ಸಿನಿವಾರ್ತೆ
ಅಮೆಜಾನ್ ಪ್ರೈಮ್‌ನ ಅತ್ಯಂತ ಜನಪ್ರಿಯ, ಪ್ರಪಂಚದಾದ್ಯಂತ ಅತಿ ಹೆಚ್ಚು ಜನ ನೋಡಿರುವ ‘ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ ಆಫ್ ಪವರ್’ ಸೀರೀಸ್‌ನ ಎರಡನೇ ಸೀಸನ್‌ನ ಪುಟಾಣಿ ಟೀಸರೊಂದು ರಿಲೀಸಾಗಿದೆ. ಲಾರ್ಡ್ ಆಫ್ ದಿ ರಿಂಗ್ಸ್ ಅಭಿಮಾನಿಗಳು ಆಗಸ್ಟ್ 29ರಂದು ಬಿಡುಗಡೆಯಾಗುತ್ತಿರುವ ಇದರ ಹೊಸ ಸೀಸನನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಸೀರೀಸ್ ಕನ್ನಡದಲ್ಲಿಯೂ ಮೂಡಿಬರಲಿದೆ ಅನ್ನುವುದು ವಿಶೇಷ.
ವಿಶಿಷ್ಟ ಎಂದರೆ ಈ ಟೀಸರಲ್ಲಿ ವಿಲನ್ ಸೌರೋನ್‌ನ ಹೊಸ ರೂಪವನ್ನು ಪರಿಚಯಿಸಲಾಗಿದೆ. ಹೀರೋಗಿಂತ ಅವನಿಗೇ ಜಾಸ್ತಿ ಮರ್ಯಾದೆ ಕೊಡುತ್ತಿರುವ ಲಾರ್ಡ್ ಆಫ್ ದಿ ರಿಂಗ್ಸ್ ಅಭಿಮಾನಿ ಗ್ಯಾಂಗ್ ಅವನ ಕುರಿತು ಒಂದರ ಹಿಂದೊಂದು ರೀಲ್ಸ್, ಶಾರ್ಟ್ಸ್ ಮಾಡಿ ಮಾಡಿ ಬಿಡುತ್ತಿದೆ. ಅಷ್ಟರ ಮಟ್ಟಿಗೆ ವಿಲನ್ ಸೌರೋನ್ ಕ್ರೇಜ್ ಹುಟ್ಟಿಸಿದ್ದಾನೆ.
ಈ ಸೀರೀಸ್ ಎಷ್ಟು ಸೊಗಸಾಗಿದೆಯೋ ಈ ಸೀರೀಸ್ ಕತೆ ಆರಂಭದ ಕತೆಯೋ ಅಷ್ಟೇ ರೋಚಕ. ಜೆಆರ್‌ಆರ್ ಟಾಲ್ಕಿನ್ ಎಂಬ ಇಂಗ್ಲಿಷ್ ಸಾಹಿತಿಯ ಲಾರ್ಡ್ ಆಫ್ ದಿ ರಿಂಗ್ಸ್ ಕತೆಯನ್ನು ಓದಿ ಓದುಗರು ಥ್ರಿಲ್ ಆಗಿದ್ದರು.
ಅಮೆಜಾನ್ ಪ್ರೈಮ್‌ನವರು ಅದನ್ನು ನೋಡಿ ಹಕ್ಕನ್ನು ಖರೀದಿಸಿ ಅಮೆರಿಕಾದ ಚಿತ್ರಕತೆಗಾರರನ್ನು ಒಟ್ಟುಗೂಡಿಸಿ ಸ್ಕ್ರೀನ್‌ಪ್ಲೇ ಬರೆಸಿದರು. ಭಯಂಕರ ಖರ್ಚು ಮಾಡಿ ಬೇರೆಯದೇ ಆದ ಜಗತ್ತು ಸೃಷ್ಟಿಸಿ ವೆಬ್ ಸೀರೀಸ್ ಆಗಿ ಬಿಟ್ಟರು. ಜಗತ್ತು ಈ ಮೋಹಕ ದೃಶ್ಯಾವಳಿಗಳಿಗೆ ಮರುಳಾಯಿತು. ಅದರ ಫಲವೇ ಈಗ ರಿಲೀಸಾಗಿರುವ ಎರಡನೇ ಟೀಸರ್ ಭಾರಿ ಸದ್ದು ಮಾಡುತ್ತಿರುವುದು. ಇವೆಲ್ಲವನ್ನೂ ಕನ್ನಡ ಚಿತ್ರರಂಗ ಗಮನಿಸಬೇಕಿದೆ. ಯಾಕೆಂದರೆ ಕಥಾ ಜಗತ್ತು ಬಹಳ ವಿಸ್ತಾರವಾಗಿದೆ. ಪ್ರೇಕ್ಷಕ ಅದರಲ್ಲಿ ಕಳೆದುಹೋಗಿ ಬಹಳ ಸಮಯವೇ ಆಗಿದೆ.