;Resize=(412,232))
ಖರ್ಚು ಮಾಡುವ ನಿರ್ಮಾಪಕರೇ, ನಿಮಗೆ ಬುದ್ಧಿ ಇದೆಯಲ್ವಾ, ಕಂಟ್ರೋಲ್ ಮಾಡಿ.
- ಈ ಕಾಲಕ್ಕೆ ಯಾವ ಥರದ ಸಿನಿಮಾ ಕೊಟ್ಟರೆ ಜನ ತೆಗೆದುಕೊಳ್ತಾರೆ ಅಂತ ನಿರ್ದೇಶಕ, ಬರಹಗಾರನಿಗೆ ಸ್ಪಷ್ಟತೆ ಇರಬೇಕು. ನಮ್ಮಲ್ಲಿ ಒಂದೊಳ್ಳೆ ಹಾಡು ಬಂದು 10 ವರ್ಷ ಆಯ್ತು. ಒಂದೊಳ್ಳೆ ಲವ್ ಸ್ಟೋರಿ ಇಲ್ಲ, ಕಾಮಿಡಿ ಸಿನಿಮಾ ಇಲ್ಲ. ಎಲ್ಲರಿಗೂ ಇಗೋ ಜಾಸ್ತಿ. ಹೇಗಾದ್ರೂ ಆಗ್ಲಿ ನಾವು ಚೆನ್ನಾಗಿರಬೇಕು ಅನ್ನೋದು ನಿರ್ಮಾಪಕರ ಮನಸ್ಥಿತಿ.
- ಒಂದು ಸಿನಿಮಾ ಗೆದ್ದರೆ ಹೀರೋಗೆ ಹೆಚ್ಚಿನ ಕ್ರೆಡಿಟ್ ಸಿಗೋದು. ಗೆದ್ದ ತಕ್ಷಣ ಕನ್ನಡಿಗರು ಬೇಡ, ಬೇರೆಯವರು ಇವರಿಗಿಂತ ಚೆನ್ನಾಗಿ ಮಾಡ್ತಾರೆ ಅನ್ನುವ ಮನೋಭಾವ ಹೀರೋಗಳಲ್ಲಿ ಜಾಸ್ತಿ ಆಗುತ್ತಿದೆ. ಇಲ್ಲಿಯ ಜನ ಶಿಳ್ಳೆ ಹೊಡೆದು ಎತ್ತಿ ಮೆರೆಸಿರುತ್ತಾರೆ. ಹೀಗೆ ಮೇಲೆತ್ತಿದವರಿಗೆ ಅವರು ಒಂದೊಳ್ಳೆ ಸಿನಿಮಾ ಕೊಡಬೇಕಲ್ವಾ.
- ಮೊದಲೆಲ್ಲ ಕಥೆ ರೆಡಿ ಮಾಡಿ ಹೀರೋಗಳನ್ನು ಆಯ್ಕೆ ಮಾಡುತ್ತಿದ್ದೆವು. ಈಗ ಹೀರೋ ಹೇಳುವ ಕಥೆಯನ್ನು ಸಿನಿಮಾ ಮಾಡುತ್ತಾರೆ. ಒಂದು ವೇಳೆ ಗೆದ್ದರೆ ನಮ್ಮ ಪ್ರೊಡ್ಯೂಸರ್ಸ್‌ಗೆ ಅವರು ಡೇಟ್ಸ್ ಕೊಡೋದಿಲ್ಲ. ಬೇರೆ ಭಾಷೆ ಸಿನಿಮಾದಲ್ಲಿ ಚೆನ್ನಾಗಿ ಕಾಸು ಬರುತ್ತದೆ, ನಾನು ಚೆನ್ನಾಗಿದ್ದರೆ ಸಾಕು ಅಂದುಕೊಳ್ಳುತ್ತಾರೆ.
- ನಿರ್ದೇಶಕರು ಜಾಸ್ತಿ ಖರ್ಚು ಮಾಡಿಸ್ತಾರೆ, ಹೀರೋಗಳಿಂದ ಶೂಟಿಂಗ್ ದಿನಗಳು ವಿಪರೀತ ಏರುತ್ತಿವೆ ಎನ್ನುವ ನಿರ್ಮಾಪಕರು ಆ ಪ್ರಾಸೆಸ್ ಆಗುವಾಗ ಯಾಕೆ ಮಾತನಾಡೋದಿಲ್ಲ. ಪಿಕ್ಚರ್ ಮಾಡೋದು ನಿರ್ಮಾಪಕರಾದ ನೀವು, ಖರ್ಚು ಮಾಡೋರು ನೀವು. ನಿಮಗೆ ಬುದ್ಧಿ ಇದೆಯಲ್ವಾ, ಎಲ್ಲಕ್ಕೂ ಗೋಣಲ್ಲಾಡಿಸುತ್ತಾ ನೀವು ಬೀಳುವ ಜೊತೆಗೆ ಇಂಡಸ್ಟ್ರಿಯನ್ನೂ ಪಾತಾಳಕ್ಕೆ ತಳ್ತಿದ್ದೀರಲ್ಲ..
- ನಿರ್ದೇಶಕ ಸಿನಿಮಾ ಮಾಡಿದ್ರೆ ಸಾಕಾಗಲ್ಲ, ಅದನ್ನು ನಿಲ್ಲಿಸಬೇಕು. ಸಿನಿಮಾದಲ್ಲಿ ಇರುವವರನ್ನು ನಿಲ್ಲಿಸಬೇಕು. ಅವರಿಗೆ ಮಾರ್ಕೆಟ್ ಕ್ರಿಯೇಟ್ ಮಾಡಬೇಕು. ನಾಯಕ ನಟ ಅಂತ ನಂಬಿಸಬೇಕು. ಇವತ್ತು ಯಾವ ನಿರ್ದೇಶಕ ಆ ಕೆಲಸ ಮಾಡುತ್ತಿದ್ದಾನೆ..
- ಕೆಲವು ಹೀರೋಗಳು ಬೆಳೆಸಿದವರನ್ನು ಮರೆತೇ ಬಿಡ್ತಾರೆ. ಅಲ್ಲಪ್ಪ, ನೀನು ಆಲ್‌ರೆಡಿ ಶಿಲೆ ಆಗಿರುವುದು ಯಾರಿಂದ? ಕನ್ನಡಿಗರಿಂದ ತಾನೇ.. ಆ ಪರಿಜ್ಞಾನ ಇಲ್ವಾ.. ಇಲ್ಲಿರುವವರಿಗೆ ಗೊತ್ತಿಲ್ಲ ಅಂದರೆ ಹೇಳಿಕೊಡು, ಜೊತೆಯಲ್ಲಿಟ್ಕೋ, ನೀನು ಬುದ್ಧಿವಂತ ತಾನೇ, ನೀನು ಮಾಡಿದರೆ ಸಿನಿಮಾ 300 ದಿನ ಓಡುತ್ತಲ್ವಾ ಮಾಡು. ನಮ್ಮ ಭಾಷೆಯನ್ನ ಎತ್ತಿ ಹಿಡಿಯಿರಿ.
- ಸಿನಿಮಾ ಇರಲಿ, ಯಾವುದೇ ಕ್ಷೇತ್ರ ಇರಲಿ, ಕೇಳಲಿಕ್ಕೆ ಒಬ್ಬರು ಬೇಕು. ನಾವು ತಪ್ಪು ಮಾಡಿದರೆ ಅವರು ಕೇಳ್ತಾರೆ ಅನ್ನುವ ಭಯ ಬೇಕು. ವಾಣಿಜ್ಯ ಮಂಡಳಿ ಚಿತ್ರರಂಗದ ಮಾತೃಸಂಸ್ಥೆ. ಯಾರೋ ತಪ್ಪು ಮಾಡಿದ್ದು ಕಂಡರೆ, ಕರೆಸಿ ಮಾತನಾಡಿ. ಕೂಗಾಡೋದು ಕಿರಿಚಾಡೋದರಿಂದ ಯಾವಾಗಲೂ ಕೆಲಸ ಆಗಲ್ಲ. ಗೆಲ್ಲಬೇಕು ಅಂದರೆ ಒಂದಾಗಬೇಕು.
- ನಮ್ಮ ರೇಂಜ್‌ಗೆ ತಕ್ಕಂಥಾ ನಿರ್ದೇಶಕರು, ಟೆಕ್ನಿಷಿಯನ್‌ಗಳು ಇಲ್ಲಿ ಇಲ್ಲ, ಬೇರೆ ಭಾಷೆ ಜನ ಬೇಕು ಅಂದುಕೊಳ್ಳುವ ಕೆಲವು ಹೀರೋಗಳ ಮುಠ್ಠಾಳತನ ಇದೆಯಲ್ಲ ಅದು ತಪ್ಪು. ಇಲ್ಲಿ ಗೆಲುವು ತಗೊಂಡು ಇಲ್ಲಿಯವರಿಗೆ ಸಿನಿಮಾ ಕೊಡಿ. ಪ್ಯಾನ್ ಇಂಡಿಯಾ ಅಂತಾರೆ, ವರ್ಲ್ಡ್ ವೈಡ್ ರಿಲೀಸ್ ಅಂತಾರೆ. ಯಾವುದ್ರೀ ವರ್ಲ್ಡ್‌ವೈಡ್? ಆಸ್ಟ್ರೇಲಿಯಾದಲ್ಲಿ ಯಾರು ಮಾರ್ನಿಂಗ್ ಶೋಗೆ ಬಂದು ನಿಮ್ ಸಿನಿಮಾ ನೋಡ್ತಾರೆ..