ನಾನು ಕ್ಯಾನ್ಸರ್‌ಗೆ ಕುಗ್ಗಲಿಲ್ಲ, ಧೈರ್ಯವಾಗಿ ಎದುರಿಸಿ ಗೆದ್ದು ಬಂದೆ : ಶಿವರಾಜ್ ಕುಮಾರ್

Published : Jan 27, 2025, 10:28 AM ISTUpdated : Jan 27, 2025, 10:38 AM IST
Shivaraj kumar

ಸಾರಾಂಶ

ಚಿಕಿತ್ಸೆಗಾಗಿ ಬೆಂಗಳೂರಿನಿಂದ ಅಮೆರಿಕಾಗೆ ಹೊರಡಲು ನಿಂತಾಗ ತುಂಬಾ ಭಯ ಆಯಿತು. ಏನೇ ಆದರೂ ಧೈರ್ಯವಾಗಿ ಎದುರಿಸಬೇಕೆಂದು ನಿರ್ಧರಿಸಿಕೊಂಡೆ. ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು ಎಲ್ಲರ ಆಶೀರ್ವಾದದಿಂದ ಆರೋಗ್ಯವಂತನಾಗಿ ಮರಳಿ ಬಂದಿದ್ದೇನೆ. ಹೀಗೆ ಹೇಳಿದ್ದು ನಟ ಶಿವರಾಜ್ ಕುಮಾರ್ ಅವರು.

ಚಿಕಿತ್ಸೆಗಾಗಿ ಬೆಂಗಳೂರಿನಿಂದ ಅಮೆರಿಕಾಗೆ ಹೊರಡಲು ನಿಂತಾಗ ತುಂಬಾ ಭಯ ಆಯಿತು. ಏನೇ ಆದರೂ ಧೈರ್ಯವಾಗಿ ಎದುರಿಸಬೇಕೆಂದು ನಿರ್ಧರಿಸಿಕೊಂಡೆ. ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು ಎಲ್ಲರ ಆಶೀರ್ವಾದದಿಂದ ಆರೋಗ್ಯವಂತನಾಗಿ ಮರಳಿ ಬಂದಿದ್ದೇನೆ. ಹೀಗೆ ಹೇಳಿದ್ದು ನಟ ಶಿವರಾಜ್ ಕುಮಾರ್ ಅವರು.

 ಅಮೆರಿಕದಲ್ಲಿ ಚಿಕಿತ್ಸೆ ಮುಗಿಸಿಕೊಂಡು ಒಂದು ತಿಂಗಳ ನಂತರ ಬೆಂಗಳೂರಿಗೆ ವಾಪಸ್ ಬಂದ ನಟ ಶಿವರಾಜ್ ಕುಮಾರ್ ಅವರು ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದರು. 'ಇದೊಂದು ತುಂಬಾ ರಿಸ್ಕಿ ಸರ್ಜರಿ ಎಂದು ಮೊದಲೇ ಗೊತ್ತಿತ್ತು. ಈ ಕಾರಣಕ್ಕೆ ಮೊದಲ ದಿನ ಭಯ ಆಯಿತು. ಹೀಗಾಗಿ ಆಪರೇಷನ್‌ಗೆ ಒಳಗಾಗುವ ಮೊದಲು ಏನೆಲ್ಲಾ ಮಾಡಬೇಕು ಆ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿದ್ದೆ. ಬೆಂಗಳೂರಿನಿಂದ 21 ಗಂಟೆ ಪ್ರಯಾಣಿಸಿ ಅಮೆರಿಕದ ಆಸ್ಪತ್ರೆ ಮುಂದೆ ನಿಂತಾಗ ಸ್ವಲ್ಪ ಧೈರ್ಯ ಬಂತು. 

ಆಪರೇಷನ್ ಆದ ಇಡೀ ದಿನ ಒಂದು ಸರ್ಕಸ್ ರೀತಿ ಇತ್ತು. ಒಂದೇ ದಿನ ಆರು ಸರ್ಜರಿ ಆಗಿದೆ. ಆದರೆ, ಎಷ್ಟು ಹೊಲಿಗೆ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ವೈದ್ಯರು, ಅಭಿಮಾನಿಗಳು, ಕುಟುಂಬದವರು, ಸ್ನೇಹಿತರು ಹೀಗೆ ಎಲ್ಲರ ಆರೈಕೆ ಮತ್ತು ಆಶೀರ್ವಾದದಿಂದ ಕೊನೆಗೂ ಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ನನ್ನ ಪತ್ನಿ ಗೀತಾ ತಾಯಿಗಿಂತ ಹೆಚ್ಚಾಗಿ ನನ್ನ ಈ ಸಂದರ್ಭದಲ್ಲಿ ನೋಡಿಕೊಂಡರು. ಈ ಬಾರಿ ನನ್ನ ಮಗಳು ಕೂಡ ಜೊತೆಯಾದರು. ಇವರ ಪ್ರೀತಿಯನ್ನು ಮಾತಿನಲ್ಲಿ ಹೇಳಲಾಗದು. ನಿನ್ನ ಧೈರ್ಯಕ್ಕೆ ಮೆಚ್ಚಿದೆ ಅಂತ ವೈದ್ಯರು ನನಗೆ ಹೇಳಿದರು. ಧೈರ್ಯ ತುಂಬುವವರು ಜೊತೆಗಿದ್ದರೆ ಯಾವುದೇ ಸಮಸ್ಯೆಯನ್ನು ಗೆದ್ದು ಬರಬಹುದು ಎನ್ನುವುದಕ್ಕೆ ಇವರ ಪ್ರೀತಿನೇ ಸಾಕ್ಷಿ' ಎಂದರು.

 'ಆಪರೇಷನ್ ಆದ ಎರಡನೇ ದಿನಕ್ಕೆ ಎದ್ದು ನಡೆಯಕ್ಕೆ ಶುರು ಮಾಡಿದೆ. ಚಿಕಿತ್ಸೆ ಮಾಡಿರುವ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡೋಣ ಅಂತವೈದ್ಯರು ಹೇಳಿದ್ದಾರೆ. ಆಪರೇಷನ್ ವೇಳೆ ನಾಲ್ಕು ದಿನ ಲಿಕ್ವಿಡ್ ಊಟವೇ ಮಾಡಿದ್ದೇನೆ. ಡಿಸ್ಟಾರ್ಜ್ ಆದ ನಂತರ ಒಂದೊಂದೇ ಟ್ಯೂಬ್ ಕ್ಲಿಯರ್ ಮಾಡಿದರು' ಎಂದು ಶಿವರಾಜ್ ಕುಮಾರ್ ಹೇಳಿದರು. ಇದೇ ಸಂದರ್ಭದಲ್ಲಿ ಸಿನಿಮಾಗಳಲ್ಲಿ ನಟಿಸುವ ಕುರಿತು ಮಾತನಾಡಿದ ಶಿವರಾಜ್ ಕುಮಾರ್, 'ನಾನು ಸಿನಿಮಾಗಳಲ್ಲಿ ಈಗ ಕೆಲಸಮಾಡಬಹುದು. ತಕ್ಷಣಕ್ಕೆ ನಾನು 141ನೇ ಸಿನಿಮಾ ಮಾಡುತ್ತಿದ್ದೇನೆ. ಇದರ ನಂತರ ನಟ ರಾಮ್ ಚರಣ್ ಜೊತೆ ಒಂದು ಸಿನಿಮಾ ಮಾಡ್ತಿನಿ. ಆದರೆ ದೊಡ್ಡ ಮಟ್ಟದ ಆಕ್ಷನ್ ದೃಶ್ಯಗಳಲ್ಲಿ ನಟಿಸುವುದಕ್ಕೆ ಆಗಲ್ಲ. ವೈದ್ಯರ ಸೂಚನೆಯ ಮೇರೆಗೆ ಮಾರ್ಚ್‌ ತಿಂಗಳ ನಂತರ ಆಕ್ಷನ್ ಸಿನಿಮಾಗಳಲ್ಲಿ ನಟಿಸಬಹುದು. ಅಲ್ಲಿವರೆಗೂ ವಿಶ್ರಾಂತಿ ಬೇಕಾಗುತ್ತದೆ' ಎಂದು ತಿಳಿಸಿದರು.

ಅಭಿಮಾನಿಗಳಿಂದ ಅದ್ದೂರಿ ಸ್ವಾಗತ: ಶಿವರಾಜ್ ಕುಮಾರ್ ಅವರು ಚಿಕಿತ್ಸೆ ಮುಗಿಸಿಕೊಂಡು ಅಮೆರಿಕದಿಂದ ಬೆಂಗಳೂರಿಗೆ ವಾಪಸ್ ಬರುವ ಸುದ್ದಿ ತಿಳಿದು ಭಾನುವಾರ ಬೆಳಗ್ಗಿನಿಂದಲೇ ನಾಗವಾರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಶಿವಣ್ಣ ಅವರ ಮನೆ ಮುಂದೆ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸೇರಿದ್ದರು. ಇದೇ ಸಂದರ್ಭದಲ್ಲಿ ಅಭಿಮಾನಿಗಳಿಂದ ಶಿವಣ್ಣ ಅವರಿಗೆ ಸೇಬು ಹಾಗೂ ಹೂವಿನ ಮಾಲೆ ಹಾಕಿ ಸ್ವಾಗತಿಸಲಾಯಿತು. ಅಭಿಮಾನಿಗಳ ಉತ್ಸಾಹ ನೋಡಿ ಶಿವಣ್ಣ ಅವರ ಮುಖದಲ್ಲಿ ಸಂಭ್ರಮ ಕಂಡಿತು.

ಜೀವನವೇ ಒಂದು ಪಾಠ ಅಷ್ಟೆ. ಕ್ಯಾನ್ಸರ್ ಇದೆ ಅಂತ ನಾನು ಕುಗ್ಗಲಿಲ್ಲ. ಅದರಿಂದ ನಾನು ಗೆದ್ದು ಬಂದೆ. ಸರ್ಜರಿ ಆಗೋ ಮುಂಚೆ ನಾನು ತುಂಬಾ ಆ್ಯಕ್ಟಿವ್ ಅಗಿದ್ದೆ. ಮಾರ್ನಿಂಗ್ ವಾಕಿಂಗ್, ಕಾಫಿ, ಗೀತಾ ಜೊತೆ ಚರ್ಚೆ. ನಂತರ ಅಡುಗೆ. ಇದು ನನ್ನ ದಿನಚರಿಯಾಗಿತ್ತು. -ಶಿವರಾಜ್ ಕುಮಾರ್

ನಾನು ಯಾವುದೇ ತಯಾರಿ ಮಾಡಿಕೊಂಡಿರಲಿಲ್ಲ. ದೇವರ ಮೇಲೆ ಭಾರ ಹಾಕಿದ್ದೆ. ನಮ್ಮಪಾಲಿನ ದೇವರು ವೈದ್ಯ ಮುರುಗೇಶ್ ಅವರು. -ಗೀತಾ ಶಿವರಾಜ್ ಕುಮಾರ್

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

2025ರ ಕನ್ನಡ ಚಿತ್ರರಂಗದ ಸಕ್ಸಸ್‌ ರೇಟ್‌ 0.78%-ಗೆದ್ದ ಕನ್ನಡ ಭಾಷೆಯ ಸಿನಿಮಾಗಳು ಎರಡೇ
ಸೆನ್ಸಾರ್‌ನಲ್ಲಿ ಇಯರ್‌ ಎಂಡ್‌ ರಶ್‌ - ಇಬ್ಬರು ಅಧಿಕಾರಿಗಳ ನಿಯೋಜನೆಗೆ ಮನವಿ