ಬಡವ್ರ ಮಕ್ಳೂ ಬೆಳಿಬೇಕು ಕಣ್ರಯ್ಯ ಸಿನಿಮಾಕ್ಕೆ ಮುಹೂರ್ತ

KannadaprabhaNewsNetwork |  
Published : Apr 07, 2024, 01:48 AM ISTUpdated : Apr 07, 2024, 06:21 AM IST
ಬಡವ್ರ ಮಕ್ಕಳು ಬೆಳೀಬೇಕು  | Kannada Prabha

ಸಾರಾಂಶ

ಬಡವ್ರ ಮಕ್ಳು ಬೆಳೀಬೇಕು ಕಣ್ರಯ್ಯಾ ಎಂಬ ಡಾಲಿ ಧನಂಜಯ ಅವರ ಮಾತನ್ನೇ ಸಿನಿಮಾದ ಶೀರ್ಷಿಕೆಯನ್ನಾಗಿ ಮಾಡಿದ್ದಾರೆ ಮಂಜುಕವಿ. ಈ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆಯಿತು.

 ಸಿನಿವಾರ್ತೆ

ಡಾಲಿ ಧನಂಜಯ ಅವರ ಜನಪ್ರಿಯ ಹೇಳಿಕೆ ‘ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ’ ಈಗ ಸಿನಿಮಾವಾಗುತ್ತಿದೆ.

ಮಂಜು ಕವಿ ನಿರ್ದೇಶನದ ಈ ಚಿತ್ರದ ಮುಹೂರ್ತ ಇತ್ತೀಚೆಗೆ ರೇಣುಕಾಂಬ ಥಿಯೇಟರ್‌ನಲ್ಲಿ ನೆರವೇರಿತು. ಸಿ.ಎಸ್ ವೆಂಕಟೇಶ್ ಚೊಚ್ಚಲ ನಿರ್ಮಾಣದ ಚಿತ್ರವಿದು.

ಬೆಂಗಳೂರು ಪೂರ್ವ ವಲಯದ ಡಿಸಿಪಿ ದೇವರಾಜ್ ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ.ಹರೀಶ್ ಸೇರಿದಂತೆ ಅನೇಕ ಗಣ್ಯರು ಶುಭ ಹಾರೈಸಿದರು.

ನಿರ್ಮಾಪಕ ಸಿ.ಎಸ್ ವೆಂಕಟೇಶ್, ‘ನಾನು ಕೋಲಾರ ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೆ. ಚಿತ್ರರಂಗದ ಸಾಕಷ್ಟು ಗಣ್ಯರು ನನಗೆ ಪರಿಚಯ. ಎಷ್ಟೋ ಸ್ನೇಹಿತರು ಚಿತ್ರ ನಿರ್ಮಾಣ ಮಾಡುವಂತೆ ಹೇಳುತ್ತಿದ್ದರು. ಈಗ ಕಾಲ ಕೂಡಿ ಬಂದಿದೆ. ಡಾಲಿ ಅವರು ಹೇಳಿದ ಮಾತೇ ಈ ಚಿತ್ರ ನಿರ್ಮಾಣಕ್ಕೆ ಸ್ಪೂರ್ತಿ. ಮಂಜುಕವಿ ಅವರು ಮಾಡಿಕೊಂಡಿರುವ ಕಥೆ ತುಂಬಾ ಚೆನ್ನಾಗಿದೆ. ನಾನು ಕೂಡ ಬಡತನದಿಂದಲೇ ಬಂದಿರುವವನು. ಹಾಗಾಗಿ ಈ ಕಥೆ ತುಂಬಾ ಇಷ್ಟವಾಯಿತು’ ಎಂದರು.

ನಿರ್ದೇಶಕ ಮಂಜುಕವಿ ಮಾತನಾಡಿ, ‘ಡಾಲಿ ಅವರು ಹೇಳಿದ ಮಾತನ್ನು ಸ್ಫೂರ್ತಿಯಾಗಿಟ್ಟುಕೊಂಡು ಈ ಚಿತ್ರದ ಕಥೆ ಬರೆದಿದ್ದೇನೆ. ಬಡ ಕುಟುಂಬದಲ್ಲಿ ಹುಟ್ಟಿದ ಮಕ್ಕಳಿಗೆ ಎಷ್ಟೇ ಕಲೆ ಇದ್ದರೂ, ಚೆನ್ನಾಗಿ ಓದುವ ಹಂಬಲವಿದ್ದರೂ ಅವರನ್ನು ಬೆಳೆಸಲು ಯಾರು ಮುಂದೆ ಬರುವುದಿಲ್ಲ. ಅವರಲ್ಲಿರುವ ಪ್ರತಿಭೆ ಹಾಗೆ ನಶಿಸಿ ಹೋಗುತ್ತದೆ. ಹಾಗಾಗಬಾರದು ಪ್ರತಿಭೆಯುಳ್ಳ ಬಡಮಕ್ಕಳ ಕೀರ್ತಿ ಬೆಳಗಬೇಕು ಎಂಬ ಆಶಯ ಚಿತ್ರದ್ದು. ಬೆಂಗಳೂರು ಹಾಗೂ ಮೈಸೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ’ ಎಂದರು.

ಸುಚೇಂದ್ರ ಪ್ರಸಾದ್ ಹಾಗೂ ಸಂಗೀತ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಮಕ್ಕಳ ಪಾತ್ರದಲ್ಲಿ ರಾಜವರ್ಧನ್, ಲಾವಣ್ಯ, ವೈಭವಿ ಅಭಿನಯಿಸುತ್ತಿದ್ದಾರೆ. ಫ್ರೆಂಡ್ಸ್ ವಾಸು, ಮೂಗೂರು ಸುರೇಶ್, ಚಂದ್ರಪ್ರಭ, ಚೈತ್ರಾ ಕೊಟ್ಟೂರು, ಮಂಜು ಪಾವಗಡ, ಚಿದಾನಂದ್, ಜಗದೀಶ್ ಕೊಪ್ಪ, ಶಿವಾರೆಡ್ಡಿ, ಸನತ್, ವಿನೋದ್ ತಾರಾಬಳಗದಲ್ಲಿದ್ದಾರೆ. ವಿನು ಮನಸು ಹಿನ್ನೆಲೆ ಸಂಗೀತವಿದೆ. ರೇಣುಕುಮಾರ್ ಛಾಯಾಗ್ರಹಣವಿದೆ.

PREV

Recommended Stories

ಸೆ. 18ರಿಂದ ಎರಡು ದಿನ ಬೆಂಗಳೂರು ಮಾಹೆಯಲ್ಲಿ ಅಲೆ ಸಾಹಿತ್ಯ ಉತ್ಸವ
ಬುದ್ಧಿವಂತ ನಟ, ನಿರ್ದೇಶಕ ಉಪೇಂದ್ರಗೇ ಸೈಬರ್‌ ಟೋಪಿ!