ಮಾರಿಗೋಲ್ಡ್
ನಿರ್ದೇಶನ: ರಾಘವೇಂದ್ರ ಎಂ ನಾಯ್ಕ್
ತಾರಾಗಣ: ದಿಗಂತ್, ಸಂಗೀತಾ ಶೃಂಗೇರಿ, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ಸಂಪತ್ ಮೈತ್ರೇಯ
ರೇಟಿಂಗ್: 3
ಆರ್.ಎಸ್.
ಅವಿತಿಟ್ಟ ಚಿನ್ನದ ಬಿಸ್ಕೆಟ್, ಅದರ ಹಿಂದೆ ಬೀಳುವ ಗ್ಯಾಂಗು, ಆ ಗ್ಯಾಂಗಿನ ಪ್ರಯಾಣವನ್ನು ಹೊಂದಿರುವ ತಿರುವು ಮುರುವು ಪ್ರಯಾಣದ ಕತೆ ಇದು. ಜಾಣ ಚಿತ್ರಕತೆಯಂತೆ ನಿರೂಪಿತಗೊಳ್ಳುವ ಮಾನವನ ದುರಾಸೆ, ಅತಿಯಾಸೆಯ ಕಥನ.ಮೂವರು ತರುಣರು, ಒಬ್ಬ ತರುಣಿ. ಅವರೆಲ್ಲರಿಗೂ ಹಣದ ಅವಶ್ಯಕತೆ ಇರುತ್ತದೆ. ಹಸಿವಿರುತ್ತದೆ. ಕಷ್ಟ ಕಾರ್ಪಣ್ಯಗಳಿರುತ್ತದೆ. ಅದಕ್ಕೆಂದೇ ಸುಲಭವಾಗಿ ದುಡ್ಡು ಮಾಡಲು ಹೊರಡುತ್ತಾರೆ. ಅಲ್ಲಿಂದ ಕಥೆ ಆರಂಭ. ಅವರ ಬದುಕು ಯಾವ ದಾರಿಯಲ್ಲಿ ಸಾಗುತ್ತದೆ ಎಂಬುದೇ ಈ ಚಿತ್ರದ ಕುತೂಹಲ.
ನಿರ್ದೇಶಕರು ಸರಳವಾಗಿ ಕಾಣುವ ಆದರೆ ಸಂಕೀರ್ಣವಾದ ಭಾವವುಳ್ಳ ಕತೆಯೊಂದನ್ನು ಬುದ್ಧಿವಂತ ಚಿತ್ರಕತೆ ಮೂಲಕ ನಿರೂಪಿಸಿದ್ದಾರೆ. ದುರಾಸೆಯ ಕಥನವನ್ನು ಸೊಗಸಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಅನಗತ್ಯ ಭಾವಗಳನ್ನು ತರಲು ಹೋಗಿಲ್ಲ. ಅಂದುಕೊಂಡ ಉದ್ದೇಶ ಸಾಧನೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾ ಬಿಟ್ಟ ಬಾಣದಂತೆ ಮುಂದಕ್ಕೋಡುತ್ತಿರುತ್ತದೆ.
ಈ ಸಿನಿಮಾವನ್ನು ದಿಗಂತ್ ಮತ್ತು ಸಂಪತ್ ಮೈತ್ರೇಯ ತಮ್ಮ ನಟನೆಯ ಮೂಲಕ ಮತ್ತಷ್ಟು ಗಮನ ಸೆಳೆಯುವಂತೆ ಮಾಡಿದ್ದಾರೆ. ಸಂಗೀತಾ ಶೃಂಗೇರಿ ಹೆಚ್ಚು ಧೈರ್ಯವಂತ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಮಾತುಗಾರಿಕೆ ಆಕರ್ಷಕವಾಗಿದೆ. ಆದರೆ ಒಮ್ಮೆಮ್ಮೊ ಆ ಮಾತೇ ಕೈ ಜಗ್ಗುತ್ತದೆ.
ನಿರ್ದೇಶಕರಿಗೆ ತಾವು ಏನು ಹೇಳಬೇಕು ಎಂಬ ಸ್ಪಷ್ಟತೆ ಇದೆ. ಜೊತೆಗೆ ಕುತೂಹಲಕರವಾಗಿ ಕತೆ ಹೇಳುವ ಗುಣವೂ ಸಿದ್ಧಿಸಿದೆ. ಅದರಿಂದಾಗಿ ಮಾರಿಗೋಲ್ಡ್ ಶ್ರದ್ಧೆಯ ಸಿನಿಮಾ ಆಗಿದೆ. ಕಟ್ಟಕಡೆಯಲ್ಲಿ ಹೇಳಿಯೂ ಹೇಳದಂತೆ ನೀತಿಯೊಂದನ್ನು ದಾಟಿಸಿದೆ. ಈ ಕಾರಣಗಳಿಂದ ಭಿನ್ನವಾಗಿ ನಿಲುತ್ತದೆ.