ಜಲಂಧರ ಸಿನಿಮಾ : ಕುತೂಹಲ ಮೂಡಿಸುವಂತಿದೆ ಕಾವೇರಿ ತೀರದ ಮಧುವತ್ತಿ ಊರಿನ ಕಂಡರಿಯದ ಕಥೆ

KannadaprabhaNewsNetwork | Updated : Nov 30 2024, 05:10 AM IST

ಸಾರಾಂಶ

ಕಾವೇರಿ ತಟದ ಮಧುವತ್ತಿ ಊರಿನ ಕಥೆ ಕುತೂಹಲ ಮೂಡಿಸುವಂತಿದೆ. ಜಲಂಧರ ಸಿನಿಮಾದ ವಿಮರ್ಶೆ.

ಜಲಂಧರ

ತಾರಾಗಣ: ಪ್ರಮೋದ್‌ ಶೆಟ್ಟಿ, ಸ್ಟೆಪ್‌ ಅಪ್‌ ಲೋಕಿ, ಆರೋಹಿತಾ ಗೌಡ, ರುಷಿಕಾ ರಾಜ್‌

ನಿರ್ದೇಶನ: ವಿಷ್ಣು ಪ್ರಸನ್ನ

ರೇಟಿಂಗ್ : 3

ಪ್ರಿಯಾ ಕೆರ್ವಾಶೆ

ನಯನ ಮನೋಹರ ಪ್ರಕೃತಿ, ಸದಾ ಮಂದಗಮನೆಯಾಗಿ ಹರಿಯುವ ಕಾವೇರಿ ನದಿ, ಮಧುವತ್ತಿ ಎಂಬ ಹೆಸರಿನಷ್ಟೇ ಸುಂದರವಾಗಿರುವ ಊರು.

ಇಲ್ಲಿ ಹರಿಯುವ ಕಾವೇರಿಯ ಒಡಲಲ್ಲಿ ಜೀವ ತೆಗೆಯುವ ಸುಳಿಗಳಿವೆ. ಅದರಲ್ಲಿ ಸಿಲುಕಿದರೆ ಮೇಲಕ್ಕೆ ಬರುವುದು ಹೆಣವಾಗಿಯೇ. ಹೀಗಾಗಿ ಈ ನದಿ ದಂಡೆಯಲ್ಲಿ ಹೆಣ ಎತ್ತುವವರು ಸದಾ ಕ್ರಿಯಾಶೀಲರಾಗಿರುತ್ತಾರೆ. ತಲೆ ತಲಾಂತರಗಳಿಂದ ಹೆಣ ಎತ್ತಿಯೇ ಬದುಕು ಕಂಡುಕೊಂಡಿದ್ದಾರೆ. ಕುಡಿತ, ಜೂಜು, ಗುಂಪುಗಾರಿಕೆ, ವಾಮಾಚಾರಗಳಲ್ಲಿ ಬದುಕು ರಂಗೇರುತ್ತದೆ. ಹೆಣ ಎತ್ತುವ ಎರಡು ಗುಂಪುಗಳ ನಡುವೆ ಸದಾ ಮಾರಾಮಾರಿ. ಒಳ್ಳೆಯವರೆಂದು ಗುರುತಿಸಿಕೊಂಡವರನ್ನು ಪ್ರೇಕ್ಷಕರ ಕಣ್ಣಲ್ಲಿ ಮತ್ತಷ್ಟು ಒಳ್ಳೆಯವರಾಗಿಸಲು ನಿರ್ದೇಶಕರು ಹೆಣಗುತ್ತಾರೆ.

ಒಂದು ಹಂತದಲ್ಲಿ ಈ ನದಿಗೆ ಬಿದ್ದು ಸಾಯುವ ಹೋರಾಟಗಾರ್ತಿಯೊಬ್ಬಳ ಸಾವಿನ ತನಿಖೆ ಮೂಲಕ ಇನ್ಸ್‌ಪೆಕ್ಟರ್‌ ಕಂಡು ಹಿಡಿಯುವ ಭಯಾನಕ ಸತ್ಯವೇ ಕಥೆಯ ಅಂತರಾರ್ಥ.

ಸಾಮಾನ್ಯರ ಊಹೆಗೂ ನಿಲುಕದ ಸ್ಟೋರಿಲೈನ್‌. ಆದರೆ ಇದನ್ನು ನಿರೂಪಿಸುವಾಗ ಇನ್ನಷ್ಟು ಧ್ಯಾನ ಬೇಕಿತ್ತು. ಕ್ಲೈಮ್ಯಾಕ್ಸ್‌ ಯಾವ ಕಾರಣಕ್ಕೂ ವೀಕ್ಷಕರು ಊಹಿಸುವಂತಿರಬಾರದು ಅನ್ನೋ ಯೋಚನೆಯಲ್ಲಿ ನಿರ್ದೇಶಕರು ಕಥೆಯ ದಾರಿ ತಪ್ಪಿಸಿದಂತಿದೆ. ಇದು ಕಥೆಯನ್ನು ವಿನಾಕಾರಣ ಎಳೆಯುವಂತೆ ಮಾಡಿದೆ. ಇಂಥಾ ಗಿಮಿಕ್‌, ಅನೇಕ ಅನಗತ್ಯ ವಿಚಾರಗಳಿಂದ ಮುಕ್ತವಾಗಿದ್ದರೆ ಸಿನಿಮಾ ಇನ್ನಷ್ಟು ತೀವ್ರವಾಗುತ್ತಿತ್ತು.

ಕ್ಲೈಮ್ಯಾಕ್ಸ್‌ ಬಗ್ಗೆ ಎರಡು ಮಾತಿಲ್ಲ. ಇಲ್ಲಿ ಬರುವ ಒಂದು ಫೈಟ್‌ ಕೃಷ್ಣನ ಕಾಳಿಂಗ ಮರ್ದನವನ್ನು ನೆನಪಿಸುತ್ತದೆ. ಈ ಸೀನ್‌ಗೆ ಸಿನಿಮಾಟೋಗ್ರಾಫರ್‌ ಸರಿನ್ ರವೀಂದ್ರನ್‌ ಹಾಗೂ ವಿದ್ಯಾಶಂಕರ್‌ ಅವರಿಗೆ ಫುಲ್‌ ಮಾರ್ಕ್ಸ್ ಕೊಡಬಹುದು. ಉಳಿದಂತೆ ನಟನೆ ಚೆನ್ನಾಗಿದೆ. ಮುಖ್ಯಪಾತ್ರ ಮಾಡಿದ ಲೋಕಿ ಅಮಾಯಕತೆ, ಒಳ್ಳೆತನವನ್ನು ಕೊನೆಯವರೆಗೂ ಕ್ಯಾರಿ ಮಾಡಿದ್ದಾರೆ. ಊರಿನ ಭಲೇ ಚಾಲಾಕಿ ಹುಡುಗಿಯಾಗಿ ಆರೋಹಿತ ಚೂಟಿಯಾಗಿ ನಟಿಸಿದ್ದಾರೆ. ಪ್ರಮೋದ್‌ ಶೆಟ್ಟಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

Share this article