‘ಕಿಚ್ಚ’ಬ್ಬಿಸಿದ ಯುದ್ಧ: ತೇಪೆ, ಬೆಣ್ಣೆ ಹಚ್ಚಿದರೂ ನಿಲ್ಲುತ್ತಿಲ್ಲ!

Published : Dec 25, 2025, 05:17 AM IST
Kichcha Sudeep Vijayalakshmi Darshan

ಸಾರಾಂಶ

ಹುಬ್ಬಳ್ಳಿಯಲ್ಲಿ ಆಯೋಜನೆಯಾಗಿದ್ದ ‘ಮಾರ್ಕ್‌’ ಸಿನಿಮಾದ ಬಿಡುಗಡೆ ಪೂರ್ವ ಕಾರ್ಯಕ್ರಮದ ವೇದಿಕೆಯಲ್ಲಿ ನಟ ಕಿಚ್ಚ ಸುದೀಪ್‌ ಅವರು ಘೋಷಿಸಿದ್ದ ‘ಯುದ್ಧ’ದ ವೀರಾವೇಶ ಈಗ ಬೇರೆಯದೇ ಸ್ವರೂಪ ಪಡೆದುಕೊಂಡಿದೆ.

  ಬೆಂಗಳೂರು :  ಹುಬ್ಬಳ್ಳಿಯಲ್ಲಿ ಆಯೋಜನೆಯಾಗಿದ್ದ ‘ಮಾರ್ಕ್‌’ ಸಿನಿಮಾದ ಬಿಡುಗಡೆ ಪೂರ್ವ ಕಾರ್ಯಕ್ರಮದ ವೇದಿಕೆಯಲ್ಲಿ ನಟ ಕಿಚ್ಚ ಸುದೀಪ್‌ ಅವರು ಘೋಷಿಸಿದ್ದ ‘ಯುದ್ಧ’ದ ವೀರಾವೇಶ ಈಗ ಬೇರೆಯದೇ ಸ್ವರೂಪ ಪಡೆದುಕೊಂಡಿದೆ. ‘ನಾವು ಆಡುವ ಮಾತು ಎಲ್ಲಿ ತಟ್ಟಬೇಕೋ ಅಲ್ಲಿಗೆ ತಟ್ಟುತ್ತದೆ’ ಎಂದು ಸುದೀಪ್‌ ಅಂದು ಅಬ್ಬರಿಸಿದ್ದರು. ಅವರ ಮಾತಿನಂತೆಯೇ ಕಿಚ್ಚನ ಮಾತುಗಳು ಯಾರಿಗೆ ತಟ್ಟಬೇಕಿತ್ತೋ ಅವರಿಗೆ ಸರಿಯಾಗಿಯೇ ತಟ್ಟಿವೆ. ಅದಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಯೂ ಬಂದಿದೆ.

ಇದಾದ ಬೆನ್ನಲ್ಲೇ ತಾವು ಆಡಿದ ಯುದ್ಧದ ಮಾತು ಯಾವುದೇ ನಟರ ವಿರುದ್ಧವಲ್ಲ, ಪೈರಸಿ ವಿರುದ್ಧ ಎಂದು ಸುದೀಪ್‌ ತೇಪೆ ಹಚ್ಚುವ ಕೆಲಸವನ್ನೂ ಮಾಡಿದ್ದಾರೆ. ಅಲ್ಲದೆ ಅವರಿಗೆ ಬೆಂಬಲವಾಗಿ ಪ್ರೇಮ್, ರಕ್ಷಿತಾ ಪ್ರೇಮ್, ತರುಣ್‌ ಸುಧೀರ್‌ ಮುಂತಾದ ತಾರೆಯರು ಸಾಲು ಸಾಲಾಗಿ, ಹೌದು ಸುದೀಪ್‌ ಹೇಳಿದ್ದು ಪೈರಸಿ ವಿರುದ್ಧ. ದರ್ಶನ್‌ ವಿರುದ್ಧ ಅಲ್ಲ ಎಂದು ತೇಪೆ ಹಚ್ಚುತ್ತಿದ್ದಾರೆ.

ಇದರ ನಡುವೆ, ಸುದೀಪ್‌ ಅವರ ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ದರ್ಶನ್‌ ಫೋಟೋ ಬಿತ್ತರಿಸಿ ಅಭಿಪ್ರಾಯ ಕೇಳಿದಾಗ, ಅವರಿಗೆ (ದರ್ಶನ್‌) ಒಳ್ಳೆಯದಾಗಲಿ ಎಂದು ಕಮೆಂಟ್‌ ಮಾಡುವ ಮೂಲಕ ವಿವಾದ ತಣ್ಣಗಾಗಿಸಲು ಯತ್ನಿಸಿದ್ದಾರೆ.  

 ಫಲ ಕೊಡುತ್ತಿಲ್ಲ

ಏಕೆಂದರೆ ತಾವು ಯುದ್ಧ ಎಂಬ ಪದ ಬಳಸಿದ್ದು ದರ್ಶನ್‌ ವಿರುದ್ಧ ಅಲ್ಲ ಎಂದು ಸುದೀಪ್‌ ಹೇಳುತ್ತಲೇ ಇದ್ದರೂ, ಯುದ್ಧದ ಮಾತಿಗೆ ಅತ್ಯಂತ ತೀಕ್ಷ್ಣ ರೀತಿಯಲ್ಲಿ ತಿರುಗೇಟು ಕೊಟ್ಟಿದ್ದ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಮಾತ್ರ ತಾವು ಪ್ರತಿಕ್ರಿಯೆ ನೀಡಿದ್ದು ಸುದೀಪ್‌ ಯುದ್ಧದ ಮಾತುಗಳಿಗೆ ಅಲ್ಲ ಎಂದು ಅಪ್ಪಿತಪ್ಪಿಯೂ ಹೇಳುತ್ತಿಲ್ಲ. ತಾವು ಯುದ್ಧ ಎಂಬ ಪದ ಬಳಕೆ ಮಾಡಿದ್ದು ಪೈರಸಿ ವಿರುದ್ಧ ಎಂದು ಸುದೀಪ್‌ ಪದೇ ಪದೇ ಹೇಳುತ್ತಿದ್ದರೂ, ವಿಜಯಲಕ್ಷ್ಮಿ ಆ ಬಗ್ಗೆ ಮಾತಾಡುತ್ತಿಲ್ಲ. ಇದರ ನಡುವೆಯೇ, ಸುದೀಪ್‌ ಹೇಳಿಕೆ, ಅದಕ್ಕೆ ತಾವು ನೀಡಿದ ಉತ್ತರದ ಬಳಿಕ ಅಶ್ಲೀಲವಾಗಿ ಕಮೆಂಟ್‌ ಮಾಡಿದ ಕಿಚ್ಚ ಅಭಿಮಾನಿಗಳು ಎಂದು ಘೋಷಿಸಿಕೊಂಡವರ ವಿರುದ್ಧ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತನ್ಮೂಲಕ ಯುದ್ಧವನ್ನು ಮುಂದುವರಿಸಿದ್ದಾರೆ.

ದರ್ಶನ್‌ ಹಾಗೂ ಸುದೀಪ್‌ ಇಬ್ಬರೂ ಕನ್ನಡ ಚಿತ್ರರಂಗ ಜೋಡೆತ್ತುಗಳು ಎಂದು ಕೆಲವು ತಾರೆಯರು ಬಿಂಬಿಸಿ, ಕದನ ವಿರಾಮಕ್ಕೆ ಯತ್ನಿಸುತ್ತಿದ್ದಾರೆ. ಆದರೆ ಈ ತೇಪೆ ಹಾಕುವ, ಬೆಣ್ಣೆ ಹಚ್ಚುವ ಪ್ರಯತ್ನಗಳು ಕೆಲಸ ಮಾಡುತ್ತಿಲ್ಲ. ಇಬ್ಬರೂ ನಟರ ಅಭಿಮಾನಿಗಳು ಮಾತ್ರ ಗೂಳಿಗಳಂತೆ ಕಾದಾಡುತ್ತಿದ್ದಾರೆ ಎಂದು ಚಿತ್ರರಂಗದವರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಏನಿದು ಯುದ್ಧ?

ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸುದೀಪ್‌, ‘ಸೈಲೆಂಟ್‌ ಆಗಿರುವುದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ ಕೆಲವೊಮ್ಮೆ ನಿಮಗೋಸ್ಕರ ಬಾಯಿ ಮುಚ್ಚಿಕೊಂಡಿದ್ದೆ. ಬಾಯಿ ಇಲ್ಲ ಅಂತಲ್ಲ. ನನ್ನಿಂದಾಗಿ ನಿಮ್ಮ ಮೇಲೆ ಕಲ್ಲು ತೂರಾಟ ನಡೆಯುತ್ತದೆ. ಇವತ್ತು ಹೇಳ್ತಿದ್ದೀನಿ, ತಡೆಯುವಷ್ಟು ತಡೆಯಿರಿ. ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗುತ್ತಿದೆ. ವೇದಿಕೆ ಮೇಲೆ ಹೇಳ್ತೀನಿ ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಮ್ಮ ಮಾತಿಗೆ ನಾವು ಬದ್ಧ’ ಎಂದು ಹೇಳಿದ್ದರು

ವಿಜಯಲಕ್ಷ್ಮಿ ತಿರುಗೇಟು:

ಇದಕ್ಕೆ ತಿರುಗೇಟು ನೀಡಿದ್ದ ದರ್ಶನ್‌ ಪತ್ನಿ, ‘ಕೆಲವೊಬ್ಬರು ದರ್ಶನ್‌ ಎದುರಿಗೆ ಇಲ್ಲದಿದ್ದಾಗ ಅವರ ಬಗ್ಗೆ, ಅಭಿಮಾನಿಗಳ ಬಗ್ಗೆ ವೇದಿಕೆ ಮೇಲೆ, ಚಾನಲ್‌ಗಳಲ್ಲಿ ಏನೇನೋ ಮಾತನಾಡುತ್ತಾರೆ. ದರ್ಶನ್‌ ಇದ್ದಾಗ ಇದೇ ವ್ಯಕ್ತಿಗಳು ಬೆಂಗಳೂರಿನಲ್ಲಿ ಇದ್ದಾರೋ ಮಾಯ ಆಗಿದ್ದಾರೋ ಅಂತಲೇ ಗೊತ್ತಾಗಲ್ಲ. ಇಂಥವರ ಬಗ್ಗೆ ತಲೆಕೆಡಿಸಿಕೊಳ್ಳಬಾರದು’ ಎಂದು ಹೇಳಿದ್ದರು.

ಅದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಹಾಗೂ ಸುದೀಪ್‌ ಅಭಿಮಾನಿಗಳ ನಡುವೆ ಯುದ್ಧವೇ ಆರಂಭವಾಗಿತ್ತು. ಆ ಬಳಿಕ ಸ್ಪಷ್ಟನೆ ಕೊಟ್ಟಿದ್ದ ಸುದೀಪ್‌, ತಾವು ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಆಡಿದ್ದ ಯುದ್ಧದ ಮಾತು ದರ್ಶನ್‌ ಸೇರಿ ಯಾವುದೋ ನಟರ ವಿರುದ್ಧವಲ್ಲ. ಪೈರಸಿ ವಿರುದ್ಧ ಎಂದು ತೇಪೆ ಹಾಕಿದ್ದರು. ಆದರೆ ಅವರು ಹುಬ್ಬಳ್ಳಿ ಕಾರ್ಯಕ್ರಮದ ಭಾಷಣದಲ್ಲಿ ಪೈರಸಿ ಎಂಬ ಪದವನ್ನೇ ಬಳಸಿರಲಿಲ್ಲ. ಇದನ್ನು ಸುದ್ದಿಗಾರರು ಪ್ರಶ್ನಿಸಿದಾಗ ‘ಪೈರಸಿ ಪದ ಬಳಸುವುದು ಬಿಡುವುದು ನನ್ನಿಷ್ಟ’ ಎಂದು ವಿಚಿತ್ರ ಹೇಳಿಕೆ ನೀಡಿದ್ದರು.

ಆದರೆ ಅವರು ಸಾರಿದ ಯುದ್ಧವನ್ನು ವಿಜಯಲಕ್ಷ್ಮಿ ಮುಂದುವರಿಸಿದ್ದಾರೆ. ಇದಕ್ಕೆ ತೇಪೆ, ಬೆಣ್ಣೆ ಹಚ್ಚುವ ಪ್ರಯತ್ನಗಳು ಭರದಿಂದ ನಡೆಯುತ್ತಿದ್ದರೂ ನಿಲ್ಲುತ್ತಿಲ್ಲ.

- ⁠ವಿಜಯಲಕ್ಷ್ಮಿ ತಿರುಗೇಟು ಕೊಟ್ಟಿದ್ದು ಸುದೀಪಗೆ ಅಲ್ಲ: ಸಾಲುಸಾಲು ನಟರ ತೇಪೆ

- ಆದರೆ ನಾನು ತಿರುಗೇಟು ಕೊಟ್ಟಿದ್ದು ಸುದೀಪ್‌ಗಲ್ಲ ಅಂತ ಹೇಳ್ತಿಲ್ಲ ದರ್ಶನ್‌ ಪತ್ನಿ

- ಕಿಚ್ಚ ಅಭಿಮಾನಿಗಳ ವಿರುದ್ಧ ದೂರು ನೀಡಿ ಯುದ್ಧ ಮುಂದುವರಿಸಿದ ವಿಜಯಲಕ್ಷ್ಮಿ

- ಸುದೀಪ್‌ ಹೇಳಿಕೆ ಪೈರಸಿ ವಿರುದ್ಧ ಎಂಬ ತಾರೆಗಳ ಮಾತನ್ನು ನಂಬೋರೇ ಇಲ್ಲ

- ⁠ಸುದೀಪ್ - ದರ್ಶನ್ ಜೋಡೆತ್ತು ಎಂಬ ಕನ್ನಡ ತಾರೆಗಳ ಬೆಣ್ಣೆಗೆ ಬೆಲೆ ಸಿಗುತ್ತಿಲ್ಲ

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಕಾಂತಾರಾ ಹಿಂದಿಕ್ಕಿದ ಧುರಂಧರ್‌: 876 ಕೋಟಿ ಸಂಪಾದನೆಯ ದಾಖಲೆ
ಕಿಚ್ಚನ ವೀರಾವೇಶ ದರ್ಶನ್ ವಿರುದ್ಧ ಅಲ್ಲ, ಪೈರಸಿ ಬಗ್ಗೆ!