿದ್ದು, ಕಾರು ಕೊಂಚ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್‌ ಕಾರಿನ ಚಾಲಕ ಸೇರಿದಂತೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಸುದ್ದಿ ತಿಳಿದು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಗೌರಿಶಂಕರ್‌ ರೈಲಿನಿಂದ ಆಯಾ ತಪ್ಪಿ ಮೊದಲಿಗೆ ರೈಲ್ವೆ ಹಳಿ ಮೇಲೆ ಬಿದ್ದು ಬಳಿಕ ಕಾರಿನ ಮೇಲೆ ಬಿದ್ದು ಮೃತಪಟ್ಟಿದ್ದಾನೆ. 

ಮೇಲ್ನೋಟಕ್ಕೆ ಇದು ಆಕಸ್ಮಿಕ ಘಟನೆಯಂತೆ ಕಂಡು ಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಖಚಿತ ಮಾಹಿತಿ ಲಭ್ಯವಾಗಲಿದೆ. ಈ ಸಂಬಂಧ ಬೆಂಗಳೂರು ನಗರ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article