ಕ್ಯಾಮೆರಾ ಮುಂದೆ ನಿಂತರೆ ಪಾತ್ರವೇ ಆಗುತ್ತಾರೆ ಧನಂಜಯ್: ಮೋಕ್ಷಾ ಕುಶಾಲ್‌

KannadaprabhaNewsNetwork | Published : Jun 12, 2024 12:36 AM

ಸಾರಾಂಶ

ಕೋಟಿ ಸಿನಿಮಾ ನಾಯಕ ನಟಿ ಮೋಕ್ಷಾ ಕುಶಾಲ್‌ ಸಂದರ್ಶನ

- ಪ್ರಿಯಾ ಕೆರ್ವಾಶೆ

- ನಾಡಿದ್ದು ಸಿನಿಮಾ ರಿಲೀಸು. ನಿಮ್ಮ ಈ ಕ್ಷಣದ ಖುಷಿ, ಆತಂಕ, ಭಯ?

ಈ ಎಲ್ಲಾ ಭಾವಗಳೂ ಜಿಂಗಾಲಾಲ ಆಡ್ತಾನೆ ಇವೆ. ಇವೆಲ್ಲವನ್ನೂ ಮೀರಿ ಒಂದೊಳ್ಳೆ ಸಿನಿಮಾದಲ್ಲಿ ನಟಿಸಿದ ತೃಪ್ತಿ ಇದೆ. - ನವಮಿ ಪಾತ್ರದ ಜೊತೆ ಜರ್ನಿ ಹೇಗಿತ್ತು?

ನವಮಿಯ ತುಂಟಾಟ, ತರಲೆ, ಕಳ್ಳಿ ಕಳ್ಳಿ ಸ್ವಭಾವ ಎಲ್ಲ ಸಖತ್ತಾಗಿತ್ತು. ಆ ಪಾತ್ರದ ಗುಣಗಳನ್ನು ಎನ್‌ಜಾಯ್‌ ಮಾಡುತ್ತಾ, ಸ್ವಭಾವವನ್ನು ಸೂಕ್ಷ್ಮವಾಗಿ ನನ್ನೊಳಗೆ ತಂದುಕೊಂಡು ಅಭಿನಯಿಸಿದೆ. ಆಕೆಯಲ್ಲಿರುವ ಸುಳ್ಳಿ, ಕಳ್ಳಿ, ತರಲೆ, ತುಂಟಿ ನನ್ನೊಳಗೂ ಇರುವ ಕಾರಣ ಈ ಪಾತ್ರದ ನಟನೆ ಮಸ್ತಾಗಿತ್ತು. ವಿಶೇಷ ಅಂದರೆ ಆಕೆಯ ಪ್ರತೀ ಸ್ವಭಾವಕ್ಕೂ ಕಥೆಗೂ ಲಿಂಕ್‌ ಇದೆ. - ನಿರ್ದೇಶಕ ಪರಮ್‌ ಪಾತ್ರದ ಬಗೆಗಿನ ನರೇಶನ್‌ ಹೇಗಿತ್ತು?

ಅದ್ಭುತ. ಆ ಪಾತ್ರ ಕಣ್ಣೆದುರೇ ನಡೆದಾಡಿದಂಥಾ ಫೀಲ್‌ ಬಂತು. ಸಿನಿಮಾ ಬಗ್ಗೆ ಇದ್ದ ಅನುಮಾನಗಳೂ ಹಿಂದಕ್ಕೆ ಸರಿದು, ಇದು ನನ್ನನ್ನು ಮುಂದೆ ತಗೆದುಕೊಂಡು ಹೋಗುವ ಪಾತ್ರ ಅನ್ನುವ ಧೈರ್ಯ ಬಂತು.

- ಧನಂಜಯ ಅವರಂಥಾ ಪ್ರಬುದ್ಧ ನಟನಿಂದ ಕಲಿಯೋವಂಥಾದ್ದು ಏನಾದ್ರೂ ಕಂಡಿರಾ?

ಶೂಟಿಂಗ್‌ಗೂ ಮೊದಲು ರಿಹರ್ಸಲ್‌ ಇತ್ತು. ಇದಕ್ಕೆ ಧನಂಜಯ ಅವರೂ ಬಂದರು. ನನಗೆ ಆಶ್ಚರ್ಯ ಆಯ್ತು. ಬ್ಯುಸಿ ಇರುವ ಈ ದೊಡ್ಡ ಹೀರೋ ರಿಹರ್ಸಲ್‌ಗೆ ಯಾಕೆ ಬಂದರು ಅಂತ. ಆದರೆ ನಮ್ಮ ಪಾತ್ರಗಳ ಬಾಂಡಿಂಗ್‌ ಬೆಳೆದದ್ದು ಇಲ್ಲೇ. ಕ್ಯಾಮರಾ ಮುಂದೆ ನಿಂತ ಕೂಡಲೇ ಪಕ್ಕಾ ಪಾತ್ರವೇ ಆಗುವ ಅವರಿಂದ ಕಲಿಯೋದು ಸಾಕಷ್ಟಿದೆ. - ರಶ್ಮಿಕಾ ಮಂದಣ್ಣ ಊರಿಂದ ಬಂದ ಹುಡುಗಿಗೆ ಪ್ಯಾನ್‌ ವರ್ಲ್ಡ್‌ ಸಿನಿಮಾಗಳ ಕನಸಿಲ್ವಾ?

ಕನಸು ಇದ್ದೇ ಇದೆ. ಆದರೆ ನಾನು ಯಾವ ಎತ್ತರಕ್ಕೆ ಏರಿದರೂ ಅದು ಕನ್ನಡ ಹುಡುಗಿ ಏರಿದ ಎತ್ತರವೇ ಆಗುತ್ತೆ. ವರ್ಲ್ಡ್‌ ಲೆವೆಲ್‌ ಸಿನಿಮಾ ಮಾಡಿದರೂ ಕನ್ನಡದ ಹುಡುಗಿಯಾಗಿ ಆ ಸಾಧನೆ ಮಾಡಿದ್ದೇನೆ ಎಂದೇ ಭಾವಿಸುತ್ತೇನೆ. ನನ್ನ ಭಾಷೆ, ನನ್ನ ನೆಲದ ಬಗ್ಗೆ ಗೌರವ, ಪ್ರೀತಿ ಎಂದೂ ಕಡಿಮೆ ಆಗದು. ಸಿನಿಮಾದಾಚೆ ಎಂಥಾ ಹುಡುಗಿ?

ಯಾವ ಟ್ರೋಲ್‌ಗೂ ಹರ್ಟ್‌ ಆಗದ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಬಿಂದಾಸ್‌ ಹುಡುಗಿ ನಾನು. ವಿಚಿತ್ರವಾಗಿ ಆದರೆ ಮನಃಪೂರ್ವಕವಾಗಿ ನಗ್ತೀನಿ. ಸಿಕ್ಕಾಪಟ್ಟೆ ಫ್ರೆಂಡ್ಸ್‌ ಇದ್ದಾರೆ. ತುಂಬ ಮಾತಾಡ್ತೀನಿ.

Share this article