ಸಿನಿಮಾ ಟಿಕೆಟ್‌ಗೆ ₹200 ದರ ಮಿತಿ - ಎಲ್ಲ ಭಾಷೆಗಳ ಸಿನಿಮಾಗಳಿಗೂ ಅನ್ವಯ

Published : Sep 13, 2025, 05:14 AM IST
Film Theater

ಸಾರಾಂಶ

ಎಪ್ಪತ್ತೈದು ಮತ್ತು ಅದಕ್ಕಿಂತ ಕಡಿಮೆ ಆಸನ ಸಾಮರ್ಥ್ಯದ ಮಲ್ಟಿಪ್ಲೆಕ್ಸ್‌ ಚಿತ್ರ ಮಂದಿರಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲ ಚಿತ್ರ ಮಂದಿರಗಳಲ್ಲಿ ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನಕ್ಕೂ ಗರಿಷ್ಠ 200 ರು.ಗಳ ಏಕರೂಪದ ಟಿಕೆಟ್‌ ದರ  ಜಾರಿಗೊಳಿಸಿ ರಾಜ್ಯ ಸರ್ಕಾರ   ಅಧಿಸೂಚನೆ ಹೊರಡಿಸಿದೆ.

  ಬೆಂಗಳೂರು :  ಎಪ್ಪತ್ತೈದು ಮತ್ತು ಅದಕ್ಕಿಂತ ಕಡಿಮೆ ಆಸನ ಸಾಮರ್ಥ್ಯದ ಮಲ್ಟಿಪ್ಲೆಕ್ಸ್‌ ಚಿತ್ರ ಮಂದಿರಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲ ಚಿತ್ರ ಮಂದಿರಗಳಲ್ಲಿ ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನಕ್ಕೂ ಗರಿಷ್ಠ 200 ರು.ಗಳ ಏಕರೂಪದ ಟಿಕೆಟ್‌ ದರ(ತೆರಿಗೆ ಹೊರತುಪಡಿಸಿ) ಜಾರಿಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಆದರೆ, 75 ಅಥವಾ ಅದಕ್ಕಿಂತ ಕಡಿಮೆ ಆಸನಗಳ ಪ್ರೀಮಿಯಂ ಸೌಲಭ್ಯವಿರುವ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳನ್ನು 200 ರು.ಗಳ ಗರಿಷ್ಠ ಟಿಕೆಟ್ ದರ ಮಿತಿಯಿಂದ ಹೊರಗಿಡಲಾಗಿದೆ.

ಮಲ್ಟಿಪ್ಲೆಕ್ಸ್‌ಗಳು ಸೇರಿ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನಕ್ಕೆ ಏಕರೂಪ ಟಿಕೆಟ್‌ ದರ ಜಾರಿಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಜು.15ರಂದು ಕರಡು ನಿಯಮಾವಳಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಕಾಲಮಿತಿಯಲ್ಲಿ ಸಲ್ಲಿಸಲಾದ ಎಲ್ಲಾ ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ನಿಯಮಾವಳಿಗಳನ್ನು ಅಂತಿಮಗೊಳಿಸಿ ಶುಕ್ರವಾರದಿಂದಲೇ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಲಾಗಿದೆ.

ಇದರನ್ವಯ ಇನ್ನು ಮುಂದೆ ಮಲ್ಟಿಪ್ಲೆಕ್ಸ್‌ಗಳು ಒಳಗೊಂಡಂತೆ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನಕ್ಕೆ ಎಲ್ಲಾ ರೀತಿಯ ತೆರಿಗೆಗಳನ್ನು ಹೊರತುಪಡಿಸಿ ಟಿಕೆಟ್‌ ದರ ಗರಿಷ್ಠ ಮಿತಿ 200 ರು.ಗೆ ನಿಗದಿಪಡಿಸಲಾಗಿದೆ.

ಮಲ್ಟಿಪ್ಲೆಕ್ಸ್‌ ಸೇರಿ ಕೆಲ ಚಿತ್ರಮಂದಿರಗಳಲ್ಲಿ ಟಿಕೆಟ್‌ ದರ ಅತ್ಯಂತ ದುಬಾರಿಯಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಧಿವೇಶನದಲ್ಲಿ ಸಹ ಈ ಬಗ್ಗೆ ಅನೇಕ ಸದಸ್ಯರು ಚರ್ಚಿಸಿ ಏಕರೂಪದ ದರ ನಿಗದಿಪಡಿಸುವಂತೆ ಒತ್ತಾಯಿಸಿದ್ದರು. ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರಮಂದಿರಗಳ ಟಿಕೆಟ್‌ ದರವನ್ನು 200 ರು. ನಿಗದಿಗೊಳಿಸುವುದಾಗಿ ಘೋಷಿಸಿದ್ದರು. ಅದರಂತೆ ಟಿಕೆಟ್‌ ದರ 200 ರು. ಮೀರದಂತೆ ಕರ್ನಾಟಕ ಸಿನಿಮಾಗಳು (ನಿಯಂತ್ರಣ) ನಿಯಮಗಳು 2014ಕ್ಕೆ ತಿದ್ದುಪಡಿ ತಂದು ಜಾರಿಗೊಳಿಸಲಾಗಿದೆ.

 

PREV
Read more Articles on

Recommended Stories

ಟಿಕೆಟ್‌ಗೆ ದರ ಮಿತಿ ನಿಗದಿ ಅಡ್ಡ ಪರಿಣಾಮ - ಬಿಗ್‌ ಬಜೆಟ್‌ ಸಿನಿಮಾಗಳ ಕಲೆಕ್ಷನ್‌ಗೆ ಹೊಡೆತ
ದೈಜಿ, ಯುವರ್ ಸಿನ್ಸಿಯರ್ಲೀ ರಾಮ್ ಚಿತ್ರಗಳಲ್ಲಿ ಭಿನ್ನ ಲುಕ್‌ನಲ್ಲಿ ರಮೇಶ್‌