ಸ್ಟಾರ್‌ ನಟರು ವರ್ಷಕ್ಕೊಂದೇ ಸಿನಿಮಾ ಮಾಡ್ತಾರೆ ಅನ್ನೋ ಮಾತನ್ನು ಸುಳ್ಳು ಮಾಡೋದಾಗಿ ಹೇಳಿದ ಗಣೇಶ್‌

ಸಾರಾಂಶ

ಸ್ಟಾರ್‌ ನಟರು ವರ್ಷಕ್ಕೊಂದೇ ಸಿನಿಮಾ ಮಾಡ್ತಾರೆ ಅನ್ನೋ ಮಾತನ್ನು ಸುಳ್ಳು ಮಾಡೋದಾಗಿ ಗಣೇಶ್‌ ಹೇಳಿದ್ದಾರೆ. ವರ್ಷಕ್ಕೆ ಮೂರು ಸಿನಿಮಾ ಮಾಡೇ ಮಾಡ್ತೀನಿ ಅಂದಿರುವ ಅವರು ‘ಪಿನಾಕ’ ಸಿನಿಮಾಗಾಗಿ ತೂಕ ಇಳಿಸಿಕೊಂಡಿರುವ ಬಗ್ಗೆ ಮಾತಾಡಿದ್ದಾರೆ.

 ಸ್ಟಾರ್‌ ನಟರು ವರ್ಷಕ್ಕೊಂದೇ ಸಿನಿಮಾ ಮಾಡ್ತಾರೆ ಅನ್ನೋ ಮಾತನ್ನು ಸುಳ್ಳು ಮಾಡೋದಾಗಿ ಗಣೇಶ್‌ ಹೇಳಿದ್ದಾರೆ. ವರ್ಷಕ್ಕೆ ಮೂರು ಸಿನಿಮಾ ಮಾಡೇ ಮಾಡ್ತೀನಿ ಅಂದಿರುವ ಅವರು ‘ಪಿನಾಕ’ ಸಿನಿಮಾಗಾಗಿ ತೂಕ ಇಳಿಸಿಕೊಂಡಿರುವ ಬಗ್ಗೆ ಮಾತಾಡಿದ್ದಾರೆ. 

ಓವರ್‌ ಟು ಗೋಲ್ಡನ್‌ ಸ್ಟಾರ್..

- ನಾನು ಇಂಡಸ್ಟ್ರಿಗೆ ಬಂದು ಹತ್ತಿರತ್ತಿರ 2 ದಶಕಗಳಾಗುತ್ತಿವೆ. ಹಿಂದೆಲ್ಲಾ ಥೇಟರ್‌ನಲ್ಲಿ ಸಿನಿಮಾ 50 - 100 ದಿನ ಓಡುತ್ತಿತ್ತು. ಆಗ ವರ್ಷಕ್ಕೆ ಐದು ಸಿನಿಮಾವಾದರೂ ಮಾಡುತ್ತಿದ್ದೆವು. ಈಗ ಎಂಥಾ ಸಿನಿಮಾವಾದರೂ ಓಡೋದು 2 ವಾರ. ಆದರೂ ವರ್ಷಕ್ಕೋ ಎರಡು ವರ್ಷಕ್ಕೋ ಸಿನಿಮಾ ಮಾಡೋ ಹಾಗಾಗಿದೆ. ಇದ್ಯಾಕೋ ಸರಿ ಹೋಗ್ತಿಲ್ಲ ಅನಿಸ್ತಿದೆ. ಹೀಗಾದರೆ ಸ್ಯಾಂಡಲ್‌ವುಡ್‌ಗೆ ದೊಡ್ಡ ಹೊಡೆತ ಬೀಳುತ್ತೆ. ಹೀಗಾಗಿ ನಾನು ವರ್ಷಕ್ಕೆ ಮೂರು ಸಿನಿಮಾ ಮಾಡೇ ಮಾಡ್ತೀನಿ ಅನ್ನುವ ನಿರ್ಧಾರಕ್ಕೆ ಬಂದಿದ್ದೀನಿ.

- ಸದ್ಯ ‘ಯುವರ್ಸ್‌ ಸಿನ್ಸಿಯರ್ಲೀ ರಾಮ್‌’ ಸಿನಿಮಾ ಶೂಟಿಂಗ್‌ ಮುಗಿಯುತ್ತಾ ಬಂದಿದೆ. ಮಾ.17ರಿಂದ ‘ಪಿನಾಕ’ ಶೂಟಿಂಗ್‌ ಶುರುವಾಗುತ್ತೆ. ಈ ನಡುವೆ ಹೊಸ ಸಿನಿಮಾವೊಂದು ಲಾಂಚ್‌ ಆಗಬೇಕಿದೆ. ಸೋ ಈ ವರ್ಷ ಮೂರು ಸಿನಿಮಾಗಳೊಂದಿಗೆ ಥೇಟರ್‌ಗೆ ಬಂದೇ ಬರ್ತೀನಿ. ಈಗಂತೂ ತಿಂಗಳಲ್ಲಿ 25 ದಿನ ಡೇಟ್ಸ್‌ ಕೊಟ್ಟುಬಿಟ್ಟಿದ್ದೀನಿ. ವರ್ಷಪೂರ್ತಿ ಬಿಡುವಿಲ್ಲದೇ ಕೆಲಸ ಮಾಡಬೇಕು ಅಂದುಕೊಂಡಿದ್ದೀನಿ.

- ‘ಪಿನಾಕ’ ಸಿನಿಮಾದಲ್ಲಿ ರಾಜನಾಗಿ ಡಿಫರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಇದಕ್ಕಾಗಿ ಸಾಕಷ್ಟು ವರ್ಕೌಟ್‌ ಮಾಡಿ ತೂಕ ಇಳಿಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ಕ್ಷುದ್ರ ಹಾಗೂ ರುದ್ರ ಎಂಬ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಸಿನಿಮಾಗಾಗಿ 8 ಎಕರೆ ಜಾಗದಲ್ಲಿ ದೊಡ್ಡ ಸೆಟ್‌ ಹಾಕಲಾಗಿದೆ.

- ನನ್ನ ಪ್ರಕಾರ ಸಿನಿಮಾಗೆ ಪ್ರೇಕ್ಷಕರು ಬರಲ್ಲ ಅನ್ನೋ ಮಾತಲ್ಲಿ ಹುರುಳಿಲ್ಲ. ಸಿನಿಮಾ ಚೆನ್ನಾಗಿದ್ದಾಗ ಮೆಟಾಡೋರ್‌, ಎತ್ತಿನಗಾಡಿ ಕಟ್ಕೊಂಡು ಜನ ಬರೋದನ್ನ ನೋಡಿದ್ದೀನಿ. ಚಿತ್ರ ಕೆಟ್ಟದಾಗಿದ್ದರೆ ದುಡ್ಡು ಕೊಟ್ಟು, ಊಟ ಹಾಕ್ಸಿ ಸಿನಿಮಾ ನೋಡಿ ಅಂದರೂ ಜನ ಥೇಟರ್‌ ಕಡೆ ಮುಖ ಹಾಕಲ್ಲ. ಈ ವಿಚಾರದಲ್ಲಿ ಪ್ರೇಕ್ಷಕರನ್ನು ದೂರೋದು ತಪ್ಪು. ಸಿನಿಮಾ ತಂಡಗಳು ಒಳ್ಳೆ ಕೆಲಸ ಮಾಡಬೇಕು.

- ಪ್ರತೀ ಸಿನಿಮಾನೂ ನಟನಿಗೆ ಹೊಸತೇ ಆಗಿರುತ್ತದೆ. ಮೊದಲ ಟಿಕೇಟ್‌ ಸೇಲ್‌ ಆಗೋದ್ರಿಂದ ಆತನ ಭವಿಷ್ಯ ನಿರ್ಧಾರವಾಗುತ್ತಾ ಹೋಗುತ್ತದೆ. ಹಿಂದಿನ ಸಿನಿಮಾ ಸಕ್ಸಸ್‌ ಆಗಿದ್ದರೆ ಅದು ಒಂದು ಬ್ರಾಂಡ್‌ ತಂದುಕೊಟ್ಟಿರುತ್ತದೆ ಅಷ್ಟೇ. ಅದರಿಂದ ಜನರನ್ನು ಎಳೀಬಹುದು. ಹಾಗಂತ ಸಿನಿಮಾ ಚೆನ್ನಾಗಿಲ್ಲ ಅಂದರೆ ಎಂಥಾ ಸೂಪರ್‌ ಸ್ಟಾರ್‌ ಸಿನಿಮಾದಲ್ಲಿದ್ದರೂ ಅದು ಸಕ್ಸಸ್‌ ಆಗೋದಕ್ಕೆ ಸಾಧ್ಯನೇ ಇಲ್ಲ. ನನ್ನ ಪ್ರಕಾರ ಬಿಡುಗಡೆಯಾಗುವ ಪ್ರತೀ ಸಿನಿಮಾ ಮೂಲಕ ನಟ ಹೊಸತಾಗಿ ಪ್ರೇಕ್ಷಕರಿಗೆ ಪರಿಚಯವಾಗುತ್ತ ಹೋಗುತ್ತಾನೆ. ಸಿನಿಮಾ, ಪಾತ್ರಕ್ಕೆ ತಕ್ಕಂತೆ ಜನ ಆತನನ್ನು ಬೆಳೆಸಬೇಕೋ, ಬೀಳಿಸಬೇಕೋ ತೀರ್ಮಾನಿಸುತ್ತಾರೆ.

Share this article