;Resize=(412,232))
ನವದೆಹಲಿ: ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರಾದ ಅನಂತ್ ನಾಗ್ (78) ಅವರಿಗೆ 2024ರ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ.
ಚಿತ್ರರಂಗದಲ್ಲಿ ಅವರ ಅನುಪಮ ಸೇವೆ ಗಮನಿಸಿ ಕಳೆದ ವರ್ಷವಷ್ಟೇ ಕೇಂದ್ರ ಸರ್ಕಾರ ಅವರಿಗೆ ಪದ್ಮಭೂಷಣ ನೀಡಿ ಗೌರವಿಸಿತ್ತು. ಅದರ ಬೆನ್ನಲ್ಲೇ ಭಾರತೀಯ ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಸೇವೆಗಾಗಿ ನೀಡುವ ಅತ್ಯುನ್ನತ ಗೌರವವೂ ಹಿರಿಯ ನಟನನ್ನು ಹುಡುಕಿಕೊಂಡು ಬಂದಿದೆ. ಸೆ.22ರಂದು ಗುಜರಾತ್‌ನ ಕೇವಾಡಿಯದಲ್ಲಿ ನಡೆಯಲಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
5 ದಶಕಗಳಿಗೂ ಹೆಚ್ಚಿನ ತಮ್ಮ ಸುದೀರ್ಘ ಅಭಿನಯ ಪಯಣದಲ್ಲಿ ಅನಂತ್ ನಾಗ್ 7 ಭಾಷೆಗಳಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಅವರು, ‘ಮಿಂಚಿನ ಓಟ’, ‘ಹಂಸಗೀತೆ’, ‘ಅಂಕುರ್’ ಮತ್ತು ‘ಮಂಥನ್’ ಮುಂತಾದ ಸಾರ್ವಕಾಲಿಕ ಯಶಸ್ವಿ ಹಾಗೂ ಕಲಾತ್ಮಕ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ದಾದಾಸಾಹೇಬ್ ಫಾಲ್ಕೆ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅನಂತ್ ನಾಗ್ ಅವರ ವೈವಿಧ್ಯಮಯ ಅಭಿನಯ ಪ್ರತಿಯೊಂದು ತಲೆಮಾರಿನ ನಟರಿಗೂ ಸ್ಫೂರ್ತಿಯಾಗಿದೆ ಎಂದು ಪತ್ರಿಕಾ ಮಾಹಿತಿ ಕಾರ್ಯಾಲಯ (ಪಿಐಬಿ) ತಿಳಿಸಿದೆ.
ಕಳೆದ ಹಲವು ದಶಕಗಳಿಂದ, ಅನಂತ್ ನಾಗ್ ಅವರ ಸಹಜ ಅಭಿನಯ, ಗಮನಾರ್ಹ ವೈವಿಧ್ಯ ಹಾಗೂ ಶ್ರೇಷ್ಠ ಕಲಾಪ್ರತಿಭೆಯು ಭಾರತೀಯ ಚಿತ್ರರಂಗದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ, ಅವಿಸ್ಮರಣೀಯ ಛಾಪನ್ನು ಮೂಡಿಸಿದೆ.
ನರೇಂದ್ರ ಮೋದಿ, ಪ್ರಧಾನಿ
ಅನಂತನಾಗ್‌ರಿಗೆ ಫಾಲ್ಕೆ ಪ್ರಶಸ್ತಿ ಬಂದಿದ್ದು ಸಮಸ್ತ ಕನ್ನಡಿಗರಿಗೆ ಹೆಮ್ಮೆ, ಸಂತಸದ ಕ್ಷಣ. ಅವರು ತಮ್ಮ ನೈಜ ನಟನೆ, ಸಂಯಮದ ಮೂಲಕ ದಶಕಗಳ ಕಾಲ ಕಲಾರಂಗವನ್ನು ಶ್ರೀಮಂತಗೊಳಿಸಿದ್ದಾರೆ. ಈ ಗೌರವ ಕನ್ನಡ ಕಲಾಜಗತ್ತಿಗೆ ಸಂದ ಮಹಾನ್ ಮನ್ನಣೆ.
- ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ
ಕಿರೀಟಕ್ಕೆ ಗರಿ
ಅನಂತ್ ನಾಗ್ ಚಿತ್ರರಂಗದಲ್ಲಿ ಅಪರೂಪದ ಪ್ರತಿಭೆ. ಅವರಿಗೆ ಫಾಲ್ಕೆ ಗೌರವ ಸಂದಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಡಾ.ರಾಜ್‌ಕುಮಾರ್ ಅವರ ನಂತರ ಕನ್ನಡ ಭುವನೇಶ್ವರಿಯ ಕೀರ್ತಿ ಕಿರೀಟಕ್ಕೆ ಮತ್ತೊಂದು ಗರಿ ಮುಡಿಸಿದ ಹೆಗ್ಗಳಿಕೆ ಅವರದ್ದಾಗಿದೆ.
- ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ
ಕನ್ನಡದ ಇಬ್ಬರು ನಟರಿಗೆ ಗೌರವ
ಅನಂತ್ ನಾಗ್ ಅವರು ಫಾಲ್ಕೆಗೆ ಭಾಜನರಾಗುವ ಮೂಲಕ ಕನ್ನಡದ 2 ನಟರಿಗೆ ಹಾಗೂ ಒಟ್ಟಾರೆ ಐವರು ಕನ್ನಡಿಗರು ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾದಂತಾಗಿದೆ. ಈ ಮೊದಲು ವರನಟ ಡಾ. ರಾಜ್‌ಕುಮಾರ್ (1995) ಅವರು ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಆ ಬಳಿಕ ಕನ್ನಡದ ಸೇವೆಗಾಗಿ ಈ ಗೌರವ ಪಡೆಯುತ್ತಿರುವ 2ನೇ ನಟ ನಾಗ್ ಆಗಿದ್ದಾರೆ. ಇನ್ನು ಬಹುಭಾಷಾ ನಟ, ಕನ್ನಡಿಗರಾದ ರಜನೀಕಾಂತ್ (2019), ಹಿಂದಿ ಚಿತ್ರರಂಗ ಸೇವೆಗೆ ಖ್ಯಾತ ಛಾಯಾಗ್ರಾಹಕ ವಿ.ಕೆ. ಮೂರ್ತಿ (2008) ಹಾಗೂ ಹಿಂದಿ ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆಗೆ ಶ್ಯಾಮ್ ಬೆನಗಲ್ (2005) ಫಾಲ್ಕೆ ಪ್ರಶಸ್ತಿ ಪಡೆದಿದ್ದರು.