ಕನ್ನಡನಾಡಿನ ಕರಾವಳಿ ಸ್ಯಾಂಡಲ್‌ವುಡ್‌ನ ಪ್ರಭಾವಳಿ

Published : Jul 24, 2026, 12:16 PM IST
Sandalwood

ಸಾರಾಂಶ

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡಕ್ಕೆ ಲಭಿಸಿದ ಐದೂ ಪುರಸ್ಕಾರ ಸಿಕ್ಕಿದ್ದು ಕರಾವಳಿಗೆ ಟಾಪ್‌- ಗೌರವ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶದ ರೀತಿ ಪ್ರಶಸ್ತಿ ಬಾಚಿಕೊಂಡ ಕರಾವಳಿಯ ಕಲಾವಿದರು

ರಾಜೇಶ್ ಶೆಟ್ಟಿ

ಬೆಂಗಳೂರು :  71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾದಾಗ ಕನ್ನಡ ಚಿತ್ರರಂಗ ಮತ್ತೊಮ್ಮೆ ಕರಾವಳಿಯತ್ತ ತಿರುಗಿ ನೋಡಿತು. ಈ ಸಲ ಕರ್ನಾಟಕಕ್ಕೆ ಸಂದ ಐದೂ ಪ್ರಶಸ್ತಿಗಳನ್ನು ಕರಾವಳಿಗರು ಗೆದ್ದುಕೊಂಡಿದ್ದರು. ಕನ್ನಡ ಚಿತ್ರರಂಗಕ್ಕೆ ಮೊದಲ ಸಲ ದೊರಕಿರುವ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಕರಾವಳಿಯ ರೂಪಶ್ರೀ ವರ್ಕಾಡಿ ಗೆದ್ದು ತಂದರು. ರಕ್ಷಿತ್ ಶೆಟ್ಟಿ ನಿರ್ಮಾಣದ ‘ಮಿಥ್ಯ’ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ಮನ್ನಣೆಯ ಜತೆಗೇ, ಆ ಚಿತ್ರದಲ್ಲಿ ನಟಿಸಿದ ಅತೀಶ್ ಶೆಟ್ಟಿಗೆ ಅತ್ಯುತ್ತಮ ಬಾಲನಟ ಪುರಸ್ಕಾರವನ್ನೂ ತಂದುಕೊಟ್ಟಿತು. ಶಿವಧ್ವಜ್ ನಿರ್ದೇಶಿಸಿದ ‘ಇಂಬು’ ಚಿತ್ರ ಅತ್ಯುತ್ತಮ ತುಳು ಚಿತ್ರವೆಂಬ ಪ್ರಶಸ್ತಿಗೆ ಪಾತ್ರವಾಯಿತು. ಇದನ್ನು ನಿರ್ಮಿಸಿದವರು ಕರಾವಳಿ ಮೂಲದ ಪ್ರಶಾಂತ್ ರೈ. ಇವೆಲ್ಲಕ್ಕೂ ಕಳಸವಿಟ್ಟಂತೆ ಈ ಸಲ ಉತ್ತಮ ಪುಸ್ತಕ ಪ್ರಶಸ್ತಿ ಕೆಂಚನೂರು ಪ್ರದೀಪ್ ಶೆಟ್ಟಿಯವರಿಗೆ ಸಂದಿದೆ. ತನ್ಮೂಲಕ ಚಿತ್ರರಂಗದಲ್ಲಿ ಕರಾವಳಿ ಅಬ್ಬರ ಮುಂದುವರಿದಿದೆ.

ಕರಾವಳಿಯ ಪ್ರತಿಭಾವಂತರು ಕನ್ನಡ ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಲೇ ಬಂದಿದ್ದಾರೆ. ಹಿರಿಯ ನಟಿಯರಾದ ಲೀಲಾವತಿ, ಪಂಡರೀಬಾಯಿ, ಜಯಮಾಲಾ, ಕಲ್ಪನಾ, ಹರಿಣಿ, ಮೈನಾವತಿ ಮುಂತಾದವರು ಎಪ್ಪತ್ತರ ದಶಕದಲ್ಲೇ ಕನ್ನಡ ಚಿತ್ರರಂಗವನ್ನು ಅಭಿನಯದ ಮೂಲಕ ಶ್ರೀಮಂತಗೊಳಿಸಿದರು. ನಿರ್ದೇಶಕ ವಿಠಲಾಚಾರ್ಯರ ಶೈಲಿ ಆ ಕಾಲಕ್ಕೇ ಜನಪ್ರಿಯವಾಗಿತ್ತು. ನಂತರದ ಅವಧಿಯಲ್ಲಿ ವಿಶುಕುಮಾರ್ ಅವರು ಕರಾವಳಿ, ಪ್ರಜೆಗಳು ಪ್ರಭುಗಳು, ಅಖಂಡ ಬ್ರಹ್ಮಚಾರಿಗಳು ಚಿತ್ರದ ಮೂಲಕ ಕನ್ನಡ ಚಿತ್ರದ ಗತಿ ಬದಲಿಸಿದರು. ವಾದಿರಾಜ್ ಸಹೋದರರು ನಿರ್ಮಾಣ, ನಿರ್ದೇಶನ, ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರಾದರು. ಬರಹಗಾರರು, ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಕರಾವಳಿಯ ಕಡಲಂಚಿನಿಂದ ಸ್ಯಾಂಡಲ್‌ವುಡ್ ಮಡಿಲಿಗೆ ಬಂದಿದ್ದಾರೆ. ತಮ್ಮ ವಿಶಿಷ್ಟ ಛಾಪು ಮೂಡಿಸಿದ್ದಾರೆ.

ಹೀರೋ ವ್ಯಾಖ್ಯಾನ ಬದಲಿಸಿದ್ದ ಕಾಶೀನಾಥ್‌:

ಕರಾವಳಿಯ ಛಾಯೆ ಮತ್ತು ಮಾಯೆ ಚಿತ್ರರಂಗವನ್ನು ಪ್ರಭಾವಿಸಿದ್ದು ಕಾಶೀನಾಥ್ ಆಗಮನದೊಂದಿಗೆ. ಅನುಭವದಂಥ ಹೊಸ ಕಥಾವಸ್ತುವಿನೊಂದಿಗೆ ಬಂದ ಅವರು, ಹೀರೋ ಹೇಗಿರಬೇಕು ಎಂಬ ವ್ಯಾಖ್ಯಾನವನ್ನೇ ಬದಲಿಸಿದರು. ಹೊಸ ಶೈಲಿಯ ಸಿನಿಮಾ ನಿರ್ಮಾಣ ಮಾಡಿದರು. ಹೊಸ ಥರದ ಕತೆ, ಸಂಭಾಷಣೆಯನ್ನು ಪರಿಚಯಿಸಿದರು. ಅವರ ಬೆನ್ನಿಗೇ ಬಂದ ಉಪೇಂದ್ರ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಚಿತ್ರ ನಿರ್ದೇಶನಕ್ಕೆ ಹೊಸ ಸ್ಪರ್ಶ ನೀಡಿದರು. ಕನ್ನಡ ಚಿತ್ರರಂಗ ಹೊಸತನದಲ್ಲಿ ತುಡಿಯುವಂತೆ ಮಾಡಿದವರಲ್ಲಿ ಉಪೇಂದ್ರರ ಜತೆಗೇ ಬಂದ ವಿ. ಮನೋಹರ್, ಗುರುಕಿರಣ್ ಮುಂತಾದ ಸಂಗೀತ ನಿರ್ದೇಶಕರೂ ಕಾರಣರಾದರು.

2014ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ಅವರ ಹಿಂದೆಯೇ ಬಂದ ರಾಜ್ ಬಿ. ಶೆಟ್ಟಿ, ಕಮರ್ಷಿಯಲ್ ಚಿತ್ರಗಳಿಗೆ ಕಲಾತ್ಮಕ ಸ್ಪರ್ಶ ನೀಡುವ ಮೂಲಕ ಹೊಸ ಪ್ರೇಕ್ಷಕವರ್ಗವನ್ನು ಹುಟ್ಟುಹಾಕಿದರು. ಈ ಮೂವರ ಜತೆಗೇ ಸಂಗೀತ ನಿರ್ದೇಶಕ ರವಿ ಬಸರೂರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, ರಾಷ್ಟ್ರಮಟ್ಟದ ಸಂಗೀತ ನಿರ್ದೇಶಕರು ಬೆರಗಾಗುವಂತೆ ಕುಂದಾಪುರದಲ್ಲಿ ಕುಳಿತೇ ಪಾನ್ ಇಂಡಿಯಾ ಚಿತ್ರಗಳಿಗೆ ಸಂಗೀತ ನೀಡಿದರು. ರಿಷಬ್ ಶೆಟ್ಟಿ ‘ಕಾಂತಾರ’ ಚಿತ್ರದ ಮೂಲಕ ವಿಶ್ವಪ್ರಸಿದ್ಧಿ ಪಡೆದರು. ರಾಜ್ ಬಿ. ಶೆಟ್ಟಿ ಅನನ್ಯ ಶೈಲಿಯ ನಿರ್ದೇಶಕ ಮತ್ತು ಸಹಜ ನಟನೆಯಿಂದ ಮನೆಮಾತಾದರು. ‘ಸು ಫ್ರಮ್ ಸೋ’ ಚಿತ್ರದ ಮೂಲಕ ಜೆಪಿ ತುಮಿನಾಡ್ ಮತ್ತು ತಂಡ ಹಾಸ್ಯಮಯ ಜಗತ್ತನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟು ಮತ್ತೊಂದು ದಾಖಲೆ ಬರೆಯಿತು.

ಎಸ್ಸೆಸ್ಸೆಲ್ಸಿ, ಪಿಯುಸಿ ರೀತಿ ಮೊದಲ ಸ್ಥಾನ:

ಇದರ ಮುಂದುವರಿದ ಭಾಗವೆಂಬಂತೆ ಈ ಸಲ ಕಲಾತ್ಮಕ ಚಿತ್ರಗಳ ವಿಭಾಗಕ್ಕೂ ಕರಾವಳಿಯ ಪ್ರತಿಭಾವಂತರು ಲಗ್ಗೆ ಇಟ್ಟಿದ್ದಾರೆ. ಹಲವಾರು ವರ್ಷಗಳ ಕಾಲ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಮುಂಚೂಣಿಯಲ್ಲಿದ್ದ ಉಡುಪಿ ಮತ್ತು ದಕ್ಷಿಣ ಕನ್ನಡ ಚಿತ್ರಪ್ರಶಸ್ತಿಗಳನ್ನು ಗೆಲ್ಲುವಲ್ಲಿಯೂ ಮೊದಲ ಸ್ಥಾನದಲ್ಲಿದೆ.

ದಕ್ಷಿಣ ಕನ್ನಡದ ಆಡುಮಾತನ್ನು ಕನ್ನಡ ಚಿತ್ರರಂಗ ಹಾಸ್ಯಕ್ಕಾಗಿ ಬಳಸಿಕೊಳ್ಳುತ್ತಿದ್ದ ಕಾಲವಿತ್ತು. ತುಳು ಮತ್ತು ಗ್ರಾಂಥಿಕ ಕನ್ನಡದಲ್ಲಿ ಮಾತಾಡುವುದೇ ತಮಾಷೆಯೆಂದು ಕರೆಯಲ್ಪಡುತ್ತಿತ್ತು. ಈಗ ಅದೇ ತುಳು ಮತ್ತು ದಕ್ಷಿಣ ಕನ್ನಡದ ಭಾಷೆಯ ಸೊಗಡು ಇಡೀ ಜಗತ್ತನ್ನೇ ಗೆದ್ದಿದೆ. ಕೇರಳದಂತೆ ಪ್ರಾದೇಶಿಕತೆಯನ್ನು ಮೈಗೂಡಿಸಿಕೊಂಡಿದೆ. ಪ್ರಾದೇಶಿಕವಾಗಿದ್ದೂ ಜಾಗತಿಕವಾಗುವುದು ಸಾಧ್ಯ ಎಂದು ತೋರಿಸಿಕೊಟ್ಟಿದೆ.

72ನೇ ರಾಷ್ಟ್ರಪ್ರಶಸ್ತಿ ಘೋಷಣೆಯಾಗಿದ್ದು, ಈ ಬಾರಿ ಕನ್ನಡಕ್ಕೆ ಐದು ಪ್ರಶಸ್ತಿಗಳು ದಕ್ಕಿವೆ. ವಿಶೇಷತೆ ಏನೆಂದರೆ, ಈ ಸಲ ಘೋಷಣೆಯಾದ ಐದಕ್ಕೆ ಐದೂ ಪ್ರಶಸ್ತಿಗಳು ಸಂದಿದ್ದು ದಕ್ಷಿಣ ಕನ್ನಡಕ್ಕೆ. ಈ ಮೂಲಕ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಪುನರಾವರ್ತನೆಯಾಗಿದೆ.

ಇತ್ತೀಚೆಗೆ ಕಮರ್ಷಿಯಲ್‌ ಸಿನಿಮಾ ವಿಭಾಗದಲ್ಲಿ ಕರಾವಳಿ ಮೂಲದ ಮಂದಿ ಬಹಳಷ್ಟು ಸಾಧನೆ ಮಾಡಿದ್ದರು. ರಿಷಬ್ ಶೆಟ್ಟಿ, ರಕ್ಷಿತ್‌ ಶೆಟ್ಟಿ, ರಾಜ್ ಬಿ. ಶೆಟ್ಟಿ, ಶ್ರೀನಿಧಿ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದರು. ಅದಕ್ಕೂ ಮೊದಲು ಉಪೇಂದ್ರ ಎಲ್ಲೆಡೆ ಹೆಸರು ಮಾಡಿದ್ದರು. ಇದೀಗ ರಾಷ್ಟ್ರ ಪ್ರಶಸ್ತಿ ವಿಚಾರದಲ್ಲಿಯೂ ಕರಾವಳಿಗರು ಮುಂಚೂಣಿಗೆ ಬಂದಿದ್ದಾರೆ.

ಯಾರಿಗೆ ಯಾವ ಪ್ರಶಸ್ತಿ?

ಅತ್ಯುತ್ತಮ ಪೋಷಕ ನಟಿ ರೂಪಶ್ರೀ ವರ್ಕಾಡಿ

ಅತ್ಯುತ್ತಮ ಪ್ರಾದೇಶಿಕ ಚಿತ್ರ ಮಿಥ್ಯ

ಅತ್ಯುತ್ತಮ ಬಾಲ ನಟ ಅತೀಶ್‌ ಶೆಟ್ಟಿ

ಅತ್ಯುತ್ತಮ ತುಳು ಚಿತ್ರರಿಂಬು

ಉತ್ತಮ ಪುಸ್ತಕ ಪ್ರಶಸ್ತಿ ಕೆಂಚನೂರು ಪ್ರದೀಪ್‌ ಶೆಟ್ಟಿ

ಕನ್ನಡದ ಚಿತ್ರರಂಗದ

ಕರಾವಳಿ ಪ್ರತಿಭೆಗಳು

ಲೀಲಾವತಿ, ಪಂಡರೀಬಾಯಿ, ಜಯಮಾಲಾ, ಕಲ್ಪನಾ, ಹರಿಣಿ, ಮೈನಾವತಿ, ವಿಶುಕುಮಾರ್‌, ವಾದಿರಾಜ್‌ ಸಹೋದರರು, ಕಾಶೀನಾಥ್‌, ಉಪೇಂದ್ರ ವಿ.ಮನೋಹರ್‌, ಗುರುಕಿರಣ್‌, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ರವಿ ಬಸರೂರು, ಜೆಪಿ ತುಮಿನಾಡು ಮತ್ತಿತರರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಸ್ಟಾರ್‌ಗಳು ಸಂಭಾವನೆ ಇಳಿಸಲು ಪಟ್ಟು ಹಿಡಿಯುವುದು ಸರಿಯಲ್ಲ: ಜಯಮಾಲಾ
ಭಾರತೀಯರ ಕನಸನ್ನು ವಿಶ್ವಕ್ಕೆ ಪರಿಚಯಿಸುತ್ತಿದ್ದೇವೆ : ಯಶ್‌