ಆರ್. ಕೇಶವಮೂರ್ತಿ
ಹೆಸರು ಮಾಡಿರೋ ನಿರ್ದೇಶಕರ ಮಗಳು ನೀವು. ಸೈಲೆಂಟ್ ಆಗಿ ನಟಿ ಆಗಿದ್ದೀರಲ್ಲ?
ಅಪ್ಪನ ಹೆಸರಿನಿಂದ ಅವಕಾಶಗಳನ್ನು ತೆಗೆದುಕೊಳ್ಳೋದು ಬೇಡ ಅಂತ. ‘ಎಎಂಆರ್ ರಮೇಶ್ ಪುತ್ರಿ ಅಂತ ನಿನಗೆ ಒಂದು ಸಿನಿಮಾ ಸಿಗಬಹುದು. ಎರಡನೇ ಸಿನಿಮಾ ಹೇಗೆ? ಹೀಗಾಗಿ ನೀನೇ ನಿನ್ನ ಸ್ವಂತ ಪ್ರತಿಭೆಯಿಂದ ಇಲ್ಲಿ ನಿಲ್ಲಬೇಕು’ ಅಂತ ಅಪ್ಪನೇ ಹೇಳಿದ್ದಾರೆ.
ಎಎಂಆರ್ ರಮೇಶ್ ಪುತ್ರಿ ನಟಿ ಆಗಿದ್ದಾರೆ ಅಂತ ಮಾತ್ರ ಗೊತ್ತು. ಉಳಿದ ವಿವರಗಳು?
ವಿಜಯ್ ಮಿಲ್ಟನ್ ನಿರ್ದೇಶನದ ತಮಿಳಿನ ‘ಗೋಲಿ ಸೋಡ 3’ ಚಿತ್ರದಲ್ಲಿ ಲೀಡ್ ಪಾತ್ರ ಮಾಡುತ್ತಿದ್ದೇನೆ.
ನೀವು ರಂಗಭೂಮಿಯಿಂದ ಬಂದವರಾ?
ಹೌದು. ಮೈಸೂರಿನ ರಂಗಾಯಣದಲ್ಲಿ ಎರಡು ವರ್ಷ ಡಿಪ್ಲೊಮಾ ಮಾಡಿದ್ದೇನೆ. ಇಲ್ಲಿ ಎರಡು ವರ್ಷ ಬಹುತೇಕ ನಾಟಕಗಳಲ್ಲಿ ಲೀಡ್ ಪಾತ್ರ ಮಾಡಿದ್ದೇನೆ. ಶೇಕ್ಸ್‌ಪಿಯರ್ ಅವರ ‘ಟ್ವೆಲ್ತ್ ನೈಟ್’ ನನಗೆ ದೊಡ್ಡ ಹೆಸರು ತಂದುಕೊಟ್ಟ ನಾಟಕ.
ರಂಗಭೂಮಿಯ ಹೊರತಾಗಿಯೂ ನಿಮ್ಮ ಕಲಿಕೆ ಏನು?
ನಾನು ಓದಿದ್ದು ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ. ಡಿಗ್ರಿ ಓದುವಾಗಲೇ ರಂಗಾಯಣ ಸೇರಿಕೊಂಡೆ. ನನ್ನ ತಂದೆಯವರ ಬಳಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದೇನೆ. ಕ್ಲಾಸಿಕಲ್ ಹಾಗೂ ಭರತನಾಟ್ಯ ಡ್ಯಾನ್ಸರ್ ಕೂಡ. ಪೇಯಿಂಟಿಂಗ್ ಮಾಡುತ್ತೇನೆ. ಆರ್ಟ್ ನನ್ನ ದೊಡ್ಡ ಹವ್ಯಾಸ. ಬೇಜಾರಾದಾಗ, ಖುಷಿ ಆದಾಗೆಲ್ಲ ಪೇಯಿಂಟಿಂಗ್ ಮಾಡುತ್ತೇನೆ.
ಕನ್ನಡದವರಾಗಿ ತಮಿಳು ಭಾಷೆಯನ್ನು ಹೇಗೆ ನಿಭಾಯಿಸುತ್ತಿದ್ದೀರಿ?
ತಮಿಳು ಡೈಲಾಗ್‌ಗಳನ್ನು ಕನ್ನಡದಲ್ಲಿ ಬರೆದುಕೊಂಡು, ಕಲಿತು ಡೈಲಾಗ್ ಹೇಳುತ್ತಿದ್ದೇನೆ. ಭಾಷೆ ನನಗೆ ದೊಡ್ಡ ಸಮಸ್ಯೆ ಅನಿಸುತ್ತಿಲ್ಲ. ಕನ್ನಡ, ಹಿಂದಿ, ಇಂಗ್ಲಿಷ್ ಚೆನ್ನಾಗಿ ಬರುತ್ತದೆ. ತಮಿಳು ಕಲಿಯುತ್ತಿದ್ದೇನೆ. ತೆಲುಗು, ಮಲಯಾಳಂ ಅರ್ಥ ಆಗುತ್ತದೆ.
ಯಾವ ರೀತಿಯ ಪಾತ್ರಗಳು ನಿಮಗೆ ಇಷ್ಟ?
ನಟಿ ಆಗಲು ಬಂದವಳು ನಾನು. ಯಾವುದೇ ರೀತಿಯ ಪಾತ್ರ ಬೇಕಾದರೂ ಮಾಡಬಲ್ಲೆ. ಕ್ಲಾಸಿಕಲ್ ಡ್ಯಾನ್ಸರ್ ಆಗಿರುವುದರಿಂದ ಎಂಥದ್ದೇ ಪಾತ್ರವನ್ನು ಬೇಕಾದರೂ ನಿಭಾಯಿಸುತ್ತೇನೆಂಬ ವಿಶ್ವಾಸ ನನಗಿದೆ.
ಕನ್ನಡದಲ್ಲಿ ಯಾರ ಜತೆ ನಟಿಸುವ ಆಸೆ?
ಹಾಗೇನು ಅಂದುಕೊಂಡಿಲ್ಲ. ಯಾರ ಜೊತೆಗೆ ಬೇಕಾದರೂ ನಟಿಸಬಲ್ಲೆ. ನಾನು ಯುವರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ. ಅವರ ‘ಎಕ್ಕ’ ಚಿತ್ರಕ್ಕಾಗಿ ಕಾಯುತ್ತಿದ್ದೇನೆ.
ಚಿತ್ರರಂಗದಲ್ಲಿ ನಿಮ್ಮ ಕನಸುಗಳೇನು?
ನಟಿಯಾಗಿ ಗುರುತಿಸಿಕೊಳ್ಳಬೇಕು. ಮುಂದೆ ಒಂದು ಒಳ್ಳೆಯ ಚಿತ್ರವನ್ನು ನಿರ್ದೇಶಿಸಬೇಕು. ನನ್ನ ನೆಚ್ಚಿನ ಪೇಯಿಂಟಿಂಗ್ ಶಾಲೆ ಅಥವಾ ಫೌಂಡೇಷನ್ ತೆರೆಯಬೇಕು.