- 25 ವರ್ಷಗಳ ಹಿಂದೆ ತಮಿಳು ಚಿತ್ರರಂಗದಲ್ಲಿ ಅವಕಾಶ ಅರಸಿ ಚೆನ್ನೈಗೆ ಬಂದಿದ್ದೆ. ಆಗ ಬಹಳ ಸ್ಟ್ರಗಲ್ ಇತ್ತು. ಎಷ್ಟು ಅಲೆದಾಡಿದರೂ ಅವಕಾಶ ಸಿಗಲಿಲ್ಲ. ಹೊಟ್ಟೆಪಾಡಿಗೆ ಇಲ್ಲಿನ ಹೋಟೆಲಲ್ಲಿ ಸಪ್ಲೈಯರ್, ಕ್ಲೀನರ್ ಆಗಿ ಕೆಲಸ ಮಾಡಿದೆ. ಕೊನೆಗೂ ಇಲ್ಲಿ ನಟನಾಗಿ ಗುರುತಿಸಿಕೊಳ್ಳಲು ಸಾಧ್ಯವಾಗದೇ ವಾಪಾಸ್ ಹೋದೆ. ಈಗ 25 ವರ್ಷಗಳ ನಂತರ ಬಹುಶಃ ಆ ದೇವಿಯೇ ಕರೆಸಿಕೊಂಡು ದೊಡ್ಡ ಸ್ಥಾನ ಕೊಟ್ಟಿದ್ದಾರೆ ಅನಿಸುತ್ತೆ. ದೇವರು ಏನು ಕೊಡ್ತಾನೋ ಅದನ್ನೇ ಊಟ ಮಾಡಬೇಕಂತೆ.
- ದೇವಿ ಅಂದಾಗ ನಾನೊಂದು ಮಾತು ಹೇಳಬೇಕು, ಈ ಸಿನಿಮಾದಲ್ಲಿರುವ ‘ಮೂಗುತಿ ಅಮ್ಮನ್’ ಅಂದರೆ ಕನ್ಯಾಕುಮಾರಿ ದೇವಿ. ಆಕೆಯ ಮೂಗುತಿ ಎಷ್ಟು ಪ್ರಕಾಶಮಾನ ಎಂದರೆ ಹಿಂದೆ ಸಮುದ್ರ ಯಾನ ಮಾಡುವವರಿಗೆ ದಾರಿ ತೋರಿಸುತ್ತಿತ್ತಂತೆ. ಬಹಳ ವರ್ಷಗಳ ಹಿಂದೆ ನನ್ನ ಅಮ್ಮನನ್ನು ಕನ್ಯಾಕುಮಾರಿ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದೆ. ಅಮ್ಮ ಬಹಳ ಸಂಭ್ರಮಿಸಿದ್ದರು. ಆ ದೇವಿಯ ಮೂಗುತಿಯನ್ನು ನನಗೆ ಮತ್ತೆ ಮತ್ತೆ ತೋರಿಸಿ, ಎಷ್ಟು ಹೊಳೆಯುತ್ತಿದೆ ನೋಡು ಎಂದು ಕಣ್ಣರಳಿದ್ದರು. ನನ್ನ ಪಾಲಿನ ದೇವತೆಯಂತಿದ್ದ ಆ ನನ್ನ ತಾಯಿ ಆ ಹೊತ್ತಿಗೆ ದೇವಿಯ ಬಳಿ ಏನು ಬೇಡಿಕೊಂಡರೋ ಗೊತ್ತಿಲ್ಲ. ಬಹುಶಃ ಈ ಚಿತ್ರದಲ್ಲಿ ಅವಕಾಶ ನೀಡುವ ಮೂಲಕ ನನ್ನ ಅಮ್ಮನ ಆ ಕೋರಿಕೆಯನ್ನು ಆಕೆ ಗತಿಸಿದ ಬಳಿಕ ಈಡೇರಿಸಿದ್ದಾಳೆ ಅನಿಸುತ್ತದೆ.- ‘ಮೂಗುತಿ ಅಮ್ಮನ್’ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನ ದೊಡ್ಡ ಬಜೆಟ್ ಚಿತ್ರ. ಇದರಲ್ಲಿ ನಯನತಾರಾ ಜೊತೆಗೆ ನಟಿಸುತ್ತಿದ್ದೇನೆ. ಲೇಡಿ ಸೂಪರ್‌ಸ್ಟಾರ್ ಒಬ್ಬರ ಮೇಲೆ ಇಷ್ಟೊಂದು ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಿಸುತ್ತಿರುವುದು, ಆಕೆ ತನ್ನ ಹೆಗಲ ಮೇಲೆ ಇಡೀ ಸಿನಿಮಾವನ್ನು ತೆಗೆದುಕೊಂಡು ಹೋಗುವುದು ಥ್ರಿಲ್ಲಿಂಗ್ ಅನಿಸುತ್ತೆ. ನಯನತಾರಾ ನೋಡಿದರೆ ನಟಿಯೊಬ್ಬಳ ವೃತ್ತಿಪರತೆ ಆಕೆಯನ್ನು ಯಾವ ಎತ್ತರಕ್ಕೂ ಕರೆದೊಯ್ಯಬಲ್ಲದು ಎಂದು ಹೆಮ್ಮೆ ಅನಿಸುತ್ತೆ. ಇದರಲ್ಲಿ ಸಿ. ಸುಂದರ್ ಅವರ ಪಾತ್ರವೂ ದೊಡ್ಡದು.