ಚಿತ್ರ: ಜಸ್ಟ್ ಮ್ಯಾರೀಡ್
ತಾರಾಗಣ: ಶೈನ್ ಶೆಟ್ಟಿ, ಅಂಕಿತಾ ಅಮರ್, ದೇವರಾಜ್, ಅನೂಪ್ ಭಂಡಾರಿ
ನಿರ್ದೇಶನ: ಸಿ ಆರ್ ಬಾಬಿ
ರೇಟಿಂಗ್ : 3
ಪ್ರಿಯಾ ಕೆರ್ವಾಶೆ
ಜಸ್ಟ್ ಮ್ಯಾರೀಡ್ ಅಂದಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ನವದಂಪತಿಗಳ ಸರಸ, ವಿರಸ, ಅಡ್ಡಿ, ಆತಂಕ ಇತ್ಯಾದಿ. ಆದರೆ ಈ ಸಿನಿಮಾ ಆಗಷ್ಟೇ ಮದುವೆಯಾದ ಜೆನ್ ಜೀ ದಂಪತಿಯ ಪ್ರೇಮದ ವಿವಿಧ ಅವಸ್ಥಾಂತರಗಳನ್ನು ಬಿಚ್ಚಿಡುತ್ತ ಹೋಗುತ್ತದೆ. ವೈವಾಹಿಕ ಬದುಕಿನ ಅಪಾಯಗಳನ್ನು ಕಾಣಿಸಿ ಸುಗಮ ಬದುಕಿನತ್ತ ದಂಪತಿಯನ್ನು ಕೈ ಹಿಡಿದು ಮುನ್ನಡೆಸುವಂತೆ ಕಥೆ ಇದೆ.
ನಾಯಕ ಸೂರ್ಯ (ಶೈನ್ ಶೆಟ್ಟಿ) 250 ವರ್ಷಗಳ ಪರಂಪರೆ ಹೊಂದಿರುವ ಕುಟುಂಬದ ಕುಡಿ. ಹುಡುಗಾಟಿಕೆಯ ಹುಡುಗನಾದರೂ ತನ್ನ ಕುಟುಂಬದ ಘನತೆಯ ಪ್ರಶ್ನೆ ಬಂದಾಗ ಅದಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವಷ್ಟು ಒಳ್ಳೆಯವ. ಆತನ ಈ ವೀಕ್‌ನೆಸ್ ಅನ್ನು ಪತ್ತೆ ಮಾಡುವ ತರಲೆ ಹುಡುಗಿಯೊಬ್ಬಳು ಅದನ್ನೇ ಬಳಸಿಕೊಂಡು ಆತನ ಬದುಕಿಗೆ ಬರುತ್ತಾಳೆ. ಈ ದಂಪತಿಯ ಬದುಕಿನ ಏರು ತಗ್ಗಿನ ಹಾದಿಯ ಜೊತೆ ಜೊತೆಗೇ ಆ ಕುಟುಂಬದ ತಲೆಮಾರುಗಳ ಕತೆಯೂ ಸಾಗಿ ಬರುತ್ತದೆ. ಕೊನೆಗೂ ಹುಡುಗನಿಗೆ ಕುಟುಂಬದ ಘನತೆ ಕಾಯುವುದಕ್ಕಾಯ್ತಾ ಅನ್ನೋದು ಒನ್‌ಲೈನ್.
ನಿರ್ದೇಶಕಿ ಈ ಸಿನಿಮಾವನ್ನು ಬದುಕಿನಂತೆ ಚಿತ್ರಿಸುತ್ತ ಹೋಗಿದ್ದಾರೆ, ಬದುಕಿನಲ್ಲಿ ಅನಿರೀಕ್ಷಿತಗಳಿಗೆ, ಕೆಲವು ಸಂಗತಿಗಳಿಗೆ ಹೇಗೆ ಲಾಜಿಕ್ ಇರುವುದಿಲ್ಲವೋ ಹಾಗೆ ಇಲ್ಲಿ ಲಿಂಕ್ ಸಿಗದ ಕೆಲವು ವಿಚಾರಗಳಿವೆ. ಉದಾ: ಸೂರ್ಯನ ಮಾನಸಿಕ ಸಮಸ್ಯೆ. ಮೊದಲ ಭಾಗದಲ್ಲಿ ಅದನ್ನು ಗಾಢವಾಗಿ ತೋರಿಸಿ ಎರಡನೇ ಭಾಗಕ್ಕೆ ಬರುವಾಗ ಸೊಲ್ಲೆತ್ತುವುದಿಲ್ಲ. ಅದ್ಯಾಕೆ ಬಂತು ಅನ್ನೋದು ಪ್ರೇಕ್ಷಕನಿಗೆ ಕೊನೆಗೂ ತಿಳಿಯುವುದಿಲ್ಲ. ಅಜನೀಶರ ಹಾಡುಗಳು, ಹಿನ್ನೆಲೆ ಸಂಗೀತ ಮುದ ನೀಡುತ್ತದೆ.
ನಿರ್ದೇಶಕಿ ಯಾವುದನ್ನೂ ಅತಿ ಮಾಡಿಲ್ಲ, ಕೊನೆಯಲ್ಲಿ ಬದುಕಿನ ಫಿಲಾಸಫಿ ಗಾಢವಾಗಿದೆ. ಭವಿಷ್ಯದಲ್ಲಿ ಬಾಬಿ ಅವರಿಂದ ಒಳ್ಳೊಳ್ಳೆಯ ಸಿನಿಮಾಗಳನ್ನು ನಿರೀಕ್ಷಿಸುವಂಥಾ ಭರವಸೆ ಈ ಸಿನಿಮಾದಲ್ಲಿ ಸಿಕ್ಕಿದೆ.