;Resize=(412,232))
ದರ್ಶನ್ ‘ದಿ ಡೆವಿಲ್’ ಸಿನಿಮಾಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಬೆಳಗ್ಗೆ 6 ಗಂಟೆ 5ನಿಮಿಷದಿಂದಲೇ ಆರಂಭವಾದ ಶೋಗಳು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಆಗಿದ್ದವು. ಹಲವು ಥೇಟರ್‌ಗಳಲ್ಲಿ ಫ್ಯಾನ್ಸ್ ಜಾತ್ರೆಯೇ ನೆರೆದಿತ್ತು. ಮುಖ್ಯ ಥೇಟರ್ ಆದ ನರ್ತಕಿಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್, ಸ್ನೇಹಿತ ಧನ್ವೀರ್, ನಾಯಕಿ ರಚನಾ ರೈ ಸೇರಿದಂತೆ ಚಿತ್ರತಂಡ ಅಭಿಮಾನಿಗಳ ಜೊತೆಗೆ ಸಿನಿಮಾ ವೀಕ್ಷಿಸಿದ್ದು ವಿಶೇಷವಾಗಿತ್ತು. ರಚಿತಾರಾಮ್ ಸಹ ಸಿನಿಮಾ ವೀಕ್ಷಿಸಿ ಬೆಂಬಲ ಸೂಚಿಸಿದ್ದಾರೆ.
ಸುಮಾರು 2 ಲಕ್ಷ 80 ಸಾವಿರಕ್ಕೂ ಹೆಚ್ಚು ಟಿಕೆಟ್ ಮುಂಗಡ ಬುಕಿಂಗ್ ಆಗಿದ್ದು, ಸಿನಿಮಾ ರಿಲೀಸ್‌ಗೂ ಮೊದಲೇ ಸುಮಾರು 8 ಕೋಟಿ ರು.ಗೂ ಅಧಿಕ ಮೊತ್ತ ಬಾಚಿಕೊಂಡಿದೆ. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಬುಕಿಂಗ್ ತೆರೆಯೋದು ವಿಳಂಬವಾಗಿದ್ದು, ಕಲೆಕ್ಷನ್ ಮೇಲೆ ಪರಿಣಾಮ ಬೀರಿದಂತಿದೆ. ಮೊದಲ ದಿನ ಸಿನಿಮಾ 20 ಕೋಟಿ ರು.ಗೂ ಅಧಿಕ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.
ಬುಕ್ ಮೈ ಶೋದಲ್ಲಿ ‘ದಿ ಡೆವಿಲ್’ ಸಿನಿಮಾದ ರೇಟಿಂಗ್, ವಿಮರ್ಶೆಗೆ ಚಿತ್ರತಂಡ ಕೋರ್ಟ್‌ನಿಂದ ತಡೆಯಾಜ್ಞೆ ತಂದಿತ್ತು. ಆದರೆ ಸೋಷಲ್ ಮೀಡಿಯಾದಲ್ಲಿ ಬೆಳಗ್ಗಿನಿಂದಲೇ ಪ್ರತಿಕ್ರಿಯೆ ಹರಿದುಬಂದಿದೆ. ಇಲ್ಲೂ ದರ್ಶನ್ ಫ್ಯಾನ್ಸ್ ನೆಚ್ಚಿನ ನಾಯಕನ ಪರವಾಗಿ ಟ್ವೀಟ್ ಮಾಡಿ, ‘ನಾವು ಗೆದ್ದೆವು’ ಎಂಬರ್ಥದಲ್ಲಿ ಬರೆದುಕೊಂಡರೆ, ಒಂದಿಷ್ಟು ಮಂದಿ ಸಿನಿಮಾದ ಕಥೆ, ಕ್ಲೈಮ್ಯಾಕ್ಸ್ ಕುರಿತು ನಿರಾಸೆ ವ್ಯಕ್ತಪಡಿಸಿದ್ದಾರೆ.
ದರ್ಶನ್ ರಾಜಕೀಯಕ್ಕೆ ಬರುತ್ತಾರ?
ಈ ಸಿನಿಮಾದಲ್ಲಿ ದರ್ಶನ್ ಜನಾನುರಾಗಿ ರಾಜಕೀಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರು ಜೈಲಿನಿಂದ ಹೊರಬಂದ ಮೇಲೆ ರಾಜಕೀಯ ಸೇರುತ್ತಾರಾ ಎಂಬ ಪ್ರಶ್ನೆ ಹುಟ್ಟಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದರ್ಶನ್ ಸಹೋದರ ದಿನಕರ್ ತೂಗುದೀಪ್, ‘ದರ್ಶನ್ ಹುಟ್ಟಿರುವುದೇ ಕಲಾಸೇವೆಗೆ’ ಎನ್ನುವ ಮೂಲಕ ತೆರೆ ಎಳೆದಿದ್ದಾರೆ.