ಪ್ರಶಸ್ತಿ ನೆಪದಲ್ಲಿ ಕನ್ನಡಿಗರಿಗೆ ಅವ ಮರ್ಯಾದೆ ಯಾಕೆ : ನಿರ್ದೇಶಕ ಹೇಮಂತ್‌ ರಾವ್‌

KannadaprabhaNewsNetwork |  
Published : Oct 04, 2024, 01:03 AM ISTUpdated : Oct 04, 2024, 04:28 AM IST
ಹೇಮಂತ್‌ | Kannada Prabha

ಸಾರಾಂಶ

ಇಫಾ ಅವಾರ್ಡ್‌ ಫಂಕ್ಷನ್‌ನಲ್ಲಿ ನಡೆದದ್ದೇನು ಅಂತ ನಿರ್ದೇಶಕ ಹೇಮಂತ್‌ ರಾವ್‌ ವಿವರಿಸಿದ್ದಾರೆ.

- ಪ್ರಿಯಾ ಕೆರ್ವಾಶೆ

- ಸಾಮಾನ್ಯವಾಗಿ ಖಾಸಗಿ ಅವಾರ್ಡ್‌ ಕಾರ್ಯಕ್ರಮಗಳಿಗೆ ವಿಜೇತರನ್ನಷ್ಟೇ ಕರೆದುಕೊಂಡು ಹೋಗುತ್ತಾರೆ. ನನಗೂ ಪ್ರಶಸ್ತಿ ನೀಡುವ ಭರವಸೆಯಲ್ಲೇ ಆಹ್ವಾನ ಬಂದಿದ್ದ ಕಾರಣ ನಾನು ಕಾರ್ಯಕ್ರಮಕ್ಕೆ ಹೋಗಿದ್ದೆ. ಆದರೆ ಬೆಳಗಿನ ಜಾವ ಮೂರು ಗಂಟೆಯವರೆಗೆ ಕಾಯಿಸಿ, ನಿಮಗೆ ಏನೂ ಇಲ್ಲ, ಹೊರಡಿ ಅನ್ನೋ ರೀತಿ ಕಳಿಸಿಕೊಟ್ಟರು.

- ಇದು ಮೂಲತಃ ಹಿಂದಿ ಕಾರ್ಯಕ್ರಮ. ದೊಡ್ಡ ಮಟ್ಟದಲ್ಲಿ ಹಿಂದಿಗೆ ಮಹತ್ವ ನೀಡ್ತಾರೆ. ಇತ್ತೀಚೆಗೆ ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ ಜನಪ್ರಿಯವಾದ ಮೇಲೆ ಇಲ್ಲಿಂದಲೂ ಬಂಡವಾಳ ಹುಟ್ಟಿಸಬೇಕು ಅನ್ನುವ ಕಾರಣಕ್ಕೆ ದಕ್ಷಿಣ ಭಾರತೀಯ ಸಿನಿಮಾಗಳನ್ನೂ ಸೇರಿಸಿದ್ದಾರೆ. ಸಾಮಾನ್ಯವಾಗಿ ಸೈಮಾದಂಥಾ ಅವಾರ್ಡ್‌ ಫಂಕ್ಷನ್‌ಗಳಲ್ಲೆಲ್ಲ ಎರಡೆರಡು ಭಾಷೆಯ ಚಿತ್ರಗಳ ಪ್ರಶಸ್ತಿ ಪ್ರದಾನಕ್ಕೆ ಒಂದೊಂದು ದಿನ ಇಡುತ್ತಾರೆ. ಆದರೆ ಐಫಾದಲ್ಲಿ ಒಂದೇ ದಿನ ನಾಲ್ಕು ದಕ್ಷಿಣ ಭಾರತೀಯ ಭಾಷೆಯ ಸಿನಿಮಾಗಳಿಗೆ ಅವಾರ್ಡ್‌ ನೀಡಲಾಯ್ತು. ಅದರಲ್ಲಿ ಕನ್ನಡಕ್ಕೆ ಕೊಟ್ಟ ಕೊನೆಯ ಸ್ಥಾನ.

- ನಮ್ಮ ಕಾರ್ಯಕ್ರಮ ಮಧ್ಯರಾತ್ರಿ ಒಂದೂವರೆಗೆ ಆರಂಭವಾಯ್ತು. ಅಂಗಣದಲ್ಲಿ ನಾವು ಬಿಟ್ಟರೆ ಮತ್ಯಾರೂ ಇರಲಿಲ್ಲ. ಇಡೀ ಆಡಿಟೋರಿಯಂ ಜನರಿಲ್ಲದೆ ಗವ್ವೆನ್ನುತ್ತಿತ್ತು. ನಾನಾದರೂ ಹೊಸಬ. ಹಿರಿಯ ನಟಿ, ಸಂಸದೆ ಸುಮಲತಾ, ಹಿರಿಯ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಇವರನ್ನೂ ಅಷ್ಟು ಹೊತ್ತು ಕಾಯಿಸಿದರು. ಮಲಯಾಳಂನವರು ನಾವಷ್ಟು ಹೊತ್ತು ಕಾಯಕ್ಕಾಗಲ್ಲ ಅಂತ ಹೇಳಿ ಬೇಗ ಕಾರ್ಯಕ್ರಮ ಮುಗಿಸಿ ಹೊರಟರು. ಆದರೆ ಕನ್ನಡ ಇಂಡಸ್ಟ್ರಿಯ ಉಸ್ತುವಾರಿ ಹೊತ್ತಿದ್ದ ನಮ್ಮ ಕಷ್ಟ ಸಹಿಷ್ಣು ದೊಡ್ಡ ಮನುಷ್ಯರು ನಮ್ಮ ಕಾರ್ಯಕ್ರಮ ಕೊನೆಗೆ ಇಟ್ಟಿದ್ದರ ಬಗ್ಗೆ ಕಮಕ್‌ ಕಿಮಕ್‌ ಅಂದಂತಿರಲಿಲ್ಲ.

- ಸಾಮಾನ್ಯವಾಗಿ ಬೇರೆ ಇಂಡಸ್ಟ್ರಿಯವರ ಎದುರು ನಾವು ಅವಾರ್ಡ್‌ ತೆಗೆದುಕೊಳ್ಳುವುದು, ಅವರು ನಮ್ಮೆದುರು ಅವಾರ್ಡ್‌ ತಗೊಳ್ಳೋ ಥರ ಇದ್ದರೆ ಪ್ರಶಸ್ತಿ ಪಡೆದದ್ದಕ್ಕೆ ಗೌರವ, ಅಭಿಮಾನ ಇರುತ್ತೆ. ಪರಸ್ಪರ ಪರಿಚಯವೂ ಆಗುತ್ತೆ. ಅದು ಬಿಟ್ಟು ಈ ರೀತಿ ಖಾಲಿ ಆಡಿಟೋರಿಯಂನಲ್ಲಿ ಅವಾರ್ಡ್‌ ತಗೊಳ್ಳೋದರಲ್ಲಿ ಏನು ಅರ್ಥ ಇದೆ? ಅದರ ಬದಲು ನಮ್ಮ ಬೆಂಗಳೂರಿನ ಯಾವುದಾದರೂ ಚೌಲ್ಟ್ರಿಯಲ್ಲಿ ಕೊಡಬಹುದಲ್ವಾ?

- ಸಿನಿಮಾ ಇಂಡಸ್ಟ್ರಿ ಅಂದಮೇಲೆ ಅಲ್ಲಿ ಕಲಾವಿದರ ಜೊತೆಗೆ ಟೆಕ್ನಿಶಿಯನ್ ಕೆಲಸವೂ ಬಹಳ ಮಹತ್ವದ್ದು. ಹಿಂದಿ, ತೆಲುಗು, ತಮಿಳು ಇಂಡಸ್ಟ್ರಿಯ ಸಿನಿಮಾಟೋಗ್ರಾಫಿ, ಸಂಕಲನ, ಸೌಂಡ್‌ ಮಿಕ್ಸಿಂಗ್‌ಗೆಲ್ಲ ಪ್ರಶಸ್ತಿ ಕೊಟ್ಟಿದ್ದಾರೆ. ಆದರೆ ಕನ್ನಡದಲ್ಲಿ ಯಾವೊಬ್ಬ ಟೆಕ್ನಿಶಿಯನ್‌ಗೂ ಪ್ರಶಸ್ತಿ ನೀಡಿಲ್ಲ.

- ಬಾಹುಬಲಿ ಬಿಟ್ಟರೆ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದ್ದು ನಮ್ಮ ಕನ್ನಡದ ‘ಕೆಜಿಎಫ್‌’, ‘ಕಾಂತಾರ’ ಸಿನಿಮಾಗಳು. ಅಂಥಾ ಗೌರವಾನ್ವಿತ ಇಂಡಸ್ಟ್ರಿಯನ್ನು ಅವಾರ್ಡ್‌ ನೆವದಲ್ಲಿ ಇಷ್ಟು ಹೀನವಾಗಿ ನೋಡುವುದು ಎಷ್ಟು ಸರಿ ಎಂಬುದು ನನ್ನ ಪ್ರಶ್ನೆ.

- ಇನ್ನೊಂದು ವಿಚಾರ ನನಗೆ ನಿರ್ದೇಶಕ ತರುಣ್‌ ಸುಧೀರ್‌ ಅವರಿಗೆ ಪ್ರಶಸ್ತಿ ಬಂದದ್ದಕ್ಕೆ ಯಾವ ಅಸಮಾಧಾನವೂ ಇಲ್ಲ. ಕೆಲವರು ಈ ವಿಚಾರಕ್ಕೆ ನನ್ನನ್ನು ಆಡಿಕೊಂಡರು. ಆದರೆ ನಾನಿದಕ್ಕೆ ಪ್ರತಿಕ್ರಿಯಿಸಲಿಲ್ಲ. ಏಕೆಂದರೆ ನನ್ನ ಮಾತು, ಕೃತಿ ಎಲ್ಲವೂ ಸಿನಿಮಾವೇ. ನನ್ನ ಅಂತರಂಗವನ್ನು ಪ್ರಜ್ಞಾಪೂರ್ವಕವಾಗಿ ಸಿನಿಮಾದಲ್ಲೇ ತೆರೆದಿಡುತ್ತೇನೆ. ಇಷ್ಟಾದರೂ ಸಿನಿಮಾಕ್ಕಾಗಿ ಕೆಲಸ ಮಾಡುವ ನನ್ನಂಥವನಿಗೆ, ಕನ್ನಡ ಚಿತ್ರರಂಗಕ್ಕೆ ಅವಗಣನೆ ಮಾಡಿದ್ದಕ್ಕೆ ಬಹಳ ಬೇಸರವಿದೆ. ಆ ನೋವೇ ನನ್ನಿಂದ ಇಷ್ಟು ಮಾತುಗಳನ್ನಾಡಿಸಿದೆ. ನಮಸ್ಕಾರ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ದಿ ಡೆವಿಲ್‌ ಕಾಸ್ಟ್ಯೂಮ್‌ನಲ್ಲಿ ದರ್ಶನ್‌ ಪುತ್ರ ವಿನೀಶ್‌
ಪಾಕಿಸ್ತಾನದಲ್ಲಿ ನಿಷೇಧವಿದ್ದರೂ ಧುರಂಧರ್‌ ಸೂಪರ್‌ಹಿಟ್‌