ಪ್ರೇಮದ ಅಸಂಖ್ಯ ಅವಸ್ಥಾಂತರಗಳ ನಿರೂಪಣೆ

KannadaprabhaNewsNetwork |  
Published : Oct 07, 2023, 02:13 AM ISTUpdated : Oct 07, 2023, 12:24 PM IST
Love Movie Reveiw

ಸಾರಾಂಶ

ಹರೆಯದ ಹುಡುಗರ ಕಷ್ಟ ಸುಖ, ಹರೆಯದ ಹುಡುಗಿಯ ಹಂಬಲವನ್ನು ದಾಟಿಸುತ್ತಲೇ ಬದುಕು ದಯಪಾಲಿಸುವ ತಾಪತ್ರಯಗಳನ್ನೂ ಚೂರು ಚೂರೇ ಹೇಳುತ್ತಾ ಹೋಗುತ್ತಾರೆ.

ಚಿತ್ರ: ಲವ್ 
ನಿರ್ದೇಶನ: ಮಹೇಶ ಸಿ ಅಮ್ಮಳ್ಳಿದೊಡ್ಡಿ 
ತಾರಾಗಣ: ಪ್ರಜಯ್ ಜಯರಾಮ್, ವೃಷಾ ಪಾಟೀಲ್, ಪ್ರಭಾಕರ್ ಕುಂದರ್, ಸತೀಶ್ ಕಾಂತಾರ, ಉಮೇಶ್ ಶ್ರೀಕಾಂತ್ ತೇಲಿ 
ರೇಟಿಂಗ್: 3 

ರಾಜೇಶ್ ಶೆಟ್ಟಿ 

ಪ್ರೇಮದ ಆರಂಭದ ನವಿರುತನ, ನಿರೀಕ್ಷೆಗೆ ತಕ್ಕಂತೆ ಎದುರಾಗುವ ಅಡ್ಡಿ ಆತಂಕ, ಬದುಕು ಒಡ್ಡುವ ವಿರಹ, ಸಂದರ್ಭಗಳು ಕರುಣಿಸುವ ಒತ್ತಡ, ಕೊನೆಗೆ ಇದ್ದಕ್ಕಿದ್ದಂತೆ ಅಚ್ಚರಿಗೊಳಿಸುವ ಅನಿರೀಕ್ಷಿತ ಕ್ಲೈಮ್ಯಾಕ್ಸ್ ಎಲ್ಲವನ್ನೂ ಹೊಂದಿರುವ ವಿಭಿನ್ನ ಸಿನಿಮಾ ಇದು. ನಿರ್ದೇಶಕರು ಇಲ್ಲಿ ಪ್ರೇಮ ಕತೆ ಹೇಳುತ್ತಲೇ, ಪ್ರೇಮದ ಅಸಂಖ್ಯಾತ ಅವಸ್ಥಾಂತರಗಳನ್ನೂ ಹೇಳುತ್ತಾರೆ. ಹಸಿರು ಹಿನ್ನೆಲೆಯಲ್ಲಿ ಹಿತವಾಗಿ, ಮೃದುವಾಗಿ ಪ್ರೇಮ ಕತೆ ಆರಂಭಿಸುತ್ತಾರೆ. ಹರೆಯದ ಹುಡುಗರ ಕಷ್ಟ ಸುಖ, ಹರೆಯದ ಹುಡುಗಿಯ ಹಂಬಲವನ್ನು ದಾಟಿಸುತ್ತಲೇ ಬದುಕು ದಯಪಾಲಿಸುವ ತಾಪತ್ರಯಗಳನ್ನೂ ಚೂರು ಚೂರೇ ಹೇಳುತ್ತಾ ಹೋಗುತ್ತಾರೆ. 

ದ್ವಿತೀಯಾರ್ಧದಲ್ಲಿ ಅರ್ಧ ದಾರಿ ಕಳೆದ ನಂತರ ಅವರು ಕತೆಯನ್ನು ಅನೂಹ್ಯವಾದ ದಾರಿಗೆ ಹೊರಳಿಸುತ್ತಾರೆ. ಇದೇ ಈ ಸಿನಿಮಾದ ವಿಶೇಷತೆ, ವಿಭಿನ್ನತೆ. ಪ್ರೇಮದ ಹಲವು ಸ್ಥಿತಿಗಳನ್ನು ಶೋಧಿಸುವ ಕೆಲಸವನ್ನು ನಿರ್ದೇಶಕರು ಇಲ್ಲಿ ಮಾಡಿದ್ದಾರೆ. ಎರಡು ಮಾದರಿಯ ಚಿತ್ರಕತೆಯನ್ನು ಹೆಣೆದಂತೆ ಹೊಸತೊಂದು ದಾರಿಯಲ್ಲಿ ಚಲಿಸುವ ಯತ್ನ ಮಾಡಿದ್ದಾರೆ. ಹಾಗಾಗಿ ಅವರ ಪ್ರಯತ್ನ ಶ್ಲಾಘನೀಯ. ಹೊಸ ಹಾದಿಯಲ್ಲಿ ಚಲಿಸುವಾಗ ಕಥಾ ಹರಿವಿಗೆ ಕೊಂಚ ಹೊಳಪು ಸಿಕ್ಕಿದ್ದರೆ ಚೆನ್ನಾಗಿತ್ತು ಅನ್ನಿಸುವ ಹೊತ್ತಿಗೆ ಬರುವ ಅಂತ್ಯ ಬೆರಗಾಗಿಸುತ್ತದೆ. ಪ್ರೇಮದ ಸ್ಥಿತ್ಯಂತರದ ಅನಾವರಣ ಕೊಂಚ ಬೇಗ ಆಗಬೇಕಿತ್ತು ಅನ್ನಿಸಲೂಬಹುದು. ಚಿತ್ರದಲ್ಲಿ ನಟಿಸಿರುವ ಪ್ರಜಯ್, ವೃಷಾ ಜೋಡಿ ಮುದ್ದಾಗಿ ಕಾಣಿಸುತ್ತಾರೆ. 

ಸಹ ಪಾತ್ರಧಾರಿಗಳೂ ಕತೆಗೆ ತಕ್ಕಹಾಗೆ ಹೊಂದಿಕೊಂಡಿದ್ದಾರೆ. ಇದೊಂದು ವಿಭಿನ್ನ ಪ್ರಯತ್ನ. ಪ್ರೇಮ-ವಿರಹ-ಕಾತುರ-ದ್ವೇಷವನ್ನು ಜೋಡಿಸಿ ಹೆಣೆದಿರುವ ವಿಶಿಷ್ಟ ಕಥನ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌