ಸುದೀಪ್‌ಗೆ ಸ್ಪರ್ಧೆ ಕೊಡುವಷ್ಟು ದೊಡ್ಡವನಲ್ಲ : ಅರ್ಜುನ್‌ ಜನ್ಯ

Published : Nov 07, 2025, 12:01 PM IST
Arjun Janya

ಸಾರಾಂಶ

ಶಿವರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ನಟನೆ, ರಮೇಶ್‌ ರೆಡ್ಡಿ ನಿರ್ಮಾಣದ ‘45’ ಚಿತ್ರ ಡಿ.25ಕ್ಕೆ ತೆರೆ ಕಾಣಲಿದೆ. ಚಿತ್ರದ ಮೇಕಿಂಗ್‌, ಬಜೆಟ್‌, ತೆಗೆದುಕೊಳ್ಳುತ್ತಿರುವ ಸಮಯ ನೋಡಿ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆ  ಚಿತ್ರದ ನಿರ್ದೇಶಕ ಅರ್ಜುನ್‌ ಜನ್ಯ ಮಾತನಾಡಿದ್ದಾರೆ.

- ಆರ್‌ ಕೇಶವಮೂರ್ತಿ

- ಈಗ ಸಿನಿಮಾ ಯಾವ ಹಂತದಲ್ಲಿದೆ?

ಸಂಪೂರ್ಣವಾಗಿ ಕೆಲಸಗಳು ಮುಗಿದಿವೆ. ನಾವು ಅಂದುಕೊಂಡಂತೆ ಡಿ.25ಕ್ಕೆ ಚಿತ್ರವನ್ನು ಥಿಯೇಟರ್‌ಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಿದ್ದೇವೆ.

ಅಪ್ರೋ ಟಪಾಂಗ್‌ ಬಿಡುಗಡೆ ನಂತರದ ನಿರೀಕ್ಷೆಗಳೇನು?

ಹಾಡು ಬಿಡುಗಡೆ ಆದ ಮೇಲೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಸಿಗುತ್ತದೆ. ಹಾಡಿನ ಮೇಕಿಂಗ್‌, ಮೂವರು ಹೀರೋಗಳ ಕಾಸ್ಟ್ಯೂಮ್‌, ಡ್ಯಾನ್ಸ್‌ ಸ್ಟೆಪ್ಸ್‌ ಬಗ್ಗೆ ಜನ ಮಾತನಾಡುತ್ತಿದ್ದಾರೆ.

ಆದರೂ ಸಿನಿಮಾ, ನಿಮ್ಮ ಬಗ್ಗೆ ಗುಮಾನಿ ಪ್ರಶ್ನೆಗಳು ಕೇಳುತ್ತಲೇ ಇವೆಯಲ್ಲ?

ಸಂಗೀತ ನಿರ್ದೇಶಕ ಇವನು, ಏನು ನಿರ್ದೇಶನ ಮಾಡಿರುತ್ತಾನೆ, ಯಾಕೆ ಇಷ್ಟು ತಡವಾಗಿದೆ ಅಂತೆಲ್ಲ ಮಾತು ಕೇಳಿ ಬರುತ್ತಿದೆ. ಅದಕ್ಕೆಲ್ಲ ನಾನು ಉತ್ತರಿಸೋದಿಲ್ಲ. ಮನರಂಜನೆಗೆ ಕೊರತೆ ಇಲ್ಲದಂತೆ ಸಿನಿಮಾವನ್ನು ತೆರೆಗೆ ತರುವತ್ತ ಗಮನ ಕೊಡುತ್ತೇನೆ.

ಅಂದುಕೊಂಡದ್ದಕ್ಕಿಂತ ಖರ್ಚು ಮಾಡಿಸಿದ್ದೀರಿ ಅನ್ನೋ ಮಾತಿದೆಯಲ್ಲ?

ನಿರ್ಮಾಪಕ ರಮೇಶ್‌ ರೆಡ್ಡಿ ಅವರು ಹೊಸಬರಲ್ಲ. ಈಗಾಗಲೇ ಸಿನಿಮಾ ಮಾಡಿ ಗೆದ್ದಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಉದ್ಯಮಿ ಕೂಡ. ಎಲ್ಲಿ, ಎಷ್ಟು ದುಡ್ಡು ಹಾಕಬೇಕು ಅನ್ನೋದು ಅವರಿಗೆ ಗೊತ್ತಿದೆ. ಅಂಥವರನ್ನು ದುರ್ಬಳಕೆ ಮಾಡಲು ಹೇಗೆ ಸಾಧ್ಯ. ಅದು ನನಗೆ ತಿಳಿದೂ ಇಲ್ಲ. ಈ ಚಿತ್ರಕ್ಕೆ ದುಡ್ಡು ಹಾಕಿದ ನಿರ್ಮಾಪಕ, ಅವರು ಕೊಟ್ಟ ಬಜೆಟ್‌ಗೆ ಕೆಲಸ ಮಾಡಿದ ನಾನು ಇಬ್ಬರೂ ಚೆನ್ನಾಗೇ ಇದ್ದೇವೆ ಎಂದ ಮೇಲೆ ಹೊರಗಿನವರ ಮಾತುಗಳಿಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು!

ಆದರೂ ಒಂದು ಸಿನಿಮಾಕ್ಕೆ ಅಷ್ಟು ಬಜೆಟ್‌ ಅಗತ್ಯನಾ?

ಎಷ್ಟು ಬಜೆಟ್‌ ಆಗಿದೆ ಅಂತ ನಿಮಗೆ ಗೊತ್ತಿಲ್ಲ. ಆದರೂ ಬಜೆಟ್‌ ಬಗ್ಗೆ ಹೇಳೋದಾದರೆ ಒಂದು ಸಿನಿಮಾ ಏನು ಕೇಳುತ್ತದೋ ಅದನ್ನು ಆ ಚಿತ್ರಕ್ಕೆ ಕೊಟ್ಟರೆ ಅದು ವಾಪಸ್ಸು ನಮಗೇ ಕೊಡುತ್ತದೆ. ಈ ನಂಬಿಕೆ ಮೇಲೆಯೇ ಚಿತ್ರಕ್ಕೆ ಅಗತ್ಯ ಇರುವಷ್ಟು ವೆಚ್ಚ ಮಾಡಿದ್ದೇವೆ.

ಅದ್ದೂರಿ ಮೇಕಿಂಗ್‌, ಮಲ್ಟಿಸ್ಟಾರ್‌ಗಳು ಇದ್ದರೆ ಪ್ಯಾನ್‌ ಇಂಡಿಯಾ ಆಗುತ್ತಾ?

ಚಿತ್ರವನ್ನು ಇಡೀ ದೇಶ ಮೆಚ್ಚಿಕೊಂಡಾಗಲೇ ಅದು ಪ್ಯಾನ್ ಇಂಡಿಯಾ ಅನಿಸಿಕೊಳ್ಳುತ್ತದೆ. ‘ಕಾಂತಾರ’, ‘ಕೆಜಿಎಫ್‌’ ಚಿತ್ರಗಳು ಪ್ಯಾನ್‌ ಇಂಡಿಯಾ ಆಗಿದ್ದೂ ಹೀಗೆಯೇ. ನಮ್ಮ ಚಿತ್ರದ ಕತೆ ಯೂನಿವರ್ಸಲ್‌. ಕತೆಯಲ್ಲಿ ಧಮ್‌ ಇದೆ. ದೇಶ ಮೆಚ್ಚಿಕೊಳ್ಳುತ್ತದೆಂಬ ನಂಬಿಕೆ ಇದೆ.

ರಿಯಾಲಿಟಿ ಶೋಗಳ ನಡುವೆ ಸಿನಿಮಾ ನಿರ್ದೇಶನ ಮಾಡಿದ್ದು ತಡವಾಗಲು ಕಾರಣನಾ?

ನಾನು ಹೋಗುತ್ತಿದ್ದ ರಿಯಾಲಿಟಿ ಶೋ, ಕಾರ್ಯಕ್ರಮಗಳಿಂದ ಒಂದೇ ಒಂದು ಗಂಟೆಯೂ ಚಿತ್ರಕ್ಕೆ ತಡೆ ಆಗಿಲ್ಲ. ಯಾಕೆಂದರೆ ನಾನು ಮಾಡಿಕೊಂಡ ಪ್ಲಾನ್‌ ಆ ರೀತಿ ಇತ್ತು. ಚಿತ್ರ ತಡವಾಗಿದ್ದು ವಿಎಫ್‌ಎಕ್ಸ್‌ ಕೆಲಸದ ಕಾರಣಕ್ಕೆ. ಒಂದು ವರ್ಷ ಎಂಟು ತಿಂಗಳು ವಿಎಫ್‌ಎಕ್ಸ್‌ಗೆ ಸಮಯ ಹೋಗಿದೆ.

ಸಂಗೀತದಲ್ಲೇ ಬ್ಯುಸಿ ಇದ್ದವರು, ನಿರ್ದೇಶನ ಯಾಕೆ ಬೇಕಿತ್ತು?

ನಾನು ಈ ಚಿತ್ರಕ್ಕೆ ನಿರ್ದೇಶಕ ಆಗಬೇಕು ಅಂದುಕೊಂಡಿರಲಿಲ್ಲ. ಒಮ್ಮೆ ಶಿವಣ್ಣ ಬಳಿ ಹೋಗಿ, ನನ್ನ ಹತ್ತಿರ ಒಂದು ಕತೆ. ನಿಮಗೆ ಕೊಡುತ್ತೇನೆ. ಸಿನಿಮಾ ಮಾಡಿ. ನನಗೆ ಸ್ಟೋರಿ ರೈಟರ್‌ ಅಂತ ಹೆಸರು ಕೊಟ್ಟರೆ ಸಾಕು ಎಂದ ಕತೆ ಹೇಳಿದ್ದೆ. ಅವರು ಕತೆ ಹೇಳಿ, ಇಷ್ಟು ಒಳ್ಳೆಯ ಕತೆಯನ್ನು ಬೇರೆಯವರಿಗೆ ಯಾಕೆ ಕೊಡುತ್ತೀಯಾ, ನೀನೇ ನಿರ್ದೇಶನ ಮಾಡು ಅಂದರು. ಹಾಗೆ ನಾನು ನಿರ್ದೇಶಕನಾಗಿದ್ದು.

ಚಿತ್ರ ಬಿಡುಗಡೆ ವಿಚಾರದಲ್ಲಿ ನೀವು ಸುದೀಪ್‌ ಅವರಿಗೆ ಸ್ಪರ್ಧಿಯಾಗಿದ್ದೀರಲ್ಲ?

ನಾನು ಸುದೀಪ್‌ ಜೊತೆಗೆ ಕೆಲಸ ಮಾಡಿದ್ದೇನೆ. ಅವರಿಂದ ಕಲಿತಿದ್ದೇನೆ. ಅವರಿಗೆ ಸ್ಪರ್ಧೆ ಕೊಡುವಷ್ಟು ದೊಡ್ಡವನಲ್ಲ. ‘ಎರಡು ಸಿನಿಮಾ ಒಟ್ಟಿಗೆ ಬರಲಿ. ರಜೆಯ ಸಮಯ. ಎಲ್ಲರಿಗೂ ಬಿಡುಗಡೆ ಮಾಡುವ ಆಸೆ ಇರುತ್ತದೆ. ಒಟ್ಟಿಗೆ ಬರೋಣ. ಎರಡೂ ಚಿತ್ರಗಳನ್ನು ಜನ ನೋಡುತ್ತಾರೆ. ನಾನು ನಿಮ್ಮ ಸಿನಿಮಾ ನೋಡುತ್ತೇನೆ. ನೀವು ನನ್ನ ಸಿನಿಮಾ ನೋಡಿ’ ಎಂದು ನನಗೆ ಸುದೀಪ್‌ ಅವರೇ ಹೇಳಿದ ಮೇಲೆ ಇಲ್ಲಿ ಸ್ಪರ್ಧೆ ಎಲ್ಲಿದೆ!

ನಿರ್ದೇಶಕರಾಗಿ ಈ ಸಿನಿಮಾ ಮೇಲಿನ ನಿಮ್ಮ ನಿರೀಕ್ಷೆಗಳೇನು?

ಈ ಸಿನಿಮಾ ಬಿಡುಗಡೆ ಆದ ಮೇಲೆ ನಿರ್ಮಾಪಕರ ಮುಖದಲ್ಲಿ ನಗು ನೋಡಬೇಕು. ನನ್ನ ಪ್ರತಿ ಹಂತದಲ್ಲೂ ಸಪೋರ್ಟ್‌ ಮಾಡಿಕೊಂಡು ಬರುತ್ತಿರುವ ಶಿವಣ್ಣ, ಗೀತಾ ಶಿವರಾಜ್‌ ಕುಮಾರ್‌ ಅವರು ಖುಷಿಯಾಗಿರಬೇಕು.

PREV
Read more Articles on

Recommended Stories

ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಮದುವೆ
ರಾಜಕೀಯದ ಆಕರ್ಷಣೆಯಿಂದ ಸಿನಿಮಾಕ್ಕೆ ಬಂದೆ, ಈಗ ಇದೇ ಜಗತ್ತಾಗಿದೆ : ರವಿ ಗೌಡ