ಬೆಂಗಳೂರು : ಬಿಡುಗಡೆಯಾದ ದಿನವೇ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ‘ಕಾಂತಾರ ಚಾಪ್ಟರ್ 1’ ಎರಡನೇ ದಿನವೇ 100 ಕೋಟಿ ಕ್ಲಬ್ ಸೇರಿದೆ. ಭಾರತದಲ್ಲಿ ಸಿನಿಮಾದ ಅಂದಾಜು ಕಲೆಕ್ಷನ್ 106 ಕೋಟಿ ರು. ಎಂದು ಅಂದಾಜಿಸಲಾಗಿದೆ. ವಿಶ್ವಾದ್ಯಂತದ 115 ಕೋಟಿ ಗಳಿಕೆ ಮಾಡಿರುವ ಸಾಧ್ಯತೆ ಇದೆ. ಇಷ್ಟು ವೇಗವಾಗಿ 100 ಕೋಟಿ ಕ್ಲಬ್ ಸೇರಿದ 2ನೇ ಕನ್ನಡ ಸಿನಿಮಾವಾಗಿ ‘ಕಾಂತಾರ 1’ ಗುರುತಿಸಿಕೊಂಡಿದೆ. ‘ಕೆಜಿಎಫ್ ಚಾಪ್ಟರ್ 2’ ಮೊದಲ ದಿನವೇ ವಿಶ್ವಮಟ್ಟದಲ್ಲಿ 134.5 ಕೋಟಿ ಗಳಿಕೆ ದಾಖಲಿಸಿತ್ತು.
2025ರಲ್ಲಿ ತೆರೆಕಂಡ 2ನೇ ಅತೀಹೆಚ್ಚು ಗಳಿಕೆಯ ಭಾರತೀಯ ಚಿತ್ರವಾಗಿಯೂ ಗುರುತಿಸಿಕೊಂಡಿದೆ. ರಜನಿಕಾಂತ್ ನಟನೆಯ ‘ಕೂಲಿ’ ಮೊದಲ ಸ್ಥಾನದಲ್ಲಿದೆ.
ಕರ್ನಾಟಕದಲ್ಲಿ ಮೊದಲ ದಿನ 32.7 ಕೋಟಿ ರು.ಗಳ ಅತ್ಯುತ್ತಮ ಗಳಿಕೆ ದಾಖಲಿಸಿ ‘ಕೆಜಿಎಫ್ 2’ ದಾಖಲೆಯನ್ನೂ ಹಿಮ್ಮೆಟ್ಟಿಸಿದೆ. ಕನ್ನಡ ಚಿತ್ರರಂಗದಲ್ಲೇ ಈ ಮಟ್ಟಿನ ಕಲೆಕ್ಷನ್ ದಾಖಲಿಸಿದ ಮೊಟ್ಟ ಮೊದಲ ಸಿನಿಮಾವಾಗಿ ಕಾಂತಾರ ಚಾಪ್ಟರ್ 1 ಹೊರಹೊಮ್ಮಿದೆ. ಕರ್ನಾಟಕದಲ್ಲಿ ‘ಕೆಜಿಎಫ್ 2’ ಮೊದಲ ದಿನದ ಕಲೆಕ್ಷನ್ 31 ಕೋಟಿ ರು. ಆಗಿತ್ತು.
ಮೊದಲ ದಿನ ಭರ್ಜರಿ ಓಪನಿಂಗ್ ಕಂಡ ಚಿತ್ರ ಎರಡನೇ ದಿನವೂ ಅತ್ಯುತ್ತಮ ಪ್ರತಿಕ್ರಿಯೆಗೆ ಭಾಜನವಾಯಿತು. ಶುಕ್ರವಾರ ದೇಶದಲ್ಲಿ ಅಂದಾಜು 49 ಕೋಟಿ ರು.ಗಳಷ್ಟು ಗಳಿಕೆ ದಾಖಲಿಸಿ ಮುನ್ನುಗ್ಗಿದೆ. ಶನಿವಾರ, ಭಾನುವಾರ ವೀಕೆಂಡ್ ಆಗಿರುವ ಕಾರಣ ವಾರಾಂತ್ಯದ ಕಲೆಕ್ಷನ್ ಮೇಲೆ ನಿರೀಕ್ಷೆ ಹೆಚ್ಚಿದೆ. ಸಿನಿಮಾಕ್ಕೆ ಬರುತ್ತಿರುವ ಪ್ರತಿಕ್ರಿಯೆ ನೋಡಿದರೆ ಈ ಹಿಂದೆ ಅಂದಾಜಿಸಿದಂತೆ ಚಿತ್ರ 1000 ಕೋಟಿ ರು. ಕ್ಲಬ್ ಸೇರುವುದು ಬಹುತೇಕ ಖಚಿತ ಎಂದು ತಜ್ಞರು ಹೇಳಿದ್ದಾರೆ.