ಹೊಸಬರ ಸಂತೈಸುವ ಬೆಚ್ಚಗಿನ ಕೈಯೊಂದು ಇಲ್ಲವಾದ ಸಂಕಟ! ಅಪ್ಪು ಇಲ್ಲದ ನಾಲ್ಕು ವರ್ಷಗಳು

Published : Oct 30, 2025, 02:32 PM IST
puneeth rajkumar

ಸಾರಾಂಶ

4 ವರ್ಷಗಳಲ್ಲಿ ಚಿತ್ರರಂಗ ಕಳೆದುಕೊಂಡಿದ್ದು ಏನೆಂದರೆ ಎಲ್ಲರನ್ನೂ ಸಂತೈಸುತ್ತಿದ್ದ ಒಂದು ಬೆಚ್ಚಗಿನ ಕೈಯನ್ನು. ಹೊಸಬರ ಬೆನ್ನಿಗೆ ನಿಂತು ಪೊರೆಯುತ್ತಿದ್ದ ಒಂದು ವಿಶ್ವಾಸದ ಖನಿಯನ್ನು. ಹೊಸಬರ ಸಂತೈಸುವ ಬೆಚ್ಚಗಿನ ಕೈಯೊಂದು ಇಲ್ಲವಾದ ಸಂಕಟ! ಅಪ್ಪು ಇಲ್ಲದ ನಾಲ್ಕು ವರ್ಷಗಳು

 ಸಿನಿವಾರ್ತೆ

ಈ ನಾಲ್ಕು ವರ್ಷಗಳಲ್ಲಿ ಚಿತ್ರರಂಗ ಕಳೆದುಕೊಂಡಿದ್ದು ಏನೆಂದರೆ ಎಲ್ಲರನ್ನೂ ಸಂತೈಸುತ್ತಿದ್ದ ಒಂದು ಬೆಚ್ಚಗಿನ ಕೈಯನ್ನು. ಹೊಸಬರ ಬೆನ್ನಿಗೆ ನಿಂತು ಪೊರೆಯುತ್ತಿದ್ದ ಒಂದು ವಿಶ್ವಾಸದ ಖನಿಯನ್ನು. ಅವರು ಚಿತ್ರರಂಗದ ಪಾಲಿಗೆ ಬಿಟ್ಟುಹೋಗಿದ್ದು ಯಾರೂ ತುಂಬಲಾಗದ ಒಂದು ಖಾಲಿ ಖಾಲಿ ತಬ್ಬಲಿತನವನ್ನು.

ಈ ನಾಲ್ಕು ವಾರ್ಷಗಳಲ್ಲಿ ಬಹಳಷ್ಟು ಸಿನಿಮಾಗಳು ಬಂದು ಹೋಗಿವೆ. ಕೆಲವರು ಗೆದ್ದಿದ್ದಾರೆ. ಹಲವರು ಸೋತಿದ್ದಾರೆ. ಕಾಲ ಸರಿದುಹೋಗಿದೆ. ಆದರೆ ಸಂಕಟವೊಂದು ಹಾಗೇ ಉಳಿದುಬಿಟ್ಟಿದೆ.

ಈ ನಾಲ್ಕು ವರ್ಷದಲ್ಲಿ ಚಿತ್ರರಂಗಕ್ಕೆ ಆದ ನಷ್ಟವೇನು?

1. ಒಳ್ಳೆಯತನ. ಅಪ್ಪು ತನ್ನ ಸುತ್ತ ಕೋಟೆ ಕಟ್ಟಿಕೊಳ್ಳಲಿಲ್ಲ. ನಿರ್ದೇಶಕರಿಗೆ ಪಾಠ ಮಾಡಲಿಲ್ಲ. ನಿರ್ಮಾಪಕರಿಗೆ ತೊಂದರೆ ನೀಡಲಿಲ್ಲ. ತಾನು ಒಳ್ಳೆಯವನು ಎಂದು ಹೇಳಿಕೊಳ್ಳಲಿಲ್ಲ. ಅವರು ಒಳ್ಳೆಯತನದ ಸಾಕಾರಮೂರ್ತಿಯಾಗಿದ್ದರು. ಎಲ್ಲೇ ಹೋದರೂ ಅಲ್ಲೊಂದು ಪ್ರೀತಿಯ ಸೆಳೆಯನ್ನು ಬಿಟ್ಟುಬರುತ್ತಿದ್ದರು. ಹಣ ಸಹಾಯ ಮಾಡಿದರು. ಪ್ರೀತಿ ತೋರಿದರು. ಮತ್ತೊಬ್ಬ ಸೂಪರ್‌ಸ್ಟಾರ್ ಮಾಡಲಾಗದಂತಹ ಕೆಲಸಗಳನ್ನು ಮಾಡಿಹೋದರು. ಮತ್ತೆ ಅಂಥಾ ಒಳ್ಳೆಯತನ ಎಲ್ಲಿ ಕಾಣುವುದು.

2. ಹೊಸಬರ ಧೈರ್ಯ. ಯಾರಿಲ್ಲದಿದ್ದರೂ ಅಪ್ಪು ಇದ್ದಾರೆ ಎಂಬ ಧೈರ್ಯ ಇತ್ತು ಹೊಸಬರಿಗೆ. ಅವರು ಒಳ್ಳೆಯ ಸಿನಿಮಾ ಮಾಡಿದಾಗ ಬೆನ್ನು ತಡವುತ್ತಿದ್ದರು. ಹುಮ್ಮಸ್ಸು ತುಂಬುತ್ತಿದ್ದರು. ಮನಸ್ಫೂರ್ತಿಯಾಗಿ ಹರಸುತ್ತಿದ್ದರು. ಹೊಸ ತಂಡಗಳಿಗೆ ಅಂಥದ್ದೊಂದು ವಿಶ್ವಾಸ ತುಂಬುವ ಶಕ್ತಿದೀಪ ನಂದಿಹೋಯಿತು. ಈ ನಾಲ್ಕು ವರ್ಷಗಳಲ್ಲಿ ಅದೆಷ್ಟೋ ಹೊಸಬರಿಗೆ ಅಪ್ಪುವಿನ ಧೈರ್ಯ ಇಲ್ಲವಾಯಿತು.

ಕೆಟ್ಟದ್ದು ಬಯಸದ ತುಂಬು ನಗು

3. ಕೆಟ್ಟದ್ದು ಬಯಸದ ತುಂಬು ನಗು. ಅಪ್ಪು ಯಾವುದೇ ಕಾರ್ಯಕ್ರಮಕ್ಕೆ ಬಂದರೂ ಅವರ ಮೊಗದಲ್ಲೊಂದು ತುಂಬು ನಗು ಇರುತ್ತಿತ್ತು. ಬಾಯಿ ತುಂಬಾ ನಗುತ್ತಿದ್ದರು. ಖುಷಿಯಿಂದ ಎರಡು ಸ್ಟೆಪ್ಪು ಹಾಕುತ್ತಿದ್ದರು. ಅವರಿದ್ದಲ್ಲಿ ಒಂದು ಪಾಸಿಟಿವ್‌ ವೈಬ್‌ ಇರುತ್ತಿತ್ತು. ಅವರು ದೇವಲೋಕದಿಂದ ಬಂದಂತೆ ವರ್ತಿಸುತ್ತಿರಲಿಲ್ಲ. ಒಮ್ಮೊಮ್ಮೆ ತಾನೇ ಡ್ರೈವ್ ಮಾಡಿಕೊಂಡು ಬರುತ್ತಿದ್ದರು. ಅಂಥಾ ಸೂಪರ್‌ಸ್ಟಾರ್‌ ಮತ್ತೆ ದೊರೆಯಲು ಸಾಧ್ಯವೇ.

4. ಆತ್ಮೀಯ ಸಾಮೀಪ್ಯ. ಪುನೀತ್‌ ಯಾರಿಗೂ ನಂಬರ್‌ ಕೊಡುವುದಿಲ್ಲ ಅನ್ನುತ್ತಿರಲಿಲ್ಲ. ಸಿನಿಮಾ ವಲಯದ ಬಹಳಷ್ಟು ಮಂದಿಯ ಹತ್ತಿರ ಅವರ ನಂಬರ್‌ ಇರುತ್ತಿತ್ತು. ಅವರ ಬಳಿ ನೇರವಾಗಿ ಮಾತನಾಡಬಹುದಿತ್ತು. ಯಾವುದಕ್ಕೂ ಇಲ್ಲ ಅಂತ ಹೇಳುತ್ತಿರಲಿಲ್ಲ. ಅವರು ಹೋದ ಮೇಲೆ ಅಂಥದ್ದೊಂದು ಬಾಂಧವ್ಯ ಸಾಧ್ಯವಾಗಬಹುದಾ ಎಂಬ ಅನುಮಾನವಷ್ಟೇ ಉಳಿದಿದೆ.

5. ಶುದ್ಧ ವ್ಯಕ್ತಿತ್ವ. ಕಷ್ಟದಲ್ಲಿ ದೂರ ನಿಲ್ಲಲಿಲ್ಲ. ಕೆಟ್ಟ ಮಾತು ಆಡಲಿಲ್ಲ. ಇನ್ನೊಬ್ಬರಿಗೆ ನೋವಾಗುವಂತೆ ನಡೆದುಕೊಳ್ಳಲಿಲ್ಲ. ತಮ್ಮ ಬದುಕಿನಲ್ಲಿ ಇದ್ದವರು, ದೂರದಲ್ಲಿದ್ದವರು ಎಲ್ಲರ ಹೃದಯದಲ್ಲೊಂದು ಜಾಗ ಮಾಡಿ ಹೊರಟುಬಿಟ್ಟರು. ಹಾಗಾಗಿಯೇ ಅವರು ಒಂದು ಅಳಿಯದ ನೋವಾಗಿ ಉಳಿದುಹೋದರು.

PREV
Read more Articles on

Recommended Stories

ಯಶ್‌ ಟಾಕ್ಸಿಕ್‌ ಚಿತ್ರೀಕರಣ ಪೂರ್ಣ : ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿರುವ ಬಹುನಿರೀಕ್ಷಿತ ಸಿನಿಮಾ
ಬಿಗ್‌ಬಿ ಕಾಲಿಗೆ ಬಿದ್ದಿದ್ದ ಗಾಯಕ ದಿಲ್ಜಿತ್‌ಗೆ ಖಲಿಸ್ತಾನಿಗಳ ಬೆದರಿಕೆ