ದೀಪಾವಳಿಗೂ ಏರಲಿಲ್ಲ ಕಾರು ಮಾರಾಟ : ಕಂಪನಿಗಳ ನಿರೀಕ್ಷೆ ಹುಸಿ - ₹79000 ಕೋಟಿಯ ಕಾರು ಸಂಗ್ರಹ

KannadaprabhaNewsNetwork | Updated : Nov 01 2024, 06:43 AM IST

ಸಾರಾಂಶ

ದೀಪಾವಳಿ ವೇಳೆಗಾದರೂ ಕಾರು ಮಾರಾಟ ಏರಬಹುದು ಎಂಬ ಮಾರಾಟಗಾರರ, ಕಂಪನಿಗಳ ನಿರೀಕ್ಷೆ ಹುಸಿಯಾಗಿದ್ದು, ಈ ಹಬ್ಬದ ಋತುವಿನಲ್ಲೂ ಕಾರು ಮಾರಾಟ ನಿರೀಕ್ಷಿತ ವೇಗ ಪಡೆದಿಲ್ಲ.

ಮುಂಬೈ: ದೀಪಾವಳಿ ವೇಳೆಗಾದರೂ ಕಾರು ಮಾರಾಟ ಏರಬಹುದು ಎಂಬ ಮಾರಾಟಗಾರರ, ಕಂಪನಿಗಳ ನಿರೀಕ್ಷೆ ಹುಸಿಯಾಗಿದ್ದು, ಈ ಹಬ್ಬದ ಋತುವಿನಲ್ಲೂ ಕಾರು ಮಾರಾಟ ನಿರೀಕ್ಷಿತ ವೇಗ ಪಡೆದಿಲ್ಲ. ಹೀಗಾಗಿ ಮಾರಾಟಗಾರರ ಬಳಿ ಮಾರಾಟಕ್ಕೆ ಕಾದು ಕುಳಿತ ಕಾರುಗಳ ಸಂಖ್ಯೆ 7.69 ಲಕ್ಷಕ್ಕೆ ಏರಿದೆ. 

ಇವುಗಳ ಮೊತ್ತ 79000 ಕೋಟಿ ರುಪಾಯಿ. ಕಳೆದ ಮೇ ತಿಂಗಳಿನಿಂದಲೂ ವಾಹನಗಳ ಮಾರಾಟ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅಕ್ಟೋಬರ್‌ನಲ್ಲಿ ಶೇ.18.81ರಷ್ಟು ವಾಹನ ಮಾರಾಟ ಕುಸಿದಿದೆ. ಆರಂಭಿಕ ಬೆಲೆಯಾದ 10 ರಿಂದ 25 ಲಕ್ಷ ರು. ಮೌಲ್ಯದ ಕಾರುಗಳನ್ನು ಕೊಳ್ಳಲು ಗ್ರಾಹಕರು ಮುಂದೆ ಬರುತ್ತಿಲ್ಲ ಎಂದು ಮಾರಾಟಗಾರರು ಪ್ರವೃತ್ತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇದೇ ಮೊದಲ ಬಾರಿಗೆನ್ಯೂಯಾರ್ಕ್‌ ಶಾಲೆಗಳಿಗೆ ಅಧಿಕೃತ ದೀಪಾವಳಿ ರಜೆ

ನ್ಯೂಯಾರ್ಕ್‌: ಇದೇ ಮೊದಲ ಬಾರಿಗೆ ಅಮೆರಿಕಾದ ನ್ಯೂಯಾರ್ಕ್‌ ನಗರದಲ್ಲಿ ಸಾರ್ವಜನಿಕ ಶಾಲೆಗಳಿಗೆ ದೀಪಾವಳಿ ಹಬ್ಬಕ್ಕೆ ಅಧಿಕೃತ ರಜೆ ನೀಡಲಾಗಿದೆ. ಈ ಮೂಲಕ ಸ್ಥಳೀಯ 11 ಲಕ್ಷ ವಿದ್ಯಾರ್ಥಿಗಳಿಗೆ ಬೆಳಕಿನ ಹಬ್ಬ ಆಚರಣೆಗೆ ಅನುವು ಮಾಡಿಕೊಡಲಾಗಿದೆ. ನಗರದ ಗವರ್ನರ್‌ ಕ್ಯಾಥಿ ಹೋಚುಲ್ ಅವರು ಈ ಆದೇಶಕ್ಕೆ ಸಹಿ ಮಾಡಿದ್ದಾರೆ. ನವೆಂಬರ್‌ 1ರಂದು ಶಾಲೆಗಳು ಮುಚ್ಚಿರುತ್ತವೆ. ನಗರದ ಮೇಯರ್‌ ಕಚೇರಿ ವಿದೇಶಾಂಗ ವ್ಯವಹಾರ ವಿಭಾಗದ ಉಪ ಆಯುಕ್ತ ದಿಲೀಪ್‌ ಚೌಹಾಣ್‌ ಅವರು "ದೀಪಾವಳಿ ಅಧಿಕೃತ ಶಾಲಾ ರಜೆಯಾಗಿ ಇದೇ ಮೊದಲ ಬಾರಿ ಆಚರಿಸಲಾಗುತ್ತಿದೆ. ಇದು ನಗರ ವೈವಿಧ್ಯತೆ, ಸಮುದಾಯ ಹಾಗೂ ನಾಯಕರ ಶ್ರಮದ ಮೈಲುಗಲ್ಲಾಗಿದೆ " ಎಂದು ಹೇಳಿದ್ದಾರೆ.

ಇಸ್ರೇಲ್‌ ಸೂಕ್ತ ಪ್ರಸ್ತಾಪ ಮಾಡಿದರೆ ಕದನವಿರಾಮ ಹಿಜ್ಬುಲ್ಲಾ ಬಾಸ್‌ ನಯೀಂ

ಬೈರೂತ್‌: ಹಿಜ್ಬುಲ್ಲಾ ಮುಖ್ಯಸ್ಥ ಹಸನ್‌ ನಸ್ರಲ್ಲಾ ಸಾವಿನ ಬಳಿಕ ನೂತನ ಮುಖ್ಯಸ್ಥನಾಗಿ ಆಯ್ಕೆಯಾಗಿರುವ ನಯೀಂ ಕಾಸಿಂ, ತಮ್ಮ ವೈರಿ ಇಸ್ರೇಲ್‌ನೊಂದಿಗಿನ ಕದನವನ್ನು ಕೊನೆಗಾಣಿಸುವ ಬಗ್ಗೆ ಮಾತನಾಡಿದ್ದಾರೆ. ‘ಇಸ್ರೇಲ್‌ ಸರಿಯಾದ ರೀತಿಯಲ್ಲಿ ಪ್ರಸ್ತಾಪ ಮಾಡಿದರೆ ಕದನ ವಿರಾಮದ ಬಗ್ಗೆ ಆಲೋಚಿಸಬಹುದು’ ಎಂದಿದ್ದಾರೆ. ಅಲ್‌- ಜದೀದ್ ಸುದ್ದಿ ಸಂಸ್ಥೆ ಜೊತೆ ಕಾಸಿಂ ಈ ಬಗ್ಗೆ ಮಾತನಾಡಿದ್ದು ‘ಇಸ್ರೇಲಿಗಳು ಆಕ್ರಮಣವನ್ನು ನಿಲ್ಲಿಸಿದರೆ ನಾವು ಕದನ ವಿರಾಮ ಒಪ್ಪಿಕೊಳ್ಳುತ್ತೇವೆ. ಆದರೆ ಸರಿಯಾದ ಮತ್ತು ಸೂಕ್ತವಾದ ಷರತ್ತುಗಳೊಂದಿಗೆ ಆಗಬೇಕು’ಎಂದಿದ್ದಾರೆ. ಅಲ್ಲದೇ ಹಗೆತನದ ನಡುವೆ ಶಾಂತಿಯು ಉತ್ತಮವಾದ ಫಲಿತಾಂಶ ಎಂದಿದ್ದಾರೆ.

ಧಾರ್ಮಿಕ ಕಾರಣಕ್ಕೆ ಸಿಂಗಂ, ಭೂಲ್ ಭುಲಯ್ಯಾ ಚಿತ್ರಗಳಿಗೆ ಸೌದಿ ಅರೇಬಿಯಾ ನಿರ್ಬಂಧ

ನವದೆಹಲಿ: ಬಾಲಿವುಡ್‌ನ ಬಹುನಿರೀಕ್ಷಿತ ಸಿಂಗಂ ಅಗೇನ್, ಭೂಲ್ ಭುಲ್ಲಯ್ಯಾ- 3 ಸಿನಿಮಾವನ್ನು ತನ್ನ ದೇಶದಲ್ಲಿ ಬಿಡುಗಡೆ ಮಾಡದಂತೆ ಸೌದಿ ಅರೇಬಿಯಾ ಸರ್ಕಾರ ನಿರ್ಬಂಧಿಸಿದೆ. ಎರಡೂ ಚಿತ್ರದಲ್ಲಿನ ಧಾರ್ಮಿಕ ಅಂಶಗಳು ಸೌದಿಯ ಧಾರ್ಮಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎನ್ನುವ ಕಾರಣಕ್ಕೆ ಬಿಡುಗಡೆಗೆ ಕೇವಲ 1 ದಿನ ಮೊದಲು ನಿರ್ಬಂಧ ಹೇರಲಾಗಿದೆ. ರೋಹಿತ್‌ ಶೆಟ್ಟಿ ನಿರ್ದೇಶನದ ಸಿಂಗಂ ಅಗೇನ್ ಸಿನಿಮಾದಲ್ಲಿ ಅಜಯ್‌ ದೇವಗನ್‌, ಕರೀನಾ ಕಪೂರ್‌. ರಣ್ವೀರ್‌ ಸಿಂಗ್‌ ಸೇರಿದಂತೆ ಬಹು ತಾರಾಂಗಣವಿದೆ. ಈ ಸಿನಿಮಾ ಧಾರ್ಮಿಕ ಸಂಘರ್ಷದ ವಿಚಾರಗಳನ್ನು ಒಳಗೊಂಡಿದೆ ಎನ್ನುವ ಕಾರಣಕ್ಕೆ ನಿಷೇಧಿಸಲಾಗಿದೆ. ಮತ್ತೊಂದೆಡೆ ಭೂಲ್ ಭುಲ್ಲಯ್ಯಾ- 3 ಹಾರರ್‌ ಕಾಮಿಡಿ ಸಿನಿಮಾದಲ್ಲಿ ಸಲಿಂಗಕಾಮಕ್ಕೆ ಸಂಬಂಧಿಸಿದೆ ವಿಚಾರವಿದೆ ಎನ್ನುವ ಕಾರಣಕ್ಕೆ ನಿರ್ಬಂಧ ಹೇರಲಾಗಿದೆ.

ರಸ್ತೆ ಗುಂಡಿ ಹಾರಿದ ವೇಳೆ ಬೈಕ್‌ನಲ್ಲಿದ್ದ ಈರುಳ್ಳಿ ಪಟಾಕಿ ಸ್ಫೋಟ: ಸಾವು

ಹೈದರಾಬಾದ್‌: ಆಂಧ್ರಪ್ರದೇಶದಲ್ಲಿ ದೀಪಾವಳಿಯಂದು ಪಟಾಕಿ ದುರಂತವೊಂದು ನಡೆದಿದೆ. ದ್ವಿಚಕ್ರ ವಾಹನದಲ್ಲಿ ಈರುಳ್ಳಿ ಪಟಾಕಿ ಚೀಲವನ್ನು ಸಾಗಿಸುತ್ತಿದ್ದ ವೇಳೆ ರಸ್ತೆ ಗುಂಡಿಯಲ್ಲಿ ಸ್ಕೂಟರ್‌ ಜಂಪ್ ಆದ ವೇಳೆ ಘರ್ಷಣೆ ಸಂಭವಿಸಿ ಸ್ಫೋಟ ಆಗಿದೆ. ಈ ವೇಳೆ ಬೈಕ್‌ ಸವಾರ ತೀವ್ರ ಗಾಯದಿಂದ ಸಾವನ್ನಪ್ಪಿದ್ದರೆ, ಘಟನಾ ಸ್ಥಳದ ಸಮೀಪದಲ್ಲೇ ನಿಂತಿದ್ದ ಇತರೆ 6 ಜನರಿಗೆ ಗಾಯಗಳಾಗಿದೆ. ಸ್ಪೋಟದ ಭೀಕರತೆ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟೀವಿಯಲ್ಲಿ ಸೆರೆಯಾಗಿದೆ.

Share this article