ಸಿನಿವಾರ್ತೆ
ನಟ ಸುದೀಪ್ ಅವರ ಹೊಸ ಹೇರ್ ಸ್ಟೈಲ್ ಸಾಕಷ್ಟು ವೈರಲ್ ಆಗುತ್ತಿದೆ. ಮೊದಲ ಬಾರಿಗೆ ಹೀಗೆ ಕರ್ಲಿ ಹೇರ್ ಸ್ಟೈಲ್‌ನಲ್ಲಿ ಸುದೀಪ್ ಅವರು ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಈ ಹೊಸ ಲುಕ್ಕಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಂದಹಾಗೆ ಸುದೀಪ್ ಅವರು ಹೀಗೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವುದು ಇನ್ನೂ ಹೆಸರಿಡದ ‘ಕಿಚ್ಚ 47’ ಚಿತ್ರಕ್ಕಾಗಿ. ತಮಿಳಿನ ವಿಜಯ್ ಕಾರ್ತಿಕ್ ನಿರ್ದೇಶನದ, ಸತ್ಯಜ್ಯೋತಿ ಫಿಲಂಸ್ ಈ ಚಿತ್ರವು ಈಗ ಶೂಟಿಂಗ್ ಹಂತದಲ್ಲಿದೆ. ಚಿತ್ರೀಕರಣ ಸೆಟ್‌ನಲ್ಲಿ ಸುದೀಪ್ ಅವರ ಫೋಟೋಗಳು ಹೊರ ಬಂದಿದ್ದು, ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ.
ಇನ್ನೂ ಸುದೀಪ್ ಅವರು ಹೀಗೆ ತಮ್ಮ ನಟನೆಯ ಚಿತ್ರಗಳಿಗಾಗಿ ಆಗಾಗ ಹೊಸ ಹೊಸ ಹೇರ್ ಸ್ಟೈಲ್‌ಗಳ ಮೂಲಕ ಸದ್ದು ಮಾಡಿದ್ದುಂಟು. ಈ ಹಿಂದೆ ‘ಹೆಬ್ಬುಲಿ’, ‘ದಿ ವಿಲನ್’, ‘ರಾಜು ಕನ್ನಡ ಮೀಡಿಯಂ’ ಚಿತ್ರಗಳಲ್ಲಿ ತಮ್ಮ ಹೇರ್ ಸ್ಟೈಲ್ ಲುಕ್ಕಿನಿಂದ ಗಮನ ಸೆಳೆದಿದ್ದರು. ಅದರಲ್ಲೂ ‘ಹೆಬ್ಬುಲಿ’ ಚಿತ್ರದ ಕಟ್ಟಿಂಗ್ ಸಖತ್ ಜನಪ್ರಿಯತೆಗೊಂಡಿತ್ತು. ಈಗ ಕರ್ಲಿ ಹೇರ್ ಸ್ಟೈಲ್ ಮೂಲಕ ಮತ್ತೆ ಹೊಸ ಸಂಚಲನ ಮೂಡಿಸಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಅವರು ಮುತ್ತತ್ತಿ ಸತ್ಯರಾಜು ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿಶ್ವಿಕಾ ನಾಯ್ಡು ಇತ್ತೀಚೆಗೆ ಚಿತ್ರಕ್ಕೆ ಜೊತೆ ಆಗಿದ್ದಾರೆ.