;Resize=(412,232))
- ರಾಜೇಶ್ ಶೆಟ್ಟಿ
ತಾತ ಸುಬ್ಬಯ್ಯ ನಾಯ್ಡು, ತಂದೆ ಲೋಕೇಶ್ ಅವರ ಬಳಿಕ ನೀವೂ ನಿರ್ದೇಶಕನಕ್ಕಿಳಿದಿರಿ. ಈ ಆಸೆ ಯಾವಾಗ ಬಂತು?
ನನಗೆ ಬಹಳ ವರ್ಷಗಳಿಂದ ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಆಸೆ ಇತ್ತು. ಆದರೆ ವಿಶ್ವಾಸ ಇರಲಿಲ್ಲ. ಮಜಾ ಟಾಕೀಸ್ ನಿರ್ದೇಶನ ಮಾಡಿದ ಮೇಲೆ ನಂಬಿಕೆ ಬಂತು. ನಾನು ಫಾರ್ಮಲ್ ಆಗಿ ನಿರ್ದೇಶನ ಕಲಿತವನಲ್ಲ. ಕೆಲಸ ಮಾಡುತ್ತಾ ಕಲಿತವನು. ಒಂದೊಳ್ಳೆ ಕತೆ ಹೊಳೆಯಿತು. ಅದನ್ನು ನಾನೇ ನಿರ್ದೇಶನ ಮಾಡಿದರೆ ಚೆಂದ ಅನ್ನಿಸಿತು.
ಈ ಕತೆ ನನಗೆ ನಿದ್ದೆಯಲ್ಲಿ ಹೊಳೆದಿದ್ದು. ಅದನ್ನು ನಾನು ಬೆಳೆಸುತ್ತಾ ಬಂದೆ. ನಮ್ಮಲ್ಲಿ ಬಹಳಷ್ಟು ಹಾರರ್ ಸಿನಿಮಾಗಳು ಬಂದಿವೆ. ಹೆದರಿಸುವ ದೆವ್ವಗಳು, ಭಯಂಕರ ದೆವ್ವಗಳು ಹೀಗೆ ನಾನಾ ರೀತಿಯ ದೆವ್ವಗಳಿವೆ. ಆದರೆ ಒಬ್ಬ ಅಸಹಾಯಕ ವ್ಯಕ್ತಿಗೆ ದೆವ್ವಗಳು ನೆರವಿಗೆ ನಿಂತರೆ ಹೇಗಿರುತ್ತದೆ ಎಂಬ ಯೋಚನೆಯೇ ಈ ಸಿನಿಮಾದ ಕತೆಯನ್ನು ಬೆಳೆಸಿತು. ನಾನು ಈ ಕತೆಯನ್ನು ಸುಮಾರು 100 ಸಲ ಬದಲಿಸಿರಬಹುದು. ಪಾತ್ರಗಳನ್ನು ಬೆಳೆಸುವುದು, ಸಿನಿಮಾಗೆ ಅನಿವಾರ್ಯತೆ ಇಲ್ಲದಾಗ ಕಟ್ ಮಾಡುವುದು ಹೀಗೆ ಈ ಪ್ರಕ್ರಿಯೆ ನನಗೆ ಸಂತೋಷ ಕೊಟ್ಟಿದೆ. ಮುಂದೆ ಮತ್ತಷ್ಟು ಗಂಭೀರ, ಪ್ರೇಮಕಥಾ ಸಿನಿಮಾಗಳನ್ನು ಮಾಡುವ ಧೈರ್ಯ ಕೊಟ್ಟಿದೆ.
ಸಿನಿಮಾ ಪ್ರಯಾಣ ಆರಂಭವಾಗಿದ್ದು ಕೋವಿಡ್ ಸಂದರ್ಭದಲ್ಲಿ. ಆ ಸಂದರ್ಭದಲ್ಲಿ ಎಲ್ಲರೂ ಮಲಯಾಳಂ ಸಿನಿಮಾ ನೋಡತೊಡಗಿದರು. ಮೆಚ್ಚಿದರು. ಹೊಗಳಿದರು. ನಾನೂ ಒಂದು ಒಳ್ಳೆಯ ಕಂಟೆಂಟ್ ಸಿನಿಮಾ ಮಾಡಬೇಕು ಎಂದುಕೊಂಡು ಈ ಸಿನಿಮಾ ಮಾಡಿದೆ. ಇಲ್ಲಿ ಹೀರೋ ಮುಖ್ಯ ಅಲ್ಲ, ಕಂಟೆಂಟ್ ಮುಖ್ಯ. ನಾನು ಹಿನ್ನೆಲೆಗೆ ಸರಿದು ಕತೆಯೇ ಪ್ರಧಾನವಾಗಿ ಮಾಡಿಕೊಂಡು ಸಿನಿಮಾ ಮಾಡಿದೆ. ನನಗೆ ಸ್ಪೇಸ್ ಕಮ್ಮಿ ಇದೆ. ಬೇರೆ ಪಾತ್ರಗಳಿಗೆ ಜಾಸ್ತಿ ಇದೆ. ಇಲ್ಲಿ ನಿರ್ದೇಶಕ ಸೃಜನ್ ನನಗೆ ಮುಖ್ಯವಾಗಿದ್ದ. ನಿರ್ದೇಶಕ ಸೃಜನ್‌ನನ್ನು ಮೆಚ್ಚಿಕೊಂಡರೆ ನನ್ನ ಪ್ರಯತ್ನ ಸಾರ್ಥಕ.
ಸಿನಿಮಾ ಮಾಡುವುದು, ಪ್ರಚಾರ ಮಾಡುವುದು -ಯಾವುದು ಸುಲಭ, ಯಾವುದು ಕಷ್ಟ?
ಸಿನಿಮಾ ಮಾಡುವುದು ತುಂಬಾ ಸುಲಭ, ಪ್ರಚಾರ ಮಾಡುವುದು ಬಹಳ ವೇದನೆಯ ಕೆಲಸ. ಜನರನ್ನು ತಲುಪುವುದು ನಿಜಕ್ಕೂ ದೊಡ್ಡ ಸವಾಲು. ಈ ಸಲ ನಾನು ತುಂಬಾ ಪ್ರಯತ್ನ ಪಟ್ಟು ಪ್ರಚಾರ ಮಾಡಿದ್ದೇನೆ. ಮನೆ ಮನೆಗೆ ಹೋಗಿದ್ದೇನೆ. ಯಾಕೆಂದರೆ ಈ ಸಿನಿಮಾದ ಮೇಲಿರುವ ನಂಬಿಕೆ. ಈ ಕತೆ, ಯೋಚನೆ ಹೊಳೆದಾಗಲೇ ನನಗೆ ಇದರ ಮೇಲೊಂದು ವಿಶ್ವಾಸ ಬಂದಿತ್ತು. ಪಾಸಿಟಿವ್ ಭಾವ ಇತ್ತು. ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬ ನಂಬಿಕೆ ಇತ್ತು. ಒಳ್ಳೆಯ ಸಿನಿಮಾವನ್ನು ಪ್ರಚಾರ ಮಾಡದೇ ಇದ್ದರೆ ತಪ್ಪಾಗುತ್ತದೆ ಎಂಬ ಕಾರಣದಿಂದ ಗರಿಷ್ಠ ಪ್ರಯತ್ನ ಮಾಡಿದ್ದೇವೆ. ಜನ ಬಂದು ಜೊತೆ ನಿಂತರೆ ಎಲ್ಲಾ ಶ್ರಮಕ್ಕೆ ಫಲ ದೊರೆಯಲಿದೆ.
ಈ ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು?
1. ನಗುವಿನ ಕೊರತೆ ಇರುವ ಕಾಲಘಟ್ಟ ಇದು. ಈ ಸಿನಿಮಾಗೆ ಬಂದರೆ ಸಿನಿಮಾ ಪೂರ್ತಿ ಮನಸಾರೆ ನಕ್ಕು ಹಗುರಾಗಿ ಹೋಗಬಹುದು.
2. ಇಲ್ಲಿ ಹೊಡೆದಾಟವಿಲ್ಲ, ರಕ್ತಪಾತವಿಲ್ಲ. ಮುಜುಗರ ಪಡುವ ಅಂಶಗಳಿಲ್ಲ. ಇಡೀ ಕುಟುಂಬ ಜೊತೆಗೆ ಕುಳಿತು ನೋಡಬಹುದು.
3. ನನ್ನ ಅಮ್ಮ ಗಿರಿಜಾ ಲೋಕೇಶ್, ಮಗ ಸುಕೃತ ದೆವ್ವಗಳಾಗಿ ನಟಿಸಿದ್ದಾರೆ. ಬಹಳಷ್ಟು ಹಿರಿ ಕಿರಿಯ ಕಲಾವಿದರು ನನ್ನ ಜೊತೆ ನಿಂತಿದ್ದಾರೆ. ಎಲ್ಲರೂ ಸೇರಿಕೊಂಡು ಭರಪೂರ ಮನರಂಜನೆ ಉಣಬಡಿಸುತ್ತಾರೆ.