ನಟ ಧನಂಜಯ ಸಂದರ್ಶನ : ಮದುವೆ ಹಾಗೂ ಸಿನಿಮಾ ಜರ್ನಿ ಬಗ್ಗೆ ಮನದ ಮಾತು ಬಿಚ್ಚಿಟ್ಟ ಡಾಲಿ

ಸಾರಾಂಶ

ಡಾಲಿ ಧನಂಜಯ, ತೆಲುಗು ನಟ ಸತ್ಯದೇವ್ ಮುಖ್ಯ ಪಾತ್ರದಲ್ಲಿ ನಟಿಸಿರುವ, ಈಶ್ವರ್ ಕಾರ್ತಿ ನಿರ್ದೇಶನದ ಬಹುಭಾಷಾ ಸಿನಿಮಾ ‘ಜೀಬ್ರಾ’ ಇಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡಾಲಿ ಧನಂಜಯ ಸಂದರ್ಶನ.

ಆರ್‌. ಕೇಶವಮೂರ್ತಿ

ತೆಲುಗು ಸಿನಿಮಾ ಬಿಡುಗಡೆ ಸಂಭ್ರಮ..

ಇದು ಬರೀ ತೆಲುಗಿನಲ್ಲಿ ಮಾತ್ರ ಬರುತ್ತಿಲ್ಲ. ಕನ್ನಡದಲ್ಲೂ ಬಿಡುಗಡೆ ಆಗುತ್ತಿದೆ.

‘ಜೀಬ್ರಾ’ ಚಿತ್ರದ ಕನ್ನಡ ಡಬ್ಬಿಂಗ್‌ ಹೇಗೆ ಬಂದಿದೆ?

ತುಂಬಾ ಚೆನ್ನಾಗಿ ಬಂದಿದೆ. ನಾಮಕಾವಸ್ಥೆಗೆ ಡಬ್ಬಿಂಗ್‌ ಮಾಡಬಾರದು, ತುಂಬಾ ಚೆನ್ನಾಗಿರಬೇಕು ಎನ್ನುವ ಕಾರಣಕ್ಕೆ ‘ಡೇರ್‌ಡೆವಿಲ್‌ ಮುಸ್ತಾಫಾ’ ಚಿತ್ರದ ನಿರ್ದೇಶಕ ಶಶಾಂಕ್ ಸೋಗಲ್‌ ಅವರ ತಂಡ ‘ಜೀಬ್ರಾ’ ಡಬ್ಬಿಂಗ್‌ ಕೆಲಸ ಮಾಡಿದೆ.

ಚಿತ್ರದ ಕತೆ ಏನು?

ಬ್ಯಾಂಕಿಂಗ್‌ ಕ್ರೈಮ್‌. ಬ್ಯಾಂಕಿಂಗ್‌ ಕ್ಷೇತ್ರದ ಕತೆ ಹೇಳುವ ಸಿನಿಮಾ. ಎಷ್ಟೇ ಭದ್ರತೆ ಇದ್ದರೂ ದಿನ ನಿತ್ಯ ಮೋಸ, ವಂಚನೆಗಳು ನಡೆಯುತ್ತಿವೆ. ಅದು ಹೇಗೆ ಎಂಬುದು ಈ ಚಿತ್ರದ ಕತೆ. ಮಧ್ಯಮ ವರ್ಗದ ಜನರಿಗೆ ನೇರವಾಗಿ ಕನೆಕ್ಟ್‌ ಆಗುವ ಕತೆ ಇಲ್ಲಿದೆ.

ಇಲ್ಲಿ ನಿಮ್ಮ ಪಾತ್ರವೇನು?

ಬ್ಯಾಂಕಿನ ಹೊರಗೆ ಇರುವ ಗ್ಯಾಂಗ್‌ನ ಲೀಡರ್‌ ಆಗಿ ನಾನು ಕಾಣಿಸಿಕೊಂಡಿದ್ದೇನೆ. ಚಿತ್ರದ ನಾಯಕನಾಗಿ ಸತ್ಯದೇವ್ ನಟಿಸಿದ್ದಾರೆ. ಹಾಗಂತ ಇದು ರೆಗ್ಯೂಲರ್‌ ಹೀರೋ, ವಿಲನ್‌ ಕತೆಯ ಸಿನಿಮಾ ಅಲ್ಲ. ಜೀಬ್ರಾ ಮೇಲೆ ಕಪ್ಪು-ಬಿಳಿ ಬಣ್ಣದ ಪಟ್ಟಿಗಳಿರುವಂತೆಯೇ ಒಳ್ಳೆಯದು, ಕೆಟ್ಟದ್ದು ಎರಡೂ ಇದೆ. ಈ ಎರಡರಲ್ಲಿ ನಾವು ಯಾವುದೆಂಬುದು ಸಿನಿಮಾ.

ತೆಲುಗಿನಲ್ಲೂ ನಿಮ್ಮ ಜತೆಗೆ ಅಮೃತಾ ಅಯ್ಯಂಗಾರ್‌ ನಟಿಸಿದ್ದಾರಲ್ಲ?

ಹೌದು. ಅವರೂ ಕೂಡ ‘ಜೀಬ್ರಾ’ ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ಮಾಡಿದ್ದಾರೆ. ಒಳ್ಳೆಯ ಪಾತ್ರ.

ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ನಲ್ಲಿ ನಿಮ್ಮ ಮತ್ತು ಚಿರಂಜೀವಿ ಭೇಟಿ ಹೇಗಿತ್ತು?

ವೇದಿಕೆ ಮೇಲೆ ಅವರು ನನ್ನ ಹೆಸರು ಮತ್ತು ನಟನೆ ಬಗ್ಗೆ ಹೇಳಿ ಮೆಚ್ಚಿಕೊಂಡಿದ್ದು ಖುಷಿ ಆಯಿತು. ನಮ್ಮಂಥವರಿಗೆ ಅವರ ಜರ್ನಿಯೂ ಪ್ರೇರಣೆ. ಮಾಮೂಲಿ ಕಾನ್‌ಸ್ಟೇಬಲ್‌ ಮಗ, ಮೆಗಾ ಸ್ಟಾರ್‌ ಆಗಿದ್ದು ದೊಡ್ಡ ಸಾಧನೆ. ಅಂಥವರು ಗುರುತಿಸಿದಾಗ ಸಂತೋಷ ಆಗುತ್ತದೆ.

ತೆಲುಗಿನಲ್ಲಿ ಬೇರೆ ಯಾವ ಚಿತ್ರ ಇದೆ? ಅಲ್ಲಿ ನಿಮ್ಮನ್ನು ಯಾವ ರೀತಿ ನೋಡುತ್ತಾರೆ?

‘ಪುಷ್ಪ 2’ ಬಿಡುಗಡೆ ಆಗಬೇಕಿದೆ. ಬೇರೆ ಬೇರೆ ಕತೆಗಳನ್ನು ಕೇಳುತ್ತಿದ್ದೇನೆ. ತುಂಬಾ ಚೆನ್ನಾಗಿ ಟ್ರೀಟ್‌ ಮಾಡುತ್ತಾರೆ. ಪ್ರೀತಿ-ಗೌರವ ಇದ್ದ ಕಡೆಯೇ ನಾನೂ ಹೋಗೋದು. ನಮ್ಮೊಳಗೊಬ್ಬ ಅಂತ ನೋಡುತ್ತಾರೆ.

ನೀವು ಇತ್ತೀಚೆಗೆ ನೋಡಿದ ಸಿನಿಮಾ ಯಾವುದು?

ದುಲ್ಕರ್‌ ಸಲ್ಮಾನ್‌ ಅವರ ‘ಲಕ್ಕಿ ಭಾಸ್ಕರ್‌’ ಸಿನಿಮಾ. ಫೈನಾನ್ಸ್‌ ಕ್ರೈಸಿಸ್‌ ಚಿತ್ರವಾದರೂ ಮಧ್ಯಮ ವರ್ಗದ ಆರ್ಥಿಕ ಸಂಕಷ್ಟಗಳನ್ನು ಹೇಳುವ ಸಿನಿಮಾ ಇದಾಗಿತ್ತು. ನನಗೆ ತುಂಬಾ ಇಷ್ಟವಾಯಿತು.

ಈ ನಡುವೆ ಬ್ಯಾಚುಲರ್‌ ಲೈಫ್‌ಗೆ ವಿರಾಮ ಇಡೋ ಕಾರ್ಯಕ್ರಮ ರೂಪಿಸಿಕೊಂಡಿದ್ದೀರಲ್ಲ?

ಹೌದು. ಮದುವೆ ಅನ್ನೋದು ಮನುಷ್ಯನ ಜೀವನದಲ್ಲಿ ಬರುವ ಬಹುದೊಡ್ಡ ಸಂಭ್ರಮ. ಡಾ ಧನ್ಯತಾ ಅವರ ಜತೆಗೆ ಹೊಸ ಜೀವನ ಶುರು ಮಾಡಲಿದ್ದೇನೆ.

ಮದುವೆ ಯಾವಾಗ ಮತ್ತು ಎಲ್ಲಿ?

ಮುಂದಿನ ವರ್ಷ ಫೆ.16ರಂದು ಮೈಸೂರಿನಲ್ಲಿ. ಎಕ್ಸಿಬಿಷನ್ ಮೈದಾನದಲ್ಲಿ ನಡೆಯಲಿದೆ. ಎಲ್ಲರನ್ನೂ ಆಹ್ವಾನಿಸುತ್ತಿದ್ದೇನೆ. ಈಗ ಲಗ್ನ ಪತ್ರಿಕೆಗಳನ್ನು ನೋಡುತ್ತಿದ್ದೇವೆ. ಮುಂದೆ ಹೀಗೆ ಚಿತ್ರೀಕರಣದ ನಡುವೆ ಮದುವೆಗೆ ಸಂಬಂಧಿಸಿದ ಒಂದೊಂದೇ ಕೆಲಸಗಳನ್ನು ಮಾಡಿಕೊಳ್ಳಬೇಕಿದೆ.

ನಿಮ್ಮ ಯಾವ ಚಿತ್ರಗಳನ್ನು ಡಾ ಧನ್ಯತಾ ಅವರು ನೋಡಿದ್ದಾರೆ?

ನನ್ನ ನಟನೆಯ ಕಿರು ಚಿತ್ರ ‘ಜಯನಗರ 4 ಬ್ಲಾಕ್‌’ ಚಿತ್ರದಿಂದಲ್ಲೇ ನನ್ನ ನೋಡಿದ್ದಾರೆ. ಬಹುತೇಕ ನನ್ನ ನಟನೆಯ ಎಲ್ಲಾ ಚಿತ್ರಗಳನ್ನು ನೋಡಿದ್ದಾರೆ.

ನಿಮ್ಮ ಯಾವ ಸಿನಿಮಾ ಅವರಿಗೆ ಇಷ್ಟ? ಡಾ. ಧನ್ಯತಾ ಯಾವ ಹೀರೋ ಅಭಿಮಾನಿ?

ಸೂರಿ ನಿರ್ದೇಶನದ ‘ಟಗರು’ ಸಿನಿಮಾ ತುಂಬಾ ಇಷ್ಟ. ಈಗ ನನ್ನ ಅಭಿಮಾನಿ.

Share this article