ಹೇಗಿದೆ ಕೊತ್ತಲವಾಡಿ ಸಿನಿಮಾ ?

Published : Aug 02, 2025, 03:05 PM ISTUpdated : Aug 02, 2025, 03:06 PM IST
Kothalavadi Movie

ಸಾರಾಂಶ

ಕಣ್ಣೀರ ಕಾರ್ಮೋಡ, ದುರಾಸೆಯ ಅಟ್ಟಹಾಸ, ಕೊತ್ತಲವಾಡಿ ಎಂಬ ಮಂಡ್ಯದ ಒಂದೂರು. ಬಡತನ, ಉಳ್ಳವರ ಹಿಂಸೆ, ಬಡ್ಡಿದಾಹಕ್ಕೆ ಅರೆಜೀವವಾಗಿ ಬದುಕುತ್ತಿದ್ದ ಜನರ ಕತೆ

ಚಿತ್ರ: ಕೊತ್ತಲವಾಡಿ

ತಾರಾಗಣ: ಪೃಥ್ವಿ ಅಂಬಾರ್‌, ಗೋಪಾಲಕೃಷ್ಣ ದೇಶಪಾಂಡೆ, ಕಾವ್ಯಾ ಶೈವ, ರಾಜೇಶ್‌ ನಟರಂಗ

ರೇಟಿಂಗ್‌ : 3

ಪ್ರಿಯಾ ಕೆರ್ವಾಶೆ

ಕೊತ್ತಲವಾಡಿ ಎಂಬ ಮಂಡ್ಯದ ಒಂದೂರು. ಬಡತನ, ಉಳ್ಳವರ ಹಿಂಸೆ, ಬಡ್ಡಿದಾಹಕ್ಕೆ ಅರೆಜೀವವಾಗಿ ಬದುಕುತ್ತಿದ್ದ ಜನ. ಒಂದಿನ ಅವರ ಕಣ್ಣಲ್ಲೂ ಬೆಳಕು ಕಂಡಿತು. ಆದರೆ ಅದು ಬೆಳಕಲ್ಲ, ತಮ್ಮನ್ನು ಸುಡುವ ಬೆಂಕಿ ಅಂತ ಗೊತ್ತಾದಾಗ ಹೊತ್ತಾಗಿತ್ತು.

ಇದನ್ನು ಕೊತ್ತಲವಾಡಿ ಸಿನಿಮಾದ ಒನ್‌ಲೈನ್‌ ಎನ್ನಬಹುದು.

90ರ ದಶಕದ ಸಿನಿಮಾಗಳನ್ನು ನೆನಪಿಸುವ ಚಿತ್ರ. ಒಂದೂರು. ಅಲ್ಲೊಬ್ಬ ಅನಾಥ ಯುವಕ ಮೋಹನ. ಗುಜರಿ ಅಂಗಡಿ ಬಾಬಣ್ಣ ಈತನ ಆಪ್ತ. ಆರಂಭದಲ್ಲಿ ಊರವರ ಬಗ್ಗೆ ಕಾಳಜಿ, ಮೋಹನನ ಬಗ್ಗೆ ಪ್ರೀತಿ ತೋರಿಸುವ ಬಾಬಣ್ಣನಿಗೆ ಯಾವಾಗ ಹಣದ ರುಚಿ ಹತ್ತಿತೋ ಆತನ ನರಿ ಗುಣ ಮೇಲುಗೈ ಸಾಧಿಸುತ್ತದೆ. ಅದರ ಪರಿಣಾಮಗಳೇನು ಅನ್ನುವುದು ಸಿನಿಮಾ ಕಥೆಯ ಹೈಲೈಟ್‌. ಇಡೀ ಸಿನಿಮಾದ ಹೈಲೈಟ್‌ ಬಾಬಣ್ಣನಾಗಿ ಗೋಪಾಲಕೃಷ್ಣ ದೇಶಪಾಂಡೆ ನಟನೆ. ಪೃಥ್ವಿ ಅಂಬಾರ್‌ ಆ್ಯಕ್ಷನ್‌ ಸಿನಿಮಾಕ್ಕೂ ಸೈ ಅಂತ ತೋರಿಸಿದ್ದಾರೆ.

ಚಿತ್ರದಲ್ಲಿ ಕೆಲವು ಗೊಂದಲಗಳಿವೆ. ಸಣ್ಣ ಗ್ರಾಮದಂತೆ ತೋರಿಸಿರುವ ಕೊತ್ತಲವಾಡಿ ಏಕಾಏಕಿ ವಿಧಾನಸಭಾ ಕ್ಷೇತ್ರವಾಗಿ ಬದಲಾಗುತ್ತದೆ. ಎಸ್‌ಪಿ ಪರಶುರಾಮ್‌ ಎಂಟ್ರಿಯ ಬಳಿಕ ಅದು ಜಿಲ್ಲಾಕೇಂದ್ರವಾಗುತ್ತದೆ. ಇಲ್ಲಿ ಸ್ಪಷ್ಟತೆ ಬೇಕಿತ್ತು. ಮರಳು ಮಾಫಿಯಾವನ್ನು ತೋರಿಸಿದರೂ ಅದರ ಗಂಭೀರತೆ ಪ್ರೇಕ್ಷಕನಿಗೆ ತಟ್ಟಿಲ್ಲ.

ಸಿನಿಮಾವನ್ನು ಅಳುವಿನ ಕಾರ್ಮೋಡ ಕವಿದಿದೆ. ಅದನ್ನು ಕೊಂಚ ಸರಿಸಬಹುದಿತ್ತು. ಸಿನಿಮಾಟೋಗ್ರಫಿ ಸೊಗಸಾಗಿದೆ. ಆದರೆ ಕೆಲವೊಂದು ಸನ್ನಿವೇಶದಲ್ಲಿ ಅತಿ ಚಂದ ಮಾಡಲು ಹೋಗಿ ದೃಶ್ಯದ ಗಂಭೀರತೆಗೆ ಪೆಟ್ಟು ಬಿದ್ದಿದೆ. ಒಂದೆರಡು ಕಡೆ ಅನಾವಶ್ಯಕ ಹಾಡುಗಳನ್ನು ತುರುಕಿದ್ದು ಸಿನಿಮಾದ ಗುಣಮಟ್ಟಕ್ಕೆ ಹೊಡೆತ ನೀಡಿದೆ.

ನಿರ್ಮಾಪಕರು ದುಡ್ಡು ಹಾಕಿರುವುದೇನೋ ಗೊತ್ತಾಗುತ್ತದೆ, ಆದರೆ ಅದಕ್ಕೆ ನ್ಯಾಯ ಸಿಕ್ಕಿದೆಯಾ ಅನ್ನುವ ಬಗ್ಗೆ ಆತ್ಮಾವಲೋಕನ ಮಾಡಿದರೆ ಒಳ್ಳೆಯದು.

 

PREV
Read more Articles on

Recommended Stories

ಸಾವಿನ ಹಾಡಿಯಲ್ಲಿ ನವಿಲು ಕುಣಿತ : ಎಲ್ಟು ಮುತ್ತಾ
ಸಂಕೀರ್ಣ ಹೆಣಿಗೆಯ ಸೂಕ್ಷ್ಮ ಸೈಕಲಾಜಿಕಲ್ ಥ್ರಿಲ್ಲರ್ ವೃತ್ತ