ಬಿಗ್‌ ಬಾಸ್‌ ಶೋ ಶೂಟಿಂಗ್‌ಗಾಗಿ ಬೀಗ ತೆರವುಗೊಳಿಸಿದ ಡಿಕೆ ಬಾಸ್‌!

KannadaprabhaNewsNetwork |  
Published : Oct 10, 2025, 01:00 AM ISTUpdated : Oct 10, 2025, 05:51 AM IST
9ಕೆಆರ್ ಎಂಎನ್ 1.ಜೆಪಿಜಿಕಂದಾಯ ಇಲಾಖೆ ಅಧಿಕಾರಿಗಳು ಜಾಲಿವುಡ್ ಸ್ಟುಡಿಯೋಸ್ ನ ಬೀಗಮುದ್ರೆ ತೆಗೆಯುತ್ತಿರುವುದು. | Kannada Prabha

ಸಾರಾಂಶ

ಚಿತ್ರ ನಟ ಸುದೀಪ್ ಅ‍ವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ‘ಬಿಗ್ ಬಾಸ್’ ರಿಯಾಲಿಟಿ ಶೋ ಕುರಿತು ಚರ್ಚೆ ನಡೆಸಿದ ಬೆನ್ನಲ್ಲೇ ಆ ಶೋದ ಶೂಟಿಂಗ್‌ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ನ ಒಂದು ಮುಖ್ಯದ್ವಾರದ ಬೀಗ ಮುದ್ರೆಯನ್ನು ಗುರುವಾರ ನಸುಕಿನ ಜಾವ 2.45ಕ್ಕೆ ತೆರೆಯಲಾಗಿದೆ 

  ರಾಮನಗರ :  ಚಿತ್ರ ನಟ ಸುದೀಪ್ ಅ‍ವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ‘ಬಿಗ್ ಬಾಸ್’ ರಿಯಾಲಿಟಿ ಶೋ ಕುರಿತು ಚರ್ಚೆ ನಡೆಸಿದ ಬೆನ್ನಲ್ಲೇ ಆ ಶೋದ ಶೂಟಿಂಗ್‌ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ನ ಒಂದು ಮುಖ್ಯದ್ವಾರದ ಬೀಗ ಮುದ್ರೆಯನ್ನು ಗುರುವಾರ ನಸುಕಿನ ಜಾವ 2.45ಕ್ಕೆ ತೆರೆಯಲಾಗಿದೆ. ಕೂಡಲೇ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಬಿಗ್‌ಬಾಸ್‌ ಶೋ ಪುನಾರಂಭಕ್ಕೆ ಹಾದಿ ಸುಗಮವಾದ ಹಿನ್ನೆಲೆಯಲ್ಲಿ ಸುದೀಪ್‌ ಅವರು ಡಿಕೆಶಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಉಪಮುಖ್ಯಮಂತ್ರಿ ಸೂಚನೆ ಬೆನ್ನಲ್ಲೇ ತಡರಾತ್ರಿ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್‌ನ ಒಂದು ಗೇಟಿನ ಬೀಗ ಮುದ್ರೆ ತೆಗೆದು ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಹಾಗೂ ತಹಸೀಲ್ದಾರ್ ತೇಜಸ್ವಿನಿ ಅವರ ಸಮಕ್ಷಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ನಸುಕಿನ ಜಾವ 2.45ರ ಸಮಯದಲ್ಲಿ ಸ್ಥಳಕ್ಕಾಗಮಿಸಿ ಜಾಲಿವುಡ್ ಸ್ಟುಡಿಯೋಸ್‌ನ ಒಂದು ಗೇಟಿನ ಸೀಲನ್ನು ತೆರೆದರು.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ಜಾಲಿವುಡ್ ಸ್ಟುಡಿಯೋಸ್‌ನ ಒಂದು ಗೇಟ್‌ಗೆ ಹಾಕಿದ್ದ ಸೀಲನ್ನು ತೆರೆದಿದ್ದೇವೆ. ಜಾಲಿವುಡ್‌ ಸಂಪೂರ್ಣ ಕಾರ್ಯಾಚರಣೆ ನಡೆಸಲು ಅವಕಾಶ ನೀಡಿಲ್ಲ. ಕೇವಲ ಬಿಗ್ ಬಾಸ್ ಶೋ ಸ್ಪರ್ಧಿಗಳು, ಸಿಬ್ಬಂದಿ ಓಡಾಟ ಹಾಗೂ ಅಗತ್ಯ ವಸ್ತುಗಳ ಬಳಕೆಗೆ ಅವಕಾಶ ಕೊಡಲಾಗಿದೆ ಎಂದು ಹೇಳಿದರು.

ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ವಾಪಸ್:

ಕಳೆದ ಎರಡು ದಿನಗಳಿಂದ ಜಾಲಿವುಡ್ ಸ್ಟುಡಿಯೋವನ್ನು ಸೀಜ್ ಮಾಡಲಾಗಿತ್ತು. ಹೀಗಾಗಿ ಬಿಗ್‌ಬಾಸ್ ಶೂಟಿಂಗ್ ಸ್ಥಗಿತಗೊಂಡಿತ್ತು. ಸ್ಪರ್ಧಿಗಳನ್ನು ಬಿಡದಿ ಸಮೀಪದ ಈಗಲ್ ಟನ್ ರೆಸಾರ್ಟ್‌ಗೆ ಸ್ಥಳಾಂತರ ಮಾಡಲಾಗಿತ್ತು. 24 ಗಂಟೆ ರೆಸಾರ್ಟ್‌ನಲ್ಲಿಯೇ ಸ್ಪರ್ಧಿಗಳು ವಾಸ್ತವ್ಯ ಹೂಡಿದ್ದರು. ರೆಸಾರ್ಟ್‌ನಲ್ಲೂ ಬಿಗ್ ಬಾಸ್ ಪ್ರೋಟೋಕಾಲನ್ನು ಸ್ಪರ್ಧಿಗಳು ಕಟ್ಟುನಿಟ್ಟಾಗಿ ಅನುಸರಿಸಿದರು. 24 ಗಂಟೆ ಬಳಿಕ ರೆಸಾರ್ಟ್‌ನಿಂದ ಸ್ಪರ್ಧಿಗಳು ಹೊರಬಂದಿದ್ದಾರೆ. ಎರಡು ದಿನಗಳಿಂದ ಖಾಲಿಯಾಗಿದ್ದ ಬಿಗ್ ಬಾಸ್ ಮನೆಗೆ 17 ಸ್ಪರ್ಧಿಗಳು ವಾಪಸ್ಸಾಗಿದ್ದಾರೆ.

ಬಿಗ್‌ಬಾಸ್‌ ಪ್ರೋಮೋ ಬಿಡುಗಡೆ:

ಇದೀಗ ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್ 12ನೇ ಆವೃತ್ತಿ ಎಂದಿನಂತೆ ಮತ್ತೆ ಶುರುವಾಗಿದೆ. ಕಲರ್ಸ್‌ ಕನ್ನಡ ವಾಹಿನಿ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ 

ಡಿಕೆಶಿಗೆ ಕಿಚ್ಚ ಸುದೀಪ್ ಧನ್ಯವಾದ

ರಾಮನಗರ: ನಟ ಸುದೀಪ್ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಬಿಗ್‌ಬಾಸ್ ಸಮಸ್ಯೆಗೆ ಅಂತ್ಯ ಹಾಡಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಬಿಗ್‌ಬಾಸ್ ಸಮಸ್ಯೆ ಬಗ್ಗೆ ಮಾತುಕತೆ ನಡೆಸಿದ ಬಳಿಕ ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಸಮಸ್ಯೆ ಬಗೆಹರಿಸಿದ್ದಕ್ಕೆ ಡಿ.ಕೆ.ಶಿವಕುಮಾರ್‌ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಸರಿಯಾದ ಸಮಯಕ್ಕೆ ಬೆಂಬಲ ನೀಡಿದ್ದಕ್ಕಾಗಿ ‘ಸರಿಯಾದ ಸಮಯಕ್ಕೆ ಬೆಂಬಲ ನೀಡಿದ್ದಕ್ಕಾಗಿ ನಾನು ಗೌರವಾನ್ವಿತ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಹೇಳುತ್ತೇನೆ. ಹಾಗೇ ಇತ್ತೀಚೆಗೆ ನಡೆದ ಅವಾಂತರದಲ್ಲಿ ಬಿಗ್ ಬಾಸ್ ಕನ್ನಡ ಭಾಗಿಯಾಗಿಲ್ಲ ಹಾಗೂ ಅದರ ಭಾಗವಾಗಿಲ್ಲ ಎಂದು ತಿಳಿಸಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೂ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಹೇಳಿದ್ದಾರೆ. ನಲಪಾಡ್ ಅವರ ಪ್ರಯತ್ನಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಬಿಗ್‌ಬಾಸ್ ಕನ್ನಡ 12 ಮುಂದುವರಿಯುತ್ತೆ ಎಂದು ಸುದೀಪ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಡಿ.ಕೆ.ಶಿ ಪೋಸ್ಟ್‌:

ಕಿಚ್ಚ ಸುದೀಪ್ ಪೋಸ್ಟ್‌ಗೂ ಮುನ್ನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಗ್ ಬಾಸ್ ಸಮಸ್ಯೆಗೆ ಸ್ಪಂದಿಸಿ, ಬಗೆ ಹರಿಸಿದ್ದಾಗಿ ಪೋಸ್ಟ್ ಮಾಡಿದ್ದರು. ‘ಬಿಡದಿಯ ಜಾಲಿವುಡ್‌ನಲ್ಲಿ ಬಿಗ್ ಬಾಸ್ ಕನ್ನಡ ಶೂಟಿಂಗ್ ಜಾಗದ ಸೀಲನ್ನು ತೆಗೆದು ಹಾಕಲು ಬೆಂಗಳೂರು ದಕ್ಷಿಣದ ಜಿಲ್ಲಾಧಿಕಾರಿಗೆ ನಾನು ನಿರ್ದೇಶನ ನೀಡಿದ್ದೇನೆ. ಆದರೆ, ಪರಿಸರ ನಿಯಮಗಳನ್ನು ಪಾಲಿಸುವುದು ಪ್ರಮುಖ ಆದ್ಯತೆಯಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಯಾಗಿದ್ದನ್ನು ಪರಿಹರಿಸಲು ಜಾಲಿವುಡ್ ಸ್ಟುಡಿಯೋಗೆ ಸಮಯಾವಕಾಶ ನೀಡಲಾಗುತ್ತದೆ. ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಎತ್ತಿ ಹಿಡಿಯುತ್ತಾ ನಾನು ಕನ್ನಡ ಚಲಚಿತ್ರರಂಗಕ್ಕೆ ಬೆಂಬಲ ನೀಡುವುದಕ್ಕೆ ಬದ್ಧನಾಗಿದ್ದೇನೆ’ ಎಂದು ಪೋಸ್ಟ್ ಮಾಡಿದ್ದಾರೆ. 

ನೆರವಿಗೆ ನಿಂತ ಡಿಕೆಶಿ,

ನಲಪಾದ್‌ಗೆ ಥ್ಯಾಂಕ್ಸ್‌

ನನ್ನ ಕರೆಗೆ ಸ್ಪಂದಿಸಿ, ಸಕಾಲಕ್ಕೆ ಬೆಂಬಲ ನೀಡಿದ್ದಕ್ಕಾಗಿ ಡಿಕೆಶಿ ಅವರಿಗೆ ಕೃತಜ್ಞತೆಗಳು. ನಲಪಾದ್‌ ಅವರಿಗೂ ಧನ್ಯವಾದಗಳು.- ಸುದೀಪ್‌, ನಟ

ತಪ್ಪು ಸರಿಪಡಿಸಿಕೊಳ್ಳಲಿ,ಉದ್ಯೋಗಗಳೂ ಮುಖ್ಯತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್‌ ಸ್ಟುಡಿಯೋಗೆ ಸಮಯಾವಕಾಶ ನೀಡಲಾಗಿದೆ. ಖಾಸಗಿಯವರು ಹೂಡಿಕೆ ಮಾಡಿರುತ್ತಾರೆ. ಉದ್ಯೋಗ ಮುಖ್ಯ.- ಡಿ.ಕೆ. ಶಿವಕುಮಾರ್‌, ಡಿಸಿಎಂ

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌