ಚಿತ್ರರಂಗ ಒಂದು ಸಾಮ್ರಾಜ್ಯ ಎನಿಸಿಕೊಂಡರೆ ಈ ಸಾಮ್ರಾಜ್ಯವನ್ನು ಆಯಾ ಕಾಲಕ್ಕೆ ಬಂದು ಆಳಿದವರು ಎಷ್ಟೋ ಮಂದಿ. ಹಾಗೆ ಚಿತ್ರರಂಗ ಎಂಬ ಸಾಮ್ರಾಜ್ಯದಲ್ಲಿ ಕಳೆದ 40 ವರ್ಷಗಳಿಂದ ರಾಜನಾಗಿಯೇ ಇರುವ ವ್ಯಕ್ತಿಯ ಜನ್ಮದಿನ ಇದು. ಆ ವ್ಯಕ್ತಿಯೇ ನಮ್ಮ ‘ಯುವರಾಜ’... ಪ್ರೀತಿಯ ಶಿವ‘ರಾಜ’.
ಚಿತ್ರರಂಗದಲ್ಲಿ ‘ಶಿವಸೈನ್ಯ’ ಕಟ್ಟಿದರೂ ಈ ರಾಜ ಯಾರ ಮೇಲೂ ಯುದ್ಧ ಸಾರಲಿಲ್ಲ. ಆದರೆ, ಜನರ ಮನಸ್ಸು ಕದ್ದು, ಚಿತ್ರರಂಗವನ್ನು ಬೆಳೆಸಿ, ತಾನು ಬೆಳೆಯೋ ಜತೆಗೆ ತನ್ನ ಸುತ್ತಾ ಇರುವವರು ಕೂಡ ಬೆಳೆಯಬೇಕು ಅಂದುಕೊಂಡಿರುವ ‘ಜಗ ಮೆಚ್ಚಿದ ಹುಡುಗ’. ಚಿತ್ರರಂಗಕ್ಕೆ ಬರುತ್ತಿರುವ ಹೊಸ ಮತ್ತು ಯುವ ನಿರ್ದೇಶಕರ ಜತೆಗೆ ಸಿನಿಮಾ ಮಾಡುವ ಮೂಲಕ ಯುವ ಶಕ್ತಿಯನ್ನು ರಾರಾಜಿಸುವಂತೆ ಮಾಡಿದ ‘ಯುವರಾಜ’. ಚಿತ್ರರಂಗ ಅನ್ನೋ ದೊಡ್ಡ ಸಾಮ್ರಾಜ್ಯದಲ್ಲಿ ಒಂದೆರಡು ಯುದ್ಧ ಮಾಡಿ (ಸಿನಿಮಾಗಳಿಗೆ) ಸೋತವರ ನಡುವೆ ವಿಶ್ವವನ್ನೇ ಗೆಲ್ಲುವ ವಿಶ್ವಾಸ ತೋರಿಸಿದ ಮತ್ತು ಅದನ್ನು ನಿಜ ಮಾಡಿದ ‘ವಿಶ್ವ’ ವಿಜೇತನ ಜನ್ಮದಿನ ಎಂಬುದು ‘ನಮ್ಮೂರ ಹುಡುಗನ’ ಪ್ರೇಮ ರಾಗವೂ ಹೌದು.
ನೀವು ಕಣ್ಣು ಮುಚ್ಚಿ ಶಿವಣ್ಣ ಅವರನ್ನು ನೆನಪಿಸಿಕೊಂಡರೆ ನೆನಪಾಗೋದು ಅವರ ಕೆಂಡಂತಹ ಕಣ್ಣುಗಳು. ಈ ಕೆಂಡಗಳಿಗೆ ‘ರಾಕ್ಷಸ’, ‘ರೌಡಿಸಂ’, ‘ಓಂ’, ‘ಜೋಗಿ’, ‘ಮಾದೇಶ’, ‘ಹೊಡಿಮಗ’, ‘ಟಗರು’ ಹೀಗೆ ಏನೆಲ್ಲ ಹೆಸರಿಡಬಹುದು! ಆದರೆ, ‘ಜನುಮದ ಜೋಡಿ’, ‘ಚಿರಬಾಂಧವ್ಯ’, ‘ಜೋಡಿ ಹಕ್ಕಿ’, ‘ಕುರಬನ ರಾಣಿ’, ‘ಅಂಡಮಾನ್’, ‘ಭೂಮಿ ತಾಯಿ ಚೊಚ್ಚಲ ಮಗ’, ‘ಹೃದಯ ಹೃದಯ’ ಹೆಸರಿನಲ್ಲಿ ನಿಮ್ಮನ್ನು ಭಾವುಕಗೊಳಿಸುವುದು ಕೂಡ ಅದೇ ಕೆಂಡದಂತಹ ಕಣ್ಣುಗಳೇ. ಆರಂಭದ ದಿನಗಳಲ್ಲಿ ಕಂಠದ ಬಗ್ಗೆ ಭಿನ್ನಾಭಿಪ್ರಾಯಗಳು ಕೇಳಿ ಬಂದರೂ ಆ ಭಿನ್ನತೆಯ ವಿಮರ್ಶೆಗಳನ್ನೂ ಮೀರಿ ತಮ್ಮ ಭಾವಭಿನಯದಿಂದ ‘ಶ್ರೀಕಂಠ’ ಎನಿಸಿಕೊಂಡ ‘ಸಾರ್ವಭೌಮ’.
ಶಿವಣ್ಣ ಯಾಕೆ ನಟರಾಗಿಯೂ ಪ್ರಮುಖ, ಮುಖ್ಯ ಮತ್ತು ಮಹತ್ವದ ‘ಮುತ್ತಣ್ಣ’ ಎನಿಸಿಕೊಳ್ಳುತ್ತಾರೆ ಎಂದರೆ ಇಮೇಜು ಮೀರಿ ನಿಂತ, ಸದಾ ಚಲಿಸೋ ದೃಶ್ಯದ ಕಾರಣಕ್ಕೆ. ಪ್ಯಾನ್ ಇಂಡಿಯಾ, ಇಮೇಜ್, ಲ್ಯಾಂಡ್ ಸ್ಕೆಪ್, ಲ್ಯಾಂಡ್ ಮಾರ್ಕ್ ಅಂತ ಯೋಚಿಸುವವರ ನಡುವೆ ನಿಜವಾಗಲೂ ಲಾರ್ಜರ್ ದೆನ್ ಲೈಫ್ ಅಂದ್ರೆ ಏನೂ ಅಂತ ತೋರಿಸಿಕೊಟ್ಟ ‘ಸಿಂಹದ ಮರಿ’. ಒಂದು ಕಡೆ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ ಕಲಾತ್ಮಕ ಎನಿಸುವ ‘ಹಗಲುವೇಷ’, ಮತ್ತೊಂದು ಕಡೆ ಬ್ರಿಡ್ಜ್ ಎನಿಸುವ ‘ತಮಸ್ಸು’, ಐತಿಹಾಸಕ ನೆರಳಿನ ‘ಗಂಡುಗಲಿ ಕುಮಾರರಾಮ’ ಹೀಗೆ ಅವರು ತಮ್ಮ ಇಮೇಜು ಧಿಕ್ಕರಿಸಿ ನಿಂತಿದ್ದಕ್ಕೆ ಸಾಕಷ್ಟು ಸಾಕ್ಷಿಗಳಿವೆ.
ಈ ವಿಚಾರದಲ್ಲಿ ತಮ್ಮ ತಂದೆ ಡಾ ರಾಜ್‌ಕುಮಾರ್ ಅವರ ಪರಂಪಪರೆಯನ್ನು ಮುಂದುವರಿಸಿದ ‘ಮಿಸ್ಟರ್ ಪುಟ್ಸಾಮಿ’ ಅಂದರೆ ನಮ್ಮ ಶಿವಣ್ಣ. ‘ಭೂದಾನ’ ಚಿತ್ರದಲ್ಲಿ 30ರ ಹರೆಯದ ಡಾ ರಾಜ್‌ಕುಮಾರ್ ಅವರು ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಅವರಿಗೆ ತಂದೆಯ ಪಾತ್ರ ಮಾಡುತ್ತಾರೆ. ಅದೇ ರಾಜ್ ಪುತ್ರ ಶಿವಣ್ಣ, ಬೇಡಿಕೆಯ ‘ಮಾಸ್ ಲೀಡರ್’ ಆಗಿದ್ದಾಗಲೇ ‘ಕವಚ’ ಎನ್ನುವ ಚಿತ್ರದಲ್ಲಿ ಬ್ಲೈಂಡ್ ಪಾತ್ರ ಮಾಡುತ್ತಾರೆ. ಕಾಲೇಜು, ಯೂಥ್ ಫೀಲ್ ಇರುವಾಗಲೇ ‘ಜನುಮದ ಜೋಡಿ’ಯಲ್ಲಿ ಕ್ಷೌರಿಕನಾಗುವಂತಹ ಕ್ರಾಂತಿಕಾರಕ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಿದ್ದು ಆ ರಾಜಕುಮಾರ ಕಟ್ಟಿದ ಪರಂಪರೆಯ ಬೆಳಕಿನ ಧೈರ್ಯದಿಂದಲೇ.
‘ಚಿಗುರಿದ ಕನಸು’ ಚಿತ್ರದ ಮೂಲಕ ಕಾದಂಬರಿಗೂ ಕಮರ್ಷಿಯಲ್ ಹಿಟ್ ಕೊಟ್ಟ ಶಿವಣ್ಣ ಅವರ ಸಿನಿಮಾಗಳ ಪ್ರಯೋಗದ ವಿಚಾರಕ್ಕೆ ಬಂದರೆ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರ, ಶಿವಣ್ಣ ಅವರ ವೃತ್ತಿ ಪಯಣದಲ್ಲಿ ಮಹತ್ತರವಾದ ಸಿನಿಮಾ. 18 ಗಂಟೆಯಲ್ಲಿ ಒಂದು ಸಿನಿಮಾ ಮಾಡಿ ಮುಗಿಸಬಹುದು ಅನ್ನೋ ಪ್ರಯೋಗಕ್ಕೂ ಸಾಕ್ಷಿಯಾದ ಈ ‘ದೊರೆ’ಯ ‘ಸುಗ್ರೀವ’ ಶಕ್ತಿ ಮರೆಯಲಾಗದು. ಈ ಎಲ್ಲದರ ನಡುವೆಯೂ ಈ ವ್ಯವಸ್ಥೆಯ ಹಳದಿ ಕಣ್ಣಿಗೆ ತುತ್ತಾಗಿರೋ ‘ತೋಟಿ’ ರೀತಿಯ ಪಾತ್ರವನ್ನು ಮಾಡಬೇಕೆಂಬ ಆಸೆ ವ್ಯಕ್ತಪಡಿಸಿದ ಶಿವಣ್ಣ, ನಿಜವಾಗಲೂ ನಮ್ಮ ‘ಬಂಧು-ಬಳಗ’. ವೈಲೆಂಟಿಗೆ ‘ಓಂ’ಕಾರ ಹಾಕಿದ ಸತ್ಯ ಆಲಿಯಾಸ್ ‘ಜೋಗಿ’, ಸೈಲೆಂಟಿಗೂ ಸೈ ಅನ್ನೋ ‘ಕಡ್ಡಿಪುಡಿ’ ಆನಂದ ನೀವು. ಬಂದು ಹೋಗೋ ಪಾತ್ರಕ್ಕೂ ಖದರ್ ತುಂಬಿದ ನೀವು, ‘ಸುಮ್ಮನೆ ಬಂದ್ರೆ ಅತಿಥಿ, ಹುಡ್ಕೊಂಡು ಬಂದ್ರೆ ತಿಥಿ’, ‘ಸೈಲೆಂಟಾಗಿದ್ರೆ ರಾಮ, ವೈಲೆಂಟ್ ಆದ್ರೆ ರಾವಣ’ ಅನ್ನೋದು ಇಡೀ ಸೌತ್ ಗೊತ್ತು ಮಾಡಿದ ‘ಜೈಲರ್’ ನರಸಿಂಹ ಕೂಡ ಹೌದು. ತನ್ನ ಇರುವಿಕೆಯಿಂದಲೇ ಜಗ್ಗನೇ ದೀಪ ಹೊತ್ತಿಸೋ ಶಕ್ತಿ ಇರುವ ಶಿವಣ್ಣ, ಸರ್ವ ಶ್ರೇಷ್ಠ ಆಲ್ ರೌಂಡರ್ ಎಂದರೆ ತಪ್ಪಾಗಲಾರದು.
ತಾನು ಮಾಡೋ ಆ್ಯಕ್ಷನ್‌ಗೂ ಡ್ಯೂಪ್ ಇಲ್ಲದೆ, ಈ ವಯಸ್ಸಿನಲ್ಲೂ ‘ಟಗರು’ನಂತೆ ಎಗರಿ ‘ನಾಚ್’ ಮಾಡೋ ಇವರನ್ನ ಮ್ಯಾಚ್ ಮಾಡೋರು ಇನ್ನೂ ಬಂದಿಲ್ಲ. ಎಲ್ಲಿ ಕತೆ ಇದೆಯೋ ಅಲ್ಲಿ ಈ ಕಥಾನಾಯಕ ಇರ್ತಾನೆ. ಅವ್ರೇ ನಮ್ಮ ಶಿವಣ್ಣ. ‘ಹಳ್ಳಿಯಾದರೇನು ಶಿವ, ದಿಲ್ಲಿಯಾದರೇನು ಶಿವ’ ಅನ್ನೋ ಹಾಗೆ, ಹಳ್ಳಿ ಸೊಗಡಿನ ಪಾತ್ರಗಳಲ್ಲೂ ಮಿಂಚಿದ ‘ಮೈಲಾರಿ’, ‘ಜೋಡಿ ಹಕ್ಕಿ’, ‘ನಂಜುಂಡಿ’, ‘ಭೂಮಿ ತಾಯಿ ಚೊಚ್ಚಲ ಮಗ’ ಈ ಶಿವಣ್ಣ. ಹಾಗಂತ ಕಥಾನಾಯಕನಾಗಿ ಅವರೊಬ್ಬರೇ ತೆರೆ ಮೇಲೆ ಮೆರೆಯುತ್ತಾ ಬಂದವರಲ್ಲ. ರಮೇಶ್ ಅರವಿಂದ್, ರವಿಚಂದ್ರನ್, ಉಪೇಂದ್ರ, ಡಾಲಿ ಧನಂಜಯ, ರಾಜ್ ಬಿ ಶೆಟ್ಟಿ... ಹೆಸರು ಮುಂದುವರಿಯುತ್ತವೆ. ಇನ್ನೊಬ್ಬ ಹೀರೋ ಜತೆಗೆ ತೆರೆ ಹಂಚಿಕೊಳ್ಳುವುದಕ್ಕೂ ಲೆಕ್ಕಹಾಕದ ‘ದೊರೆ’ ನಮಗೆ ಇನ್ನೂ ದೊರೆತಿಲ್ಲ. ‘ನಾನೇ’ ಎನ್ನುವವರ ನಡುವೆ ನಾನೇನು ಅಲ್ಲವೆಂದ ‘ಸಂತ’. ಹೀಗಾಗಿ ಮಲ್ಟಿಸ್ಟಾರ್ ಚಿತ್ರಗಳ ಪಾಲಿಗೆ ನೀವು ನಿಜಕ್ಕೂ ‘ಜೋಡಿ ಹಕ್ಕಿ’. ಸೂಪರ್ ಸ್ಟಾರ್ ಆಗಿದ್ದರೂ ಶಿವಣ್ಣ ಸೂಟು ಬೂಟು ಹಾಕಿಕೊಂಡು ಮೆರೆಯೋ ಮನುಷ್ಯ ಅಲ್ಲ. ಟ್ರ್ಯಾಕ್ ಸೂಟ್ ಹಾಕಿಕೊಂಡು ತಾವು ನಡೆದಿದ್ದೇ ಟ್ರ್ಯಾಕು ಎಂದವರು. ತಾವು ಮುರಿದಿದ್ದೇ ಟ್ರ್ಯಾಕ್ ರೆಕಾರ್ಡ್.
ಇತರರಂತೆ ಪ್ರಚಾರಕ್ಕೆ ಬೇರೆ ಸ್ಟಾರ್‌ಗಳ ಮೊರೆ ಹೋದವರಲ್ಲ, ಏಜೆನ್ಸಿಗಳ ಬಾಗಿಲು ತಟ್ಟಿದವರಲ್ಲ. ತನ್ನ ಕೆಲಸಗಳಿಂದ ತನ್ನನ್ನು ಖ್ಯಾತಿಗೊಳಿಸಿಕೊಂಡು, ತನ್ನ ಸರಳತೆಯೇ ಮೈಲೇಜ್ ಮಾಡಿಕೊಂಡ ಮೈಲಾರಿ ಇವರು. ಸಿನಿಮಾ ವ್ಯಕ್ತಿಯಾಗಿ ಮಾತ್ರವಲ್ಲ, ಸಮಾಜಕ್ಕೂ ಮಾದರಿಯಾಗಬೇಕು ಎಂದುಕೊಂಡವರು. ಕ್ಯಾನ್ಸರ್‌ಗೆ ಚಿಕಿತ್ಸೆ ಮಾಡಿಸಿಕೊಂಡು ಬಂದ ಎರಡೇ ವಾರದಲ್ಲಿ ಆ ಕ್ಯಾನ್ಸರ್ ಬಗ್ಗೆ ಹೇಳುವ ಮೂಲಕ ಇಂಥ ಸಮಸ್ಯೆಯಿಂದ ಬಳಲುತ್ತಿರುವ ಸಾವಿರಾರ ಮಂದಿಗೆ ಆದರ್ಶ, ಸ್ಫೂರ್ತಿ ಆಗಿದ್ದೀರಿ. ತಮ್ಮ ಬದುಕಿನಿಂದಲೂ ಮೆಸೇಜ್ ಕೊಟ್ಟಿದ್ದೀರಿ. ಹೆಸರಿನಲ್ಲಿ ರಾಜ ಇದ್ದರೂ, ಚಿತ್ರರಂಗ ಅನ್ನೋ ‘ರಣರಂಗ’ದಲ್ಲಿ ಯಾವುದೇ ರುಂಡ ಕತ್ತರಿಸದೆ ಯುದ್ಧವನ್ನು ಗೆದ್ದ ಒಬ್ಬನೇ ಒಬ್ಬ ರಾಜ ಅಂದರೆ, ಅದು ನಮ್ಮ ಶಿವ‘ರಾಜ’. ಈ ‘ದೇವರ ಮಗ’ನಿಗೆ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು.