ಬಲಗಾಲಿಟ್ಟು ಚಿತ್ರರಂಗ ಪ್ರವೇಶಿಸುತ್ತಿರುವ ಹೊಸ ನಾಯಕ ನಟನ ಹೆಸರು ಭಗತ್ ಆಳ್ವ ಚಿತ್ರ ರಿಲೀಸ್

KannadaprabhaNewsNetwork |  
Published : Jul 19, 2024, 12:53 AM ISTUpdated : Jul 19, 2024, 05:44 AM IST
ಭಗತ್ ಆಳ್ವ | Kannada Prabha

ಸಾರಾಂಶ

ಹರ್ಷಪ್ರಿಯ ನಿರ್ದೇಶನದ, ಕೆ.ಎಸ್. ರಾಮ್‌ಜಿ ನಿರ್ಮಾಣದ ‘ಹೆಜ್ಜಾರು’ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಗೋಪಾಲಕೃಷ್ಣ ದೇಶಪಾಂಡೆ, ಶ್ವೇತಾ ಲಿಯೋನಿಲ್ಲಾ ಡಿಸೋಜ, ನವೀನ್ ಕೃಷ್ಣ ಪ್ರಧಾನ ಪಾತ್ರದಲ್ಲಿರುವ ಈ ಸಿನಿಮಾ ಮೂಲಕ ಹೊಸ ಹೀರೋ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ.

ಮೊದಲ ಸಿನಿಮಾ ಬಿಡುಗಡೆ ಪ್ರತಿಯೊಬ್ಬ ನಟನ ಕನಸು. ಸುದೀರ್ಘ ಪ್ರಯಾಣದ ಗೆಲುವಿನ ಮೊದಲ ಹೆಜ್ಜೆ. ಹಾಗೆ ಈ ಶುಕ್ರವಾರ ಬಲಗಾಲಿಟ್ಟು ಚಿತ್ರರಂಗ ಪ್ರವೇಶಿಸುತ್ತಿರುವ ನಾಯಕ ನಟನ ಹೆಸರು ಭಗತ್ ಆಳ್ವ. ದಕ್ಷಿಣ ಕನ್ನಡದ ಬೆಳ್ತಂಗಡಿ ಸಮೀಪದ ಮಡಂತ್ಯಾರು ಎಂಬ ಹಳ್ಳಿಯ ತರುಣ. ಎಂಟು ವರ್ಷ ಧಾರಾವಾಹಿ, ಸಿನಿಮಾ ಜಗತ್ತಿನಲ್ಲಿ ರಾತ್ರಿ ಹಗಲು ಶ್ರಮಿಸಿ ಇಂದು ಹೆಜ್ಜಾರು ಸಿನಿಮಾ ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದಾರೆ.

ಬಹುತೇಕರಂತೆ ‘ಸಿನಿಮಾ ಹೀರೋ ಆಗಬೇಕು’ ಎಂದು ಬೆಂಗಳೂರಿಗೆ ಬಂದು ಹಲವು ವರ್ಷಗಳು ಉರುಳಿವೆ. ಝೀ ಕನ್ನಡದ ‘ಒಂದೂರಲ್ಲಿ ರಾಜ ರಾಣಿ’ ಚಿತ್ರದಲ್ಲಿ ನಟಿಸಿ ಆಮೇಲೆ ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆಯಿಂದ ಚೆನ್ನೈಗೆ ಹೋದರು. ಅಲ್ಲಿ ನಾಲ್ಕು ವರ್ಷ ಸಿನಿಮಾ ಜಗತ್ತಲ್ಲಿ ಅಡ್ಡಾಡಿ, ಸಿನಿಮಾ ಬರವಣಿಗೆ, ನಟನೆ ಕುರಿತು ಅಭ್ಯಾಸ ಮಾಡಿ ವಾಪಸ್ ಬಂದಾಗ ಸಿಕ್ಕ ಪ್ರೊಜೆಕ್ಟ್ ‘ಹೆಜ್ಜಾರು’.

‘ಚಿಕ್ಕಂದಿನಲ್ಲಿ ಅಪ್ಪ ಸಿನಿಮಾ ನೋಡಬೇಡ ಎನ್ನುತ್ತಿದ್ದರು. ಅವರು ಹೇಳಿದ್ದಕ್ಕೆ ನಾನು ವಿರುದ್ಧವಾಗಿಯೇ ಮಾಡುತ್ತಿದ್ದೆ. ಸಿನಿಮಾ ಹೀರೋ ಆಗುವ ಕನಸು ಕಂಡೆ. ಕಡೆಗೆ ನನ್ನ ಮನಸ್ಸು ಅವರಿಗೆ ಅರ್ಥವಾಯಿತು. ವಿಶ್ವ ಸಿನಿಮಾಗಳಿಗೆ ಅವರೇ ಪರಿಚಯಿಸಿದರು. ನನ್ನ ಆಸೆ ಬಲವಾಯಿತು. ಅದೇ ಕನಸು ಹೊತ್ತು ಬೆಂಗಳೂರಿಗೆ ಬಂದು. ಸೀರಿಯಲ್‌ನಲ್ಲಿ ನಟಿಸಿದೆ. ಸಿನಿಮಾ ಕೂರಲು ಬಿಡಲಿಲ್ಲ. ಚೆನ್ನೈಗೆ ಹೋಗಿ ಆ ಕನಸು ನೆರವೇರಿಸ ಆಸೆ ಪಟ್ಟೆ. 8 ವರ್ಷದ ಪ್ರಯಾಣ ಇದು. ಕಡೆಗೊಂದು ದಿನ ನನಗೂ ಅವಕಾಶ ಸಿಕ್ಕಿತು. ಆ ಚಂದದ ಅವಕಾಶವೇ ‘ಹೆಜ್ಜಾರು’ ಸಿನಿಮಾ’ ಎಂದು ಭಗತ್‌ ಕನಸಿನ ಆರಂಭದ ಕುರಿತು ಹೇಳುತ್ತಾರೆ.

ಸಿನಿಮಾ ಕುರಿತು ಅವರ ದೊಡ್ಡ ಆಸೆಯೇ ಇದೆ. ‘ನಾನು ಮೊದಲಿಗೆ ಒಬ್ಬ ಸಿನಿಮಾ ಪ್ರೇಮಿ. ವಿಭಿನ್ನ ಸಿನಿಮಾ ಮಾಡಬೇಕು ಎಂಬ ಆಸೆ ನನಗೂ ಇದೆ. ಅದೇ ಪ್ರಕಾರ ಈ ಸಿನಿಮಾ ಆಗಿದೆ. ಹೊಸ ಕಾನ್ಸೆಪ್ಟ್ ಇದೆ. ಸಿನಿಮಾ ನೋಡಿದ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಜನರು ಚಿತ್ರಮಂದಿರಕ್ಕೆ ಬರಬೇಕು. ನಮ್ಮನ್ನು ಹರಸಬೇಕು’ ಎಂಬ ಆಸೆ ವ್ಯಕ್ತ ಪಡಿಸುತ್ತಾರೆ.

‘ಇದೊಂದು ಪ್ಯಾರಲೈಲ್‌ ಲೈಫ್‌ ಸಿನಿಮಾ. ಇನ್ನೊಬ್ಬರ ಜೀವನದಲ್ಲಿ ನಡೆದಿರುವುದು ತನ್ನ ಲೈಫಲ್ಲಿ ನಡೆಯುತ್ತಿದೆ ಎಂಬುದು ನಾಯಕನಿಗೆ ಗೊತ್ತಾಗುತ್ತದೆ. ಸ್ವಲ್ಪ ಚಾಲೆಂಜಿಂಗ್ ಪಾತ್ರ. ಆದರೆ ಚಿತ್ರಕತೆ ತುಂಬಾ ಸೊಗಸಾಗಿದೆ. ಒಂದು ಚಂದದ ಅನುಭವ ಕಟ್ಟಿಕೊಡುವ ರೀತಿಯಲ್ಲಿ ಸಿನಿಮಾ ರೂಪುಗೊಂಡಿದೆ. ಕ್ಲೈಮ್ಯಾಕ್ಸ್‌ ಈ ಸಿನಿಮಾದ ಹೈಲೈಟ್. ಸಿನಿಮಾ ನೋಡಿ ಬಂದ ಪ್ರೇಕ್ಷಕರು ಖುಷಿ ಆಗುತ್ತಾರೆ ಎಂಬ ಭರವಸೆ ನನಗಿದೆ’ ಎನ್ನುತ್ತಾರೆ ಭಗತ್‌.

ಮೊದಲ ಹೆಜ್ಜೆ ಇಟ್ಟಿದ್ದಾರೆ. ದಾರಿ ಇನ್ನೂ ದೂರವಿದೆ. ಹೆಜ್ಜಾರು ಗೆಲುವು ಅವರ ದಾರಿಯನ್ನು ಹಗುರಗೊಳಿಸುವ ನಿರೀಕ್ಷೆ ಇದೆ.

PREV

Recommended Stories

ವೈರಲ್ ಆಗುತ್ತಿರುವ ಸುದೀಪ್‌ ಹೊಸ ಲುಕ್ಕು : ಗಮನ ಸೆಳೆಯುತ್ತಿರುವ ಹೊಸ ಹೇರ್ ಸ್ಟೈಲ್‌
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ